ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನ
- ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಐಪಿಎಲ್-2026 ಉದ್ಘಾಟನಾ ಪಂದ್ಯ
- ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಕಂಡ ಆರ್‌ಸಿಬಿ
- ಪಂದ್ಯದ ಆರಂಭಕ್ಕೂ ಮುನ್ನವೇ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನಗೆ ಕ್ಯಾಮೆರಾಮ್ಯಾನ್ ಕಿರಿಕಿರಿ
ಮುಂಬೈ: ನಿನ್ನೆ (ಜ.09) ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮಹಿಳಾ ಪ್ರೀಮಿಯರ್ ಲೀಗ್-2026ರ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಮೆಗಾ ಟೂರ್ನಿಯಲ್ಲಿ ಶುಭಾರಂಭವನ್ನು ಕಂಡಿದೆ. ಈ ಪಂದ್ಯದ ಆರಂಭಕ್ಕೂ ಮುನ್ನವೇ ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ( Smriti Mandhana ) ಅವರಿಗೆ ಕ್ಯಾಮೆರಾಮ್ಯಾನ್ ಕಿರಿಕಿರಿ ಉಂಟು ಮಾಡಿದರು. ಈ ವೇಳೆ ಸ್ಮೃತಿ ಕೂಡ ಅಸಮಾಧಾನ ಹೊರಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಮೃತಿ ಅವರು ಮೈದಾನದಲ್ಲಿ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಓರ್ವ ಕ್ಯಾಮೆರಾಮ್ಯಾನ್, ಕ್ಯಾಮೆರಾ ಹಿಡಿದುಕೊಂಡು ವಿಡಿಯೋ ರೆಕಾರ್ಡ್ ಮಾಡುತ್ತಾ ಸ್ಮೃತಿಯ ಹತ್ತಿರ ಬರುತ್ತಾನೆ. ಈ ಸಂದರ್ಭದಲ್ಲಿ ಸ್ಮೃತಿ ಅವರು ಥ್ರೋಡೌನ್‌ಗಳನ್ನು ಎದುರಿಸುತ್ತಿರುತ್ತಾರೆ. ಕ್ಯಾಮೆರಾಮ್ಯಾನ್ ತನ್ನ ಹತ್ತಿರ ಬಂದಿದ್ದನ್ನು ನೋಡಿದ ಸ್ಮೃತಿ, ಸ್ವಲ್ಪ ಮುಜುಗರಕ್ಕೀಡಾದರು. ಬಳಿಕ ಇದೇನಿದು ಎನ್ನುವಂತೆ ತಮ್ಮ ಕೈಗಳಿಂದ ಸನ್ನೆ ಮಾಡುತ್ತಾ ಅಸಮಾಧಾನ ಹೊರಹಾಕಿದರು. ಅದನ್ನು ಅರಿತುಕೊಂಡು ಕೂಡಲೇ ಕ್ಯಾಮೆರಾಮ್ಯಾನ್ ಅಲ್ಲಿಂದ ಹೊರಟು ಹೋದರು.
ನಿನ್ನೆ ನಡೆದ ಪಂದ್ಯದಲ್ಲಿ ಸ್ಮೃತಿ ಮಂಧಾನ 13 ಎಸೆತಗಳನ್ನು ಎದುರಿಸಿ 4 ಬೌಂಡರಿಗಳ ಸಹಾಯದಿಂದ 18 ರನ್ ಗಳಿಸಿದರು. ಈ ರೋಚಕ ಪಂದ್ಯದಲ್ಲಿ ಮಂಧಾನ ನೇತೃತ್ವದ ಆರ್‌ಸಿಬಿ ಪಡೆ ಕೊನೆಯ ಎಸೆತದಲ್ಲಿ ಜಯಗಳಿಸಿತು. ಪಂದ್ಯದ ನಂತರ ಮಾತನಾಡಿದ ಮಂಧಾನ, ಕೊನೆಯ ಎಸೆತದವರೆಗೂ ರೋಚಕತೆ ಹಿಡಿದಿಟ್ಟುಕೊಂಡಿದ್ದ ಪಂದ್ಯದಲ್ಲಿ ಜಯ ಸಾಧಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಈ ಸೀಸನ್ನ ಮೊದಲ ಪಂದ್ಯವೇ ರೋಮಾಂಚಕವಾಗಿತ್ತು. ಆರ್‌ಸಿಬಿ ಇಂತಹ ಪಂದ್ಯಗಳಿಗೆ ಹೆಸರುವಾಸಿಯಾಗಿದೆ. ನಮ್ಮ ತಂಡ ಎರಡು ಅಂಕಗಳನ್ನು ಗೆದ್ದಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಸ್ಮೃತಿ ಹೇಳಿದರು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತು. ಸಜೀವನ್ ಸಜ್ಜನ್ (45 ರನ್, 25 ಎಸೆತ, 7 ಬೌಂಡರಿ, 1 ಸಿಕ್ಸರ್), ನಿಕೋಲಾ ಕ್ಯಾರಿ (40 ರನ್, 29 ಎಸೆತ, 4 ಬೌಂಡರಿ) ಮತ್ತು ಜಿ ಕಮಲಿನಿ (32 ರನ್, 28 ಎಸೆತ, 5 ಬೌಂಡರಿ) ಮುಂಬೈ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್ಗೆ ವಿಕೆಟ್ ಒಪ್ಪಿಸಿದರು. ಆರ್‌ಸಿಬಿ ಬೌಲರ್‌ಗಳಲ್ಲಿ ನಾಡಿನ್ ಡಿ ಕ್ಲರ್ಕ್ ನಾಲ್ಕು ವಿಕೆಟ್ ಪಡೆದರು. ಲಾರೆನ್ ಬೆಲ್ ಮತ್ತು ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ನಾಡಿನ್ ಡಿ ಕ್ಲರ್ಕ್ (ಅಜೇಯ 63 ರನ್, 44 ಎಸೆತ, 7 ಬೌಂಡರಿ, 2 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳ ಗುರಿಯನ್ನು ತಲುಪಿತು. ಗ್ರೇಸ್ ಹ್ಯಾರಿಸ್ (25), ಅರುಂಧತಿ ರೆಡ್ಡಿ (20) ಮತ್ತು ಸ್ಮೃತಿ ಮಂಧಾನ (18) ಉಪಯುಕ್ತ ಕಾಣಿಕೆ ನೀಡಿದರು. ಮುಂಬೈ ಬೌಲರ್‌ಗಳಲ್ಲಿ, ನಿಕೋಲಾ ಕ್ಯಾರಿ ಮತ್ತು ಅಮೆಲಿಯಾ ಕೆರ್ ತಲಾ ಎರಡು ವಿಕೆಟ್ ಪಡೆದರು, (ಏಜೆನ್ಸೀಸ್).