ಲಂಕಾ ವಿರುದ್ಧ ಟೆಸ್ಟ್‌ ಟೀಮ್ ಇಂಡಿಯಾ ಸ್ಟಾರ್ ವೇಗಿ ಅಲಭ್ಯ 
ಕ್ರಿಕೆಟ್

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ: ಟೀಮ್ ಇಂಡಿಯಾಗೆ ಸ್ಟಾರ್ ವೇಗಿ ಅಲಭ್ಯ

ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಿಂದಲೂ ಕಾಡುತ್ತಿರುವ ಎಡ ಮೊಣಕಾಲಿನ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಫಲವಾಗಿರುವ ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ, ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಿಂದ ಹೊರಗುಳಿಯಲಿದ್ದಾರೆ. ಮೊಣಕಾಲಿನಲ್ಲಿ ಇನ್ನು ಕೆಲ ಸಮಸ್ಯೆ ಎದುರಿಸುತ್ತಿರುವ 32 ವರ್ಷದ ಬುಮ್ರಾ ಅವರ ಕಾರ್ಯದೊತ್ತಡ ನಿರ್ವಹಿಸಲು ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೆ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿದ್ದ ಜಸ್‌ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಲು ನಿರೀಕ್ಷೆಗಿಂತ ಹೆಚ್ಚಿನ ಸಮಯ ಬೇಕಿದೆ ಎಂದು ಬಿಸಿಸಿಐ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದ (ಸಿಒಇ) ಪುನಶ್ಚೇತನ ಶಿಬಿರದಲ್ಲಿರುವ ಬುಮ್ರಾ ಅವರ ಮೊಣಕಾಲಿನಲ್ಲಿ ಮತ್ತೆ ಊತ ಕಾಣಿಸಿಕೊಂಡಿದ್ದು, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಆತುರ ಬೇಡ ಎಂದು ಸಿಒಇ ವೈದ್ಯಕೀಯ ತಂಡ ಸಲಹೆ ನೀಡಿದೆ. ಜತೆಗೆ ಭಾರತ ತಂಡದ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಆಗಸ್ಟ್ 15ರಂದು ಆರಂಭವಾಗಲಿರುವ ಸರಣಿಗೆ ಬುಮ್ರಾ ಗೈರಾಗಲಿದ್ದಾರೆ. ಅವರ ಬದಲಿಗೆ ಜಮ್ಮು-ಕಾಶ್ಮೀರದ ಅಕಿಬ್ ನಬಿ ಅಥವಾ ವಿದರ್ಭದ ಯಶ್ ಠಾಕೂರ್ ಭಾರತ ಟೆಸ್ಟ್ ತಂಡ ಸೇರುವ ನಿರೀಕ್ಷೆ ಇದೆ.