ಈ ಒಂದು ಕಾರಣಕ್ಕೆ ನಾನು ಐಪಿಎಲ್‌ಗೆ ವಿದಾಯ ಹೇಳಿದೆ: ಭಾವುಕರಾಗಿ ಕಣ್ಣೀರಿಟ್ಟ ರವಿಚಂದ್ರನ್ ಅಶ್ವಿನ್! Ravichandran Ashwin
- ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್
- ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯಲ್ಲಿ ಅತ್ಯಂತ ಕೆಟ್ಟ ಆರಂಭ ಕಂಡ ಸಿಎಸ್‌ಕೆ
- ಐಪಿಎಲ್ನಲ್ಲಿ ಚೆನ್ನೈ ತಂಡದ ಕಳಪೆ ಪ್ರದರ್ಶನವನ್ನು ಕಂಡು ಭಾವುಕರಾದ ಮಾಜಿ ಆಟಗಾರ ಅಶ್ವಿನ್
- ಐಪಿಎಲ್‌ನಿಂದ ತಾವು ನಿವೃತ್ತಿ ಘೋಷಿಸಿದರ ಬಗ್ಗೆ ಮಾತನಾಡುವಾಗ ಭಾವುಕರಾದ ಸ್ಪಿನ್ ಮಾಂತ್ರಿಕ
Ravichandran Ashwin : ಇಂಡಿಯನ್ ಪ್ರೀಮಿಯರ್ ಲೀಗ್ ( IPL ) ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ( CSK ) ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯಲ್ಲಿ ಅತ್ಯಂತ ಕೆಟ್ಟ ಆರಂಭವನ್ನು ಕಂಡಿದೆ. ಈವರೆಗೂ ಮೂರು ಪಂದ್ಯಗಳನ್ನು ಆಡಿರುವ ಸಿಎಸ್‌ಕೆ ಮೂರರಲ್ಲೂ ಸೋಲುಂಡಿದೆ. ಈ ಸೀಸನ್ನಿಂದ ಆರಂಭಿಕ ಆಟಗಾರನಾಗಿ ಸಿಎಸ್‌ಕೆ ತಂಡ ಸೇರಿಕೊಂಡಿರುವ ಸಂಜು ಸ್ಯಾಮ್ಸನ್, ಒಂದೇ ಒಂದು ಪಂದ್ಯದಲ್ಲಿ ಎರಡಂಕಿಯನ್ನು ದಾಟಿಲ್ಲ. ಇದರ ಮಧ್ಯೆ, ಭಾರತದ ಮಾಜಿ ಆಟಗಾರ ಆರ್. ಅಶ್ವಿನ್ ತಮ್ಮ ನಿವೃತ್ತಿಗೆ ಕಾರಣವಾದ ಸಂದರ್ಭಗಳು ಮತ್ತು ಚೆನ್ನೈ ತಂಡದಲ್ಲಿನ ಅನುಭವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಅಶ್ವಿನ್ ಅವರು ತಮ್ಮ ಐಪಿಎಲ್ ವೃತ್ತಿಜೀವನವನ್ನು ಸಿಎಸ್‌ಕೆ ಜೊತೆ ಆರಂಭಿಸಿದರು. ಸಿಎಸ್‌ಕೆ ತಂಡದಲ್ಲಿರುವಾಗಲೇ ನಿವೃತ್ತಿ ಘೋಷಣೆ ಮಾಡಿದರು. ಇನ್ನೂ ಒಂದು ಅಥವಾ ಎರಡು ಸೀಸನ್‌ಗಳನ್ನು ಆಡಲು ಬಯಸಿದ್ದರು. ಆದರೆ, ಸಿಎಸ್‌ಕೆ ತಂಡದಲ್ಲಿದ್ದಾಗ ಎದುರಿಸಿದ "ಮಾನಸಿಕ ಸಂಕಟ" ಮತ್ತು "ನೋವಿನ ಹಂತ"ದಿಂದಾಗಿ ಐಪಿಎಲ್‌ನಿಂದ ಬೇಗನೆ ನಿವೃತ್ತಿ ಪಡೆಯಬೇಕಾಯಿತು ಎಂದು ಬಹಿರಂಗಪಡಿಸಿದ್ದಾರೆ. ಅಶ್ವಿನ್ 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತು ಕಳೆದ ವರ್ಷ ಐಪಿಎಲ್‌ಗೆ ವಿದಾಯ ಹೇಳಿದರು.
ತಮ್ಮ ಯೂಟ್ಯೂಬ್ ಶೋ 'ಆಶ್ ಕಿ ಬಾತ್'ನಲ್ಲಿ ಮಾತನಾಡಿದ ಅವರು, ಫ್ರಾಂಚೈಸಿಯು ತನ್ನ ಭವಿಷ್ಯದ ಬಗ್ಗೆ ಗೊಂದಲಕ್ಕೊಳಗಾಗಬಾರದು ಎಂಬ ಕಾರಣಕ್ಕೆ ತಾವೇ ಸ್ವತಃ ಹೊರಬರಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ವೈಯಕ್ತಿಕವಾಗಿ ಮತ್ತಷ್ಟು ಕಾಲ ಆಡುವ ಸಾಮರ್ಥ್ಯವಿದ್ದರೂ, ಮಾನಸಿಕವಾಗಿ ಆಟದ ಕಡೆಗೆ ಗಮನಹರಿಸಲು ಸಾಧ್ಯವಾಗದ ಕಾರಣ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾಗಿ ಅಶ್ವಿನ್ ಹೇಳಿದ್ದಾರೆ.
ಮನೆಯಂಗಳದಲ್ಲಿ ನಿರಾಸೆ
ಅಶ್ವಿನ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಸಿಎಸ್‌ಕೆ ಮೂಲಕವೇ ಆರಂಭಿಸಿದ್ದರು. ಆದರೆ, 2025ರ ಸೀಸನ್‌ನಲ್ಲಿ ತಂಡಕ್ಕೆ ಮರಳಿದ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಆ ಸೀಸನ್‌ನ 14 ಪಂದ್ಯಗಳಲ್ಲಿ ಕೇವಲ 9 ಪಂದ್ಯಗಳಲ್ಲಿ ಮಾತ್ರ ಅವರಿಗೆ ಆಡುವ ಅವಕಾಶ ನೀಡಲಾಗಿತ್ತು. ಈ ಬಗ್ಗೆ ಮ್ಯಾನೇಜ್‌ಮೆಂಟ್‌ನಿಂದ ಸ್ಪಷ್ಟತೆ ಸಿಗದಿದ್ದದ್ದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಿಎಸ್‌ಕೆ ತಂಡದ ಸದ್ಯದ ಸ್ಥಿತಿ
ಕಳೆದ ಸೀಸನ್‌ನಲ್ಲಿ ಅಂಕಪಟ್ಟಿಯ ತಳಭಾಗದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಬಾರಿಯೂ ಸಂಕಷ್ಟದಲ್ಲಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ತಂಡವು ಈಗಾಗಲೇ ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದ್ದು, ಲಯ ಕಂಡುಕೊಳ್ಳಲು ಹೆಣಗಾಡುತ್ತಿದೆ. ಚೆನ್ನೈ ತಂಡದ ಇಂದಿನ ಸ್ಥಿತಿಯನ್ನು ನೆನೆದು ಭಾವುಕರಾದ ಅಶ್ವಿನ್ ಕಣ್ಣೀರಾಕಿದರು.
ಇದೇ ಸಮಯದಲ್ಲಿ ಚೆನ್ನೈ ತಂಡದ ಮೂರನೇ ಪಂದ್ಯದ ಬಗ್ಗೆ ಮಾತನಾಡಿದ ಅಶ್ವಿನ್, ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲಬೇಕು ಎಂದು ನಾನು ಭಾವಿಸಿದ್ದೆ. ಏಕೆಂದರೆ, ಅವರ ಬಳಿ ಆ ಶಕ್ತಿ ಇದೆ. ಆದರೆ, ಸಿಎಸ್‌ಕೆ ಮೇಲೆ ನನಗೆ ಹೆಚ್ಚಿನ ಭರವಸೆ ಇತ್ತು. ಕಾರಣ ಕಳೆದ ಪಂದ್ಯದಲ್ಲಿ ಆಗಿರುವ ಸುಧಾರಣೆ. ಆದರೆ, ಆರ್‌ಸಿಬಿ ಆಡಿದ ರೀತಿ ಎಲ್ಲರಿಗೂ ಎಚ್ಚರಿಕೆ. ಆಟಗಾರರ ಹರಾಜಿನಲ್ಲಿ ಸಿಎಸ್‌ಕೆ ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು ಎಂದು ಅಶ್ವಿನ್ ಹೇಳಿದರು, (ಏಜೆನ್ಸೀಸ್).