ಟೀಮ್ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್
- ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಉತ್ತಮ ಇನ್ನಿಂಗ್ಸ್
- 10 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ
- 2016ರಲ್ಲಿ ತಮಗಾದ ನೋವನ್ನು 2026ರಲ್ಲಿ ವಿಂಡೀಸ್ಗೆ ಉಣಿಸಿದ ಸೂರ್ಯ ಪಡೆ
ಕೋಲ್ಕತ: ನಿನ್ನೆ (ಮಾ.01) ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ ಸೂಪರ್-8 ಹಾಗೂ ಟಿ20 ವಿಶ್ವಕಪ್ನ ನಿರ್ಣಾಯಕ ಪಂದ್ಯದಲ್ಲಿ ಭಾರತ ಸಂಜು ಸ್ಯಾಮನ್ಸ್ ಅವರ ಅದ್ಭುತ ಇನ್ನಿಂಗ್ಸ್ ನೆರವಿನಿಂದ ರೋಚಕ ಜಯ ಸಾಧಿಸಿತು. ತಂಡದ ಪರ ಕೊನೆಯವರೆಗೂ ಅಜೇಯರಾಗಿ ಉಳಿದ ಸಂಜು, ಕಡೆಗೂ 10 ವರ್ಷಗಳ ಸೇಡು ತೀರಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾದ ಸೆಮೀಸ್ ಕನಸನ್ನು ಈಡೇರಿಸಿದರು. ಇದೊಂದು ಕಡೆಯಾದರೆ, ಏನದು ದಶಕದ ಸೇಡು ಎಂಬ ಪ್ರಶ್ನೆ, ಗೊಂದಲಕ್ಕೆ ಹೀಗಿದೆ ನೋಡಿ ಉತ್ತರ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಬಹಳ ಸಮಯದ ನಂತರ ಫಾರ್ಮ್‌ಗೆ ಮರಳಿದ ಸಂಜು ಸ್ಯಾಮ್ಸನ್, ಕೇವಲ 50 ಎಸೆತದಲ್ಲಿ 97 ರನ್ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸ್ಯಾಮ್ಸನ್ರ ಸ್ಫೋಟಕ ಇನ್ನಿಂಗ್ಸ್ ಟೀಮ್ ಇಂಡಿಯಾವನ್ನು ಸೆಮೀಸ್ ಅಂಗಳಕ್ಕೆ ಕಳುಹಿಸುವುದರ ಜೊತೆಗೆ 10 ವರ್ಷಗಳ ಸೇಡನ್ನು ತೀರಿಸಿದ್ದು ವಿಶೇಷ.
2016, 2026...
2016ರ ಟಿ20 ವಿಶ್ವಕಪ್ ಸಮಯದಲ್ಲಿ, ವೆಸ್ಟ್ ಇಂಡೀಸ್ ಮತ್ತು ಟೀಮ್ ಇಂಡಿಯಾ ನಡುವಿನ ಸೆಮಿಫೈನಲ್ ಪಂದ್ಯ ಮುಂಬೈನಲ್ಲಿ ನಡೆಯಿತು. ಇದರಲ್ಲಿ, ವಿಂಡೀಸ್ ಭಾರತದ ಫೈನಲ್ ಕನಸನ್ನು ನುಚ್ಚುನೂರು ಮಾಡಿತು. ಅಂದು ಟೀಮ್ ಇಂಡಿಯಾ ಆಟಗಾರರ ವಿರುದ್ಧ ಸಂಭ್ರಮಿಸಿದ್ದ ವೆಸ್ಟ್ ಇಂಡೀಸ್ಗೆ ಇಂದು ಸೇಡಿನ ನೆರಳು ಗೊತ್ತಾಗಿದೆ. ಈ ವಿಷಯ ತಿಳಿದ ಕ್ರಿಕೆಟ್ ಪ್ರಿಯರು ಸದ್ಯ ಭಾರೀ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಯಾರು ಆಗಿನ ತಂಡದ ಕ್ಯಾಪ್ಟನ್ ಆಗಿದ್ದರು?
ಎಂ.ಎಸ್ ಧೋನಿ ಕ್ಯಾಪ್ಟನ್ಸಿ...
ಅಂದು ಭಾರತಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದರೆ, ವೆಸ್ಟ್ ಇಂಡೀಸ್ಗೆ ಡೆರೆನ್ ಸ್ಯಾಮಿ ಕ್ಯಾಪ್ಟನ್ ಆಗಿದ್ದರು. 2016ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಿತು. 193 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್, ಸಿಮಾನ್ಸ್ ಅವರ ಸ್ಪೋಟಕ ಇನ್ನಿಂಗ್ಸ್ನಿಂದ (82 ರನ್) ಭಾರತ ವಿರುದ್ಧ ಗೆದ್ದು, ಫೈನಲ್ ತಲುಪಿತು. ಈ ಸೋಲಿನಿಂದ ಭಾರತೀಯ ಆಟಗಾರರು ತೀವ್ರ ಬೇಸರಕ್ಕೆ ಒಳಗಾದರು. ಫೈನಲ್ಗೇರುವ ಆಸೆಯನ್ನು ಕೊಂದ ವಿಂಡೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ಕಾಯುತ್ತಿತ್ತು. ಆ ಕ್ಷಣ, ನಿನ್ನೆಯ ಪಂದ್ಯದಲ್ಲಿ ಈಡೇರಿದ್ದು ವಿಶೇಷ.