ಇಶಾನ್​ ಬೆಸ್ಟ್​ ಇನಿಂಗ್ಸ್​: ಸನ್​ರೈಸರ್ಸ್​ ಸಹಾಯಕ ಕೋಚ್​ ಫ್ರಾಂಕ್ಲಿನ್​ ಪ್ರಶಂಸೆ 
ಕ್ರಿಕೆಟ್

ಇಶಾನ್​ ಬೆಸ್ಟ್​ ಇನಿಂಗ್ಸ್​: ಸನ್​ರೈಸರ್ಸ್​ ಸಹಾಯಕ ಕೋಚ್​ ಫ್ರಾಂಕ್ಲಿನ್​ ಪ್ರಶಂಸೆ

ಚೆನ್ನೈ: ಸಿಎಸ್​ಕೆ ವಿರುದ್ಧ 181 ರನ್​ಗಳ ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್​ ವೇಳೆ 70 ರನ್​ (47 ಎಸೆತ, 7 ಬೌಂಡರಿ, 3 ಸಿಕ್ಸರ್​) ಸಿಡಿಸಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್ (Ishan Kishan)​ ಅವರನ್ನು ಸನ್​ರೈಸರ್ಸ್​ ತಂಡದ ಸಹಾಯಕ ಕೋಚ್​ ಜೇಮ್ಸ್​ ಫ್ರಾಂಕ್ಲಿನ್​ ಶ್ಲಾಘಿಸಿದ್ದಾರೆ. "ಇದು ಹಾಲಿ ಆವೃತ್ತಿಯಲ್ಲಿ ಇಶಾನ್​ ಕಿಶನ್​ ಆಡಿದ ಬೆಸ್ಟ್​ ಇನಿಂಗ್ಸ್​' ಎಂದವರು ಬಣ್ಣಿಸಿದ್ದಾರೆ.
"ಇಶಾನ್​ ಕಿಶನ್​ ಇತ್ತೀಚೆಗೆ ಭಾರತ ಪರ ಅತ್ಯುತ್ತಮ ಆಟವಾಡಿದ್ದಾರೆ. ಅದೇ ಲಯವನ್ನು ಅವರು ಐಪಿಎಲ್​ಗೂ ತಂದಿದ್ದಾರೆ. ಅವರ ಈ ಇನಿಂಗ್ಸ್​ ಅತ್ಯಂತ ಪಕ್ವತೆಯಿಂದ ಕೂಡಿತ್ತು. ಅವರು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅದರಂತೆ ಆಡಿದರು' ಎಂದು ಫ್ರಾಂಕ್ಲಿನ್​ ಸನ್​ರೈಸರ್ಸ್​ ತಂಡದ 5 ವಿಕೆಟ್​ ಗೆಲುವಿನ ಬಳಿಕ ಹೇಳಿದರು.

ಇಂಪ್ಯಾಕ್ಟ್​ ಪ್ಲೇಯರ್​ ಟ್ರಾವಿಸ್​ ಹೆಡ್​ (6) ಬೇಗನೆ ಔಟಾದರೆ, ಅಭಿಷೇಕ್​ ಶರ್ಮ (26) ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಆಗ ಇಶಾನ್​ ಕಿಶನ್​ 3ನೇ ವಿಕೆಟ್​ಗೆ ಹೆನ್ರಿಕ್​ ಕ್ಲಾಸೆನ್​ (47) ಜತೆ 41 ಎಸೆತಗಳಲ್ಲಿ 75 ರನ್​ ಸೇರಿಸಿ ಚೇಸಿಂಗ್​ಗೆ ಬಲ ತುಂಬಿದರು. ಗೆಲುವಿಗೆ ಕೇವಲ 6 ರನ್​ ಬೇಕಿದ್ದಾಗ ಕಿಶನ್​ ಔಟಾದರು. ಕೊನೆಗೆ 4 ರನ್​ ಬೇಕಿದ್ದಾಗ ಕನ್ನಡಿಗ ಆರ್​. ಸ್ಮರಣ್​ (5) ಬೌಂಡರಿ ಬಾರಿಸಿ, ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಸನ್​ರೈಸರ್ಸ್​ ಗೆಲ್ಲಿಸಿದರು. ಇದರೊಂದಿಗೆ ಸನ್​ರೈಸರ್ಸ್​ ಮಾತ್ರವಲ್ಲದೆ, ಗುಜರಾತ್​ ಟೈಟಾನ್ಸ್​ಗೂ ಪ್ಲೇಆಫ್​ ಟಿಕೆಟ್​ ಖಚಿತವಾಯಿತು.