ಅದಿಲ್ಲ ಅಂದ್ರೆ ಆಟದಲ್ಲಿ ಮಜಾನೇ ಇರಲ್ಲ... ಟೀಕಾಕಾರರಿಗೆ ರೋಹಿತ್​ ಶರ್ಮ ಖಡಕ್​ ತಿರುಗೇಟು! Rohit Sharma  
ಕ್ರಿಕೆಟ್

ಅದಿಲ್ಲ ಅಂದ್ರೆ ಆಟದಲ್ಲಿ ಮಜಾನೇ ಇರಲ್ಲ... ಟೀಕಾಕಾರರಿಗೆ ರೋಹಿತ್​ ಶರ್ಮ ಖಡಕ್​ ತಿರುಗೇಟು! Rohit Sharma

ಪ್ರಮುಖ ಮುಖ್ಯಾಂಶಗಳು

  • ನಿವೃತ್ತಿ ವದಂತಿಗಳಿಗೆ ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ಖಡಕ್ ಉತ್ತರ
  • ಇಂಗ್ಲೆಂಡ್ ಸರಣಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಸುದ್ದಿ ತಳ್ಳಿಹಾಕಿದ ರೋಹಿತ್
  • ರೋಹಿತ್ ಶರ್ಮಾ ನಿವೃತ್ತಿ ಬರಿ ವದಂತಿ ಬಿಸಿಸಿಐ ಮತ್ತು ಶುಭಮನ್ ಗಿಲ್ ಸ್ಪಷ್ಟನೆ
  • 2027 ವಿಶ್ವಕಪ್ ಗೆಲ್ಲುವುದೇ ಮುಂದಿನ ಗುರಿ ಎಂದ ಭಾರತದ ಅನುಭವಿ ಬ್ಯಾಟರ್
ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮ ( Rohit Sharma ) ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಕುರಿತು ಹಬ್ಬಿರುವ ವದಂತಿಗಳಿಗೆ ಸ್ವತಃ ಅವರೇ ಪೂರ್ಣ ವಿರಾಮ ಹಾಕಿದ್ದಾರೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 11 ಮತ್ತು 26 ರನ್ ಗಳಿಸಿ ವಿಫಲರಾಗಿದ್ದ ರೋಹಿತ್, ಮೂರನೇ ಪಂದ್ಯದ ನಂತರ ನಿವೃತ್ತಿ ಘೋಷಿಸಲಿದ್ದಾರೆ ಅಥವಾ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂಬ ವರದಿಗಳು ಕ್ರೀಡಾ ಜಗತ್ತಿನಲ್ಲಿ ತೀವ್ರ ಸಂಚಲನ ಮೂಡಿಸಿದ್ದವು. ಆದರೆ, ಅಂತಿಮ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸುವ ಮೂಲಕ ಭರ್ಜರಿ ಫಾರ್ಮ್‌ಗೆ ಮರಳಿದ ಈ ಅನುಭವಿ ಬಲಗೈ ಬ್ಯಾಟರ್, ಬಿಸಿಸಿಐಗೆ ನೀಡಿದ ಸಂದರ್ಶನದಲ್ಲಿ ತಮ್ಮ ನಿವೃತ್ತಿಯ ಕುರಿತಾದ ಎಲ್ಲ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ 27 ರನ್‌ಗಳ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತಾದರೂ, ರೋಹಿತ್ ಅವರ ಸೆಂಚುರಿ ಇನ್ನಿಂಗ್ಸ್ ಮತ್ತು ನಿವೃತ್ತಿ ಕುರಿತ ಇದೀಗ ರೋಹಿತ್​ ಶರ್ಮ ನೀಡಿರುವ ಸ್ಪಷ್ಟನೆ ಅಭಿಮಾನಿಗಳಿಗೆ ದೊಡ್ಡ ಸಮಾಧಾನ ತಂದಿದೆ.
ನಿವೃತ್ತಿಯ ಕುರಿತಾದ ವದಂತಿಗಳಿಗೆ ಬಿಸಿಸಿಐ ಕಾರ್ಯದರ್ಶಿ ದೇವಾಜಿತ್ ಸೈಕಿಯಾ ಮೊದಲಿಗೆ ತೆರೆ ಎಳೆದಿದ್ದು, ಇಂಗ್ಲೆಂಡ್ ಸರಣಿಯ ನಂತರವೂ ರೋಹಿತ್ ಶರ್ಮ ಟೀಮ್ ಇಂಡಿಯಾ ಪರ ಆಡುವುದನ್ನು ಮುಂದುವರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದರ ಬೆನ್ನಲ್ಲೇ ಸ್ವತಃ ರೋಹಿತ್ ಶರ್ಮ ಅವರೇ ಈ ಎಲ್ಲ ವರದಿಗಳನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಈಗಾಗಲೇ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್, ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಸಕ್ರಿಯರಾಗಿದ್ದು, ತಮ್ಮ ಭವಿಷ್ಯದ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಹೊರಗಿನ ವದಂತಿಗಳು ಅಥವಾ ಟೀಕೆಗಳು ತಮಗೆ ಎಂದಿಗೂ ತೊಂದರೆ ನೀಡುವುದಿಲ್ಲ, ಏಕೆಂದರೆ ವೃತ್ತಿಜೀವನದ ಆರಂಭದಿಂದಲೂ ಇದನ್ನು ಎದುರಿಸುವುದು ಅಭ್ಯಾಸವಾಗಿದೆ ಎಂದು ರೋಹಿತ್ ಹೇಳಿದ್ದಾರೆ. ಬ್ಯಾಟ್‌ನಿಂದ ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ. ಮೈದಾನಕ್ಕೆ ಇಳಿದು ದೇಶವನ್ನು ಪ್ರತಿನಿಧಿಸುವುದು, ಪದಾರ್ಪಣೆ ಮಾಡಿದ ದಿನದಿಂದಲೂ ನನಗೆ ವಹಿಸಿದ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಿಸುತ್ತಿದ್ದೇನೆ. ನಾನು ಆಡುವವರೆಗೂ ಈ ತರಹದ ಗದ್ದಲಗಳು ಇರುತ್ತವೆ, ಅದು ನನಗೆ ಮುಖ್ಯವಲ್ಲ. ಮೈದಾನದಲ್ಲಿ ನಾನು ಏನು ಮಾಡುತ್ತೇನೆ ಮತ್ತು ತಂಡದ ಗೆಲುವಿಗೆ ಹೇಗೆ ಕೊಡುಗೆ ನೀಡುತ್ತೇನೆ ಎಂಬುದಷ್ಟೇ ನನ್ನ ಏಕೈಕ ಗಮನ ಎಂದು ರೋಹಿತ್ ಶರ್ಮ ಖಡಕ್ ಆಗಿ ತಿಳಿಸಿದ್ದಾರೆ.
ಹೊರಗಡೆ ಯಾವುದೇ ಸದ್ದು ಅಥವಾ ವದಂತಿಗಳು ಇಲ್ಲದಿದ್ದರೆ ಆಟದಲ್ಲಿ ಮಜಾನೇ ಇರುವುದಿಲ್ಲ. ಮೈದಾನದ ಒಳಗಡೆ ಆಡುವುದು ನನ್ನ ಕೆಲಸವಾದರೆ, ಹೊರಗಡೆ ಮಾತನಾಡುವುದು ಅವರ ಕೆಲಸ, ನಾನು ವಿಷಯಗಳನ್ನು ಹೀಗೆಯೇ ನೋಡುತ್ತೇನೆ ಎಂದು ರೋಹಿತ್ ತಮ್ಮದೇ ಶೈಲಿಯಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಅಂದಹಾಗೆ, ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 110 ಎಸೆತಗಳಲ್ಲಿ 17 ಸಿಕ್ಸರ್ ಹಾಗೂ 5 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 138 ರನ್ ಸಿಡಿಸಿ ಅಬ್ಬರಿಸಿದರು.
ಕೊನೇ ಕ್ಷಣದಲ್ಲಿ ಮಾಡಿದ ಆ ಒಂದು ತಪ್ಪೇ ನಮ್ಮ ಸೋಲಿಗೆ ಕಾರಣವಾಯಿತು ಎಂದ ನಾಯಕ ಶುಭಮಾನ್​ ಗಿಲ್​! Shubman Gill
ಇದಕ್ಕೂ ಮುನ್ನ ಭಾರತ ತಂಡದ ನಾಯಕ ಶುಭಮಾನ್ ಗಿಲ್ ಕೂಡ ರೋಹಿತ್ ಶರ್ಮ ನಿವೃತ್ತಿಯ ಕುರಿತಾದ ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದ ಸೋಲಿನ ನಂತರ ರೋಹಿತ್ ಅವರ ಭವಿಷ್ಯದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ತಂಡದೊಳಗೆ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಗಿಲ್ ಸ್ಪಷ್ಟಪಡಿಸಿದರು. ರೋಹಿತ್ ಈ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ, ಇದೆಲ್ಲವೂ ಕೇವಲ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಅಷ್ಟೇ. ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ವಿಷಯವಾಗಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಗಿಲ್ ತಿಳಿಸಿದ್ದರು.
ಇದಲ್ಲದೆ, 2027ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಮ್ಮ ಇಚ್ಛೆಯನ್ನು ರೋಹಿತ್ ಈ ಹಿಂದೆ ಐಸಿಸಿ ಕಾರ್ಯಕ್ರಮವೊಂದರಲ್ಲಿ ವ್ಯಕ್ತಪಡಿಸಿದ್ದರು. ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಕನಸು. ನಾನು ಬೆಳೆದಿದ್ದೇ 50 ಓವರ್‌ಗಳ ವಿಶ್ವಕಪ್ ನೋಡಿಕೊಂಡು, ಆಗ ಟಿ20 ಅಥವಾ ಐಪಿಎಲ್ ಇರಲಿಲ್ಲ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಮಹಾಸಮರವೇ ಕ್ರಿಕೆಟ್‌ನ ಅತ್ಯುನ್ನತ ಹಂತವಾಗಿತ್ತು. ಹಾಗಾಗಿ, ಆ ಒಂದು ಟ್ರೋಫಿ ಗೆಲ್ಲಲು ನನ್ನ ಸಂಪೂರ್ಣ ಶಕ್ತಿ ಮತ್ತು ಸಾಮರ್ಥ್ಯವನ್ನು ಹಾಕಿ ಶ್ರಮಿಸುತ್ತೇನೆ ಎಂದು ರೋಹಿತ್​ ಶರ್ಮಾ ಹೇಳಿದ್ದರು. ಹೀಗಾಗಿ, ಸದ್ಯ ರೋಹಿತ್​ ನಿವೃತ್ತಿ ದೂರದ ಮಾತಾಗಿದೆ, (ಏಜೆನ್ಸೀಸ್​).