ಭಾರತದ ರೈಸಿಂಗ್ ಸ್ಟಾರ್ಸ್ಗೆ ಏಷ್ಯಾಕಪ್ ಕಿರೀಟ
ಬ್ಯಾಂಕಾಕ್: ತೇಜಲ್ ಹಸಬ್ನಿಸ್ (51*ರನ್, 34 ಎಸೆತ, 3 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಆಸರೆ ಮತ್ತು ಸ್ಪಿನ್ನರ್ಗಳ ಬಿಗಿ ಬೌಲಿಂಗ್ ದಾಳಿಯ ಬಲದಿಂದ ಭಾರತ ಎ ತಂಡ ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ (Asia Cup Rising Stars) ಟಿ20 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಬಾಂಗ್ಲಾದೇಶ ಎ ವಿರುದ್ಧ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ರಾಧಾ ಯಾದವ್ (Radha Yadav) ನೇತೃತ್ವದ ಭಾರತ ಎ ತಂಡ 46 ರನ್ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ. ಈ ಹಿಂದೆ ಎಮರ್ಜಿಂಗ್ ಏಷ್ಯಾಕಪ್ ಎಂಬ ಹೆಸರು ಹೊಂದಿದ್ದ ಈ ಟೂರ್ನಿಯಲ್ಲೂ ಭಾರತ ಪ್ರಶಸ್ತಿ ಜಯಿಸಿತ್ತು.
ಟೆರ್ಡ್ಥಾಯಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಭಾರತ ತಂಡ, 44 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿತು. ಆಗ ಜತೆಗೂಡಿದ ತೇಜಲ್ ಮತ್ತು ನಾಯಕಿ ರಾಧಾ ಯಾದವ್ (36) 5ನೇ ವಿಕೆಟ್ಗೆ 69 ರನ್ ಜತೆಯಾಟವಾಡುವ ಮೂಲಕ ಭಾರತಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ 7 ವಿಕೆಟ್ಗೆ 134 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪ್ರೇಮಾ ರಾವತ್ (12ಕ್ಕೆ 3), ತನುಜಾ ಕನ್ವರ್ (11ಕ್ಕೆ 2) ಮತ್ತು ಸೋನಿಯಾ ಮೆಂಧಿಯಾ (21ಕ್ಕೆ 2) ಸ್ಪಿನ್ ದಾಳಿಗೆ ನಲುಗಿದ ಬಾಂಗ್ಲಾ 19.1 ಓವರ್ಗಳಲ್ಲಿ 88 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು. ಅಜೇಯವಾಗಿ ೈನಲ್ಗೇರಿದ್ದ ಬಾಂಗ್ಲಾ, ಭಾರತೀಯರ ಸರ್ವಾಂಗೀಣ ಆಟದ ಎದುರು ಮಂಕಾಯಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಭಾರತ, ನಂತರ ಸತತ 4 ಜಯದೊಂದಿಗೆ ಪ್ರಶಸ್ತಿ ಒಲಿಸಿಕೊಂಡಿರುವುದು ವಿಶೇಷ.
2023ರಲ್ಲಿ ನಡೆದ ಎಮರ್ಜಿಂಗ್ ಏಷ್ಯಾಕಪ್ನಲ್ಲೂ ಭಾರತ ತಂಡ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಗೆಲುವು ಸಾಧಿಸಿತ್ತು.
ಭಾರತ ಎ: 7 ವಿಕೆಟ್ಗೆ 134 (ನಂದಿನಿ 8, ವೃಂದಾ ದಿನೇಶ್ 19, ಅನುಷ್ಕಾ ಶರ್ಮ 8, ತೇಜಲ್ 51*, ರಾಧಾ 36, ಪ್ರೇಮಾ 4, ಹಿಮಾ ಖತುನ್ 25ಕ್ಕೆ 4, ರ್ಜಾನಾ 30ಕ್ಕೆ 1),
ಬಾಂಗ್ಲಾದೇಶ ಎ: 19.1 ಓವರ್ಗಳಲ್ಲಿ 88 (ಶಮಿಮಾ ಸುಲ್ತಾನಾ 20, ಸರ್ಮಿನ್ ಸುಲ್ತಾನಾ 18, ಸಾದಿಯಾ ಅಖ್ತೆರ್ 10, ಹಿಮಾ ಖತುನ್ 14, ಪ್ರೇಮಾ ರಾವತ್ 12ಕ್ಕೆ 3, ತನುಜಾ ಕನ್ವರ್ 11ಕ್ಕೆ 2, ಸೋನಿಯಾ 21ಕ್ಕೆ 2, ಮಿನ್ನು ಮಣಿ 17ಕ್ಕೆ 1, ರಾಧಾ 16ಕ್ಕೆ 1, ಸೈಮಾ 11ಕ್ಕೆ 1). ಪಂದ್ಯಶ್ರೇಷ್ಠ: ತೇಜಲ್ ಹಸಬ್ನಿಸ್.