ಮಾಜಿ ಸಹ-ಆಟಗಾರ ಗುರುಶರಣ್ ಸಹಾಯ ನೆನೆದ ಸಚಿನ್ ತೆಂಡುಲ್ಕರ್
ಮುಂಬೈ: ಸಚಿನ್ ತೆಂಡುಲ್ಕರ್ (Sachin Tendulkar) 1989ರ ಇರಾನಿ ಕಪ್ ಪಂದ್ಯದಲ್ಲಿ ದೆಹಲಿ ವಿರುದ್ಧ ಶೇಷ ಭಾರತ ಪರ ಶತಕ ಸಿಡಿಸಿದ ಸಾಹಸವು ಭಾರತ ತಂಡವನ್ನು ಪ್ರವೇಶಿಸಲು ಸಹಾಯ ಮಾಡಿತ್ತು. ಆದರೆ ಆ ಪಂದ್ಯದಲ್ಲಿ ಗುರುಶರಣ್ ಸಿಂಗ್ (Gursharan Singh) ಎಂಬ ಸಹ-ಆಟಗಾರ, ಕೈಬೆರಳು ಮೂಳೆಮುರಿತದ ನಡುವೆಯೂ ಬ್ಯಾಟಿಂಗ್ಗೆ ಇಳಿದು 16 ವರ್ಷದ ಸಚಿನ್ಗೆ ಶತಕ ಪೂರೈಸಲು ನೆರವಾಗದಿದ್ದರೆ ಅವರು ಅಷ್ಟು ಬೇಗನೆ ಭಾರತ ತಂಡ ಪ್ರವೇಶಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ.
ಗುರುಶರಣ್ ಅವರ ಆ ಸಹಾಯವನ್ನು ಸಚಿನ್ ತೆಂಡುಲ್ಕರ್ ಮಂಗಳವಾರ ಸಮಾರಂಭವೊಂದರಲ್ಲಿ ಮೆಲುಕು ಹಾಕಿದ್ದಾರೆ. ಅಲ್ಲದೆ, ಅಂದು ಗುರುಶರಣ್ ಶತಕ ಸಿಡಿಸಲು ನೆರವಾಗಿದ್ದರಿಂದಲೇ ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದೆ ಎಂದಿದ್ದಾರೆ. 555 ರನ್ಗಳ ಬೃಹತ್ ಗುರಿ ಪಡೆದಿದ್ದ ಶೇಷ ಭಾರತದ 9ನೇ ವಿಕೆಟ್ ಬಿದ್ದಾಗ ಸಚಿನ್ 90ರ ಗಡಿ ದಾಟಿದ್ದರು. ಗುರುಶರಣ್ ಗಾಯದಿಂದಾಗಿ ಬ್ಯಾಟಿಂಗ್ಗೆ ಇಳಿಯುವ ನಿರೀಕ್ಷೆ ಇರಲಿಲ್ಲ. ಆದರೆ ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ರಾಜ್ ಸಿಂಗ್ ಡುಂಗರ್ಪುರ್ ಮನವಿಯ ಮೇರೆಗೆ ಗುರುಶರಣ್ ಗಾಯದ ನಡುವೆಯೂ ಬ್ಯಾಟಿಂಗ್ಗೆ ಇಳಿದು ಸಚಿನ್ ಶತಕ ಪೂರೈಸುವವರೆಗೆ ಸಾಥ್ ನೀಡಿದ್ದರು. ಪಂಜಾಬ್ ಬ್ಯಾಟರ್ ಗುರುಶರಣ್ 1990ರಲ್ಲಿ ಭಾರತ ಪರ ತಲಾ 1 ಏಕದಿನ, ಟೆಸ್ಟ್ ಆಡುವ ಅವಕಾಶವನ್ನೂ ಪಡೆದಿದ್ದರು.
"ಗುರುಶರಣ್ಗೆ ನಾನಾಗ ಮೈದಾನದಲ್ಲಿ ಮತ್ತು ಡ್ರೆಸ್ಸಿಂಗ್ ರೂಮ್ನಲ್ಲೂ ಅಪಾರ ಧನ್ಯವಾದಗಳನ್ನು ತಿಳಿಸಿದ್ದೆ. ಅವರ ಆ ದಿಟ್ಟ ನನ್ನ ಪಾಲಿಗೆ ಅತ್ಯಂತ ದೊಡ್ಡದಾಗಿತ್ತು. ನಾನಾಗ ಶತಕ ಸಿಡಿಸಿದರೂ, ಸಿಡಿಸದಿದ್ದರೂ, ನನಗೆ ನೆರವಾಗುವ ಸಲುವಾಗಿ ಅವರು ಇಟ್ಟ ದಿಟ್ಟ ಹೆಜ್ಜೆಯೇ ನನ್ನ ಹೃದಯವನ್ನು ತಟ್ಟಿತ್ತು' ಎಂದು ಸಚಿನ್ ವಿವರಿಸಿದ್ದಾರೆ.