ಐಪಿಎಲ್ ದಿನಗಳನ್ನು ನೆನಪಿಸಿಕೊಂಡ ಶೋಯೆಬ್ ಅಖ್ತರ್
ಇಸ್ಲಾಮಾಬಾದ್: ಕ್ರಿಕೆಟ್ ಮೈದಾನದಲ್ಲಿ ತನ್ನ ಮಾರಕ ಬೌಲಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳ ಎದೆಗಳಲ್ಲಿ ನಡುಕ ಹುಟ್ಟಿಸುತ್ತಿದ್ದ ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ಎಂದರೆ ಅದು ಶೋಯೆಬ್ ಅಖ್ತರ್ (Shoaib Akhtar). ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ರಾವಲ್ಪಿಂಡಿ ಎಕ್ಸ್ಪ್ರೆಸ್, ಈಗ ತಮ್ಮ ಹಳೆಯ ದಿನಗಳ ಮಧುರ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.
ಇತ್ತೀಚಿನ ಪಾಡ್ಕ್ಯಾಸ್ಟ್ವೊಂದರಲ್ಲಿ ಮಾತನಾಡುತ್ತಾ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಿಕ ದಿನಗಳಲ್ಲಿ ಮುಂಬೈನಲ್ಲಿ ಕಳೆದ ಸುವರ್ಣ ಕಾಲವನ್ನು ಮೆಲುಕು ಹಾಕಿದ್ದಾರೆ. ಬಾಲಿವುಡ್ ಅಂಗಳದೊಂದಿಗಿನ ಅವರ ನಂಟು ಮತ್ತು ಸಲ್ಮಾನ್ ಖಾನ್ ಕುರಿತು ಅವರು ಆಡಿರುವ ಮಾತುಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಐಪಿಎಲ್ ಪಾರ್ಟಿ, ರಹಸ್ಯ ನಟಿ ಮತ್ತು 'ಮನ್ನತ್'!
2008ರಲ್ಲಿ ನಡೆದ ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿ ಶೋಯೆಬ್ ಅಖ್ತರ್ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪರ ಕಣಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಅವರಿಗೆ ಉತ್ತಮ ನಂಟು ಬೆಳೆದಿತ್ತು. ಪಾಡ್‌ಕ್ಯಾಸ್ಟ್‌ನಲ್ಲಿ ಆ ಅಂದಿನ ಒಂದು ಮಜವಾದ ಘಟನೆಯನ್ನು ಹಂಚಿಕೊಂಡಿರುವ ಅಖ್ತರ್, ಐಪಿಎಲ್ ಪಾರ್ಟಿಯೊಂದರ ನಂತರ ನಡೆದ ರೋಚಕ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಪಾರ್ಟಿ ಮುಗಿದ ಬಳಿಕ ತಾವೊಬ್ಬ ಬಾಲಿವುಡ್ ನಟಿಯನ್ನು ಅವರ ಮನೆಯ ಬಳಿ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾಗಿ ಅಖ್ತರ್ ತಿಳಿಸಿದ್ದಾರೆ. ನಾವು ಐಪಿಎಲ್ ಪಾರ್ಟಿ ಮುಗಿಸಿ ಬಂದೆವು, ಬಳಿಕ ನಾನು ಆ ನಟಿಯನ್ನು ಅವರ ಮನೆಗೆ ಡ್ರಾಪ್ ಮಾಡಿದೆ. ಅವರು ಮನೆಗೆ ತಲುಪಿದ ಮೇಲೆ ನನಗೆ ಫೋನ್ ಮಾಡಿ ಸುರಕ್ಷಿತವಾಗಿರುವುದಾಗಿ ತಿಳಿಸಿದರು.
ಆಮೇಲೆ ನಾನು ಶಾರುಖ್ ಖಾನ್ ಅವರ 'ಮನ್ನತ್' ಮನೆಗೆ ಹೋದೆ" ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಆ ನಟಿ ಯಾರೆಂಬುದನ್ನು ಮಾತ್ರ ಅಖ್ತರ್ ಗೌಪ್ಯವಾಗಿಟ್ಟಿದ್ದು, ಅವರ ನಡುವೆ ತುಂಬಾನೇ ಒಳ್ಳೆಯ ಸ್ನೇಹವಿತ್ತು ಎಂದು ಹೇಳಿದ್ದಾರೆ.
ನಾನು ಸಲ್ಮಾನ್ ತರಾನೇ ಕಾಣ್ತೀನಿ, ಆದ್ರೆ ಅವ್ರೇ ಗ್ರೇಟ್!
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಾ ಅಖ್ತರ್ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಅವರ ಸರಳತೆ ಮತ್ತು ದಾನ ನೀಡುವ ಗುಣ ತನ್ನನ್ನು ತುಂಬಾ ಪ್ರಭಾವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
"ದೇಹದಾರ್ಢ್ಯ ಮತ್ತು ಲುಕ್ ವಿಷಯದಲ್ಲಿ ನಾನು ಸಲ್ಮಾನ್ ಖಾನ್ ತರಾನೇ ಕಾಣ್ತೀನಿ. ಆದ್ರೆ, ವ್ಯಕ್ತಿತ್ವದ ವಿಷಯದಲ್ಲಿ ಸಲ್ಮಾನ್ ನನಗಿಂತ ತುಂಬಾ ಉತ್ತಮ ಮನುಷ್ಯ. ಅವರ ಮುಂದೆ ನಾನು ಏನೂ ಅಲ್ಲ. ಅವರು ತುಂಬಾ ಕರುಣಾಮಯಿ. ಸಲ್ಮಾನ್ ಪ್ರತಿದಿನ ಎಷ್ಟೊಂದು ದಾನ ಧರ್ಮಗಳನ್ನು ಮಾಡುತ್ತಾರೆ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಾರೆ ಎಂದು ಸಲ್ಮಾನ್ ದೊಡ್ಡತನವನ್ನು ಕೊಂಡಾಡಿದ್ದಾರೆ.
ಭಾರತದಲ್ಲಿ ಸಿಕ್ಕ ಅಪಾರ ಪ್ರೀತಿ
ಭಾರತ ಮತ್ತು ಪಾಕಿಸ್ತಾನದ ನಡುವೆ ಇಂದಿನಂತೆ ಉದ್ವಿಗ್ನತೆ ಇಲ್ಲದೆ, ಸೌಹಾರ್ದಯುತ ವಾತಾವರಣವಿದ್ದ ಆ ದಿನಗಳಲ್ಲಿ ಮುಂಬೈನಲ್ಲಿ ತಮಗೆ ಸಿಕ್ಕ ಆತಿಥ್ಯವನ್ನು ಅಖ್ತರ್ ಪ್ರೀತಿಯಿಂದ ನೆನಪಿಸಿಕೊಂಡಿದ್ದಾರೆ. ಕ್ರಿಕೆಟ್ ಗಡಿಯಾಚೆಗೂ ತಮಗೆ ಸಿಕ್ಕ ಸ್ನೇಹಿತರು ಮತ್ತು ಬಾಲಿವುಡ್ ಸ್ಟಾರ್ಸ್‌ಗಳ ಜೊತೆಗಿನ ಒಡನಾಟ ತಮ್ಮ ಜೀವನದ ಮರೆಯಲಾರದ ಅನುಭವ ಎಂದು ಅವರು ತಿಳಿಸಿದ್ದಾರೆ, (ಏಜನ್ಸೀಸ್).