IPL ಮುಗಿಯಿತು ಮುಂದೇನು? ಇಲ್ಲಿದೆ 2027ರ ವಿಶ್ವಕಪ್‌ವರೆಗಿನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ... Team India Schedule  
ಕ್ರಿಕೆಟ್

IPL ಮುಗಿಯಿತು ಮುಂದೇನು? ಇಲ್ಲಿದೆ 2027ರ ವಿಶ್ವಕಪ್‌ವರೆಗಿನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ... Team India Schedule

ಪ್ರಮುಖ ಮುಖ್ಯಾಂಶಗಳು

  • ಭರ್ಜರಿ ಮನರಂಜನೆ ನೀಡಿದ ಇಂಡಿಯನ್​ ಪ್ರೀಮಿಯರ್​ ಲೀಲ್​ಗೆ ಮೇ 31ರಂದು ವಿದ್ಯುಕ್ತ ತೆರೆಬಿದ್ದಿದೆ
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ
  • ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ಟೀಮ್ ಇಂಡಿಯಾದ ಮುಂದಿನ ಪಂದ್ಯಗಳ ಮೇಲಿದೆ
  • 2027ರ ವಿಶ್ವಕಪ್‌ವರೆಗಿನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿಯನ್ನು ನೀವಿಲ್ಲಿ ನೋಡಬಹುದು
Team India Schedule : ಸುಮಾರು 2 ತಿಂಗಳ ಕಾಲ ಭರಪೂರ ಮನರಂಜನೆ ನೀಡಿದ ಇಂಡಿಯನ್​ ಪ್ರೀಮಿಯರ್​ ಲೀಗ್​ ( IPL ) ಗೆ ಮೇ 31ರಂದು ವಿದ್ಯುಕ್ತ ತೆರೆಬಿದ್ದಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ಟೀಮ್ ಇಂಡಿಯಾದ ಮುಂದಿನ ಪಂದ್ಯಗಳ ಮೇಲಿದ್ದು, ಈಗಾಗಲೇ 2026ರ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿರುವ ಭಾರತ ತಂಡ ತನ್ನ ಮುಂದಿನ ಗುರಿಗಳತ್ತ ಗಮನ ಹರಿಸಿದೆ. ಮುಂಬರುವ 18 ತಿಂಗಳುಗಳು ಭಾರತ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದ್ದು, ಜೂನ್ 6 ರಿಂದಲೇ ಅಫ್ಘಾನಿಸ್ತಾನ ವಿರುದ್ಧದ ಸರಣಿಯೊಂದಿಗೆ ಆಟಗಾರರು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ.
ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡಕ್ಕೆ ಅಫ್ಘಾನಿಸ್ತಾನ ಮೊದಲ ಸವಾಲಾಗಿ ಎದುರಾಗಲಿದೆ. ತವರಿನಲ್ಲಿ ಜೂನ್ 6 ರಿಂದ ಜೂನ್ 20 ರವರೆಗೆ ಈ ಸರಣಿ ನಡೆಯಲಿದೆ. ಈ ಹೊಸ ಸೀಸನ್‌ನ ಆರಂಭಿಕ ಸರಣಿಯಲ್ಲಿ ಒಂದು ಟೆಸ್ಟ್ ಹಾಗೂ ಮೂರು ಏಕದಿನ (ODI) ಪಂದ್ಯಗಳನ್ನು ಆಡಲಾಗುತ್ತಿದ್ದು, ಇದಾದ ನಂತರ ಟೀಮ್ ಇಂಡಿಯಾ ಇಂಗ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ. ಬ್ಯಾಕ್-ಟು-ಬ್ಯಾಕ್ ಪಂದ್ಯಗಳಿರುವ ಈ ಬಿಡುವಿಲ್ಲದ ವೇಳಾಪಟ್ಟಿಯು ಭಾರತ ತಂಡದ ಅಸಲಿ ಸಾಮರ್ಥ್ಯ, ಬೆಂಚ್ ಸ್ಟ್ರೆಂತ್ (ಮೀಸಲು ಆಟಗಾರರ ಬಲ) ಮತ್ತು ಯುವ ಆಟಗಾರರ ಪ್ರತಿಭೆಗೆ ದಿಕ್ಸೂಚಿಯಾಗಲಿದ್ದು, ಭಾರಿ ಪರೀಕ್ಷೆಯನ್ನು ಒಡ್ಡಲಿದೆ.

ಇಂಗ್ಲೆಂಡ್ ಪ್ರವಾಸ

ಭಾರತ ತಂಡವು ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈ 1 ರಿಂದ 19 ರವರೆಗೆ ನಡೆಯಲಿರುವ ಈ ಸರಣಿಯು ಐದು ಟಿ20 (T20I) ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿರುತ್ತದೆ. ವಿದೇಶಿ ಮಣ್ಣಿನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವುದು ಯಾವಾಗಲೂ ದೊಡ್ಡ ಸವಾಲಾಗಿದೆ.

ಶ್ರೀಲಂಕಾ ಮತ್ತು ಬಾಂಗ್ದಾದೇಶ ಸರಣಿ

ಆಗಸ್ಟ್ ತಿಂಗಳಿನಲ್ಲಿ ಭಾರತ ತಂಡವು ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಮುಂಬರುವ ವಿಶ್ವಕಪ್ ಯೋಜನೆಗಳಿಗೆ ಈ ಸರಣಿಗಳು ಅತ್ಯಂತ ನಿರ್ಣಾಯಕವಾಗಲಿವೆ. ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಟೀಮ್ ಇಂಡಿಯಾ, ಅಫ್ಘಾನಿಸ್ತಾನದ ಮಣ್ಣಿನಲ್ಲಿ ಮತ್ತೊಂದು ಮೂರು ಟಿ20 ಪಂದ್ಯಗಳ ಸರಣಿಯನ್ನೂ ಆಡಬೇಕಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ

ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ. ಈ ಟೂರ್ನಿಯಲ್ಲಿ ಭಾರತ ಮತ್ತೊಮ್ಮೆ ಚಿನ್ನದ ಪದಕ ಗೆಲ್ಲುವ ಗುರಿ ಹೊಂದುವ ಸಾಧ್ಯತೆಯಿದೆ. ಈ ಬೃಹತ್ ಕ್ರೀಡಾಕೂಟವು ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ.

ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಸವಾಲು

ಅಕ್ಟೋಬರ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ಬರಲಿದ್ದರೆ, ಮತ್ತೊಂದೆಡೆ ಭಾರತ ತಂಡದ ನ್ಯೂಜಿಲೆಂಡ್ ಪ್ರವಾಸ ಕೂಡ ಅತ್ಯಂತ ಪ್ರಮುಖವಾಗಿದೆ. ಅಲ್ಲಿ ಭಾರತ ತಂಡವು ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ. ನ್ಯೂಜಿಲೆಂಡ್‌ನ ಹವಾಮಾನ ಮತ್ತು ಪಿಚ್ ಪರಿಸ್ಥಿತಿಗಳಲ್ಲಿ ಗೆಲ್ಲುವುದು ಯಾವಾಗಲೂ ಕಷ್ಟಕರ. ಆದ್ದರಿಂದ ಆಯ್ಕೆದಾರರು ಮತ್ತು ತರಬೇತುದಾರರು ಈ ಪ್ರವಾಸದ ಮೇಲೆ ವಿಶೇಷ ಗಮನ ಹರಿಸಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ

ಭಾರತೀಯ ಕ್ರಿಕೆಟ್ ಅಭಿಮಾನಿಗಳು 2027ರ ಆರಂಭದಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಸರಣಿ ಎಂದರೆ ಅದು ಬಾರ್ಡರ್-ಗವಾಸ್ಕರ್ ಟ್ರೋಫಿ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಈ ಐದು ಪಂದ್ಯಗಳ ಟೆಸ್ಟ್ ಸರಣಿಯು ಜನವರಿ-ಫೆಬ್ರವರಿಯಲ್ಲಿ ಆಯೋಜನೆಯಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ತಲುಪುವ ಭಾರತದ ಅವಕಾಶಗಳ ಮೇಲೆ ಇದು ನೇರ ಪರಿಣಾಮ ಬೀರುವುದರಿಂದ ಈ ಸರಣಿ ಅತ್ಯಂತ ನಿರ್ಣಾಯಕವಾಗಿದೆ.

2027ರ ಮಹತ್ವದ ಗುರಿಗಳು

2027ರ ವರ್ಷವು ಭಾರತೀಯ ಕ್ರಿಕೆಟ್‌ಗೆ ಅತ್ಯಂತ ಪ್ರಮುಖ ವರ್ಷವಾಗಲಿದೆ. ಜೂನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವುದು ಮೊದಲ ಗುರಿಯಾಗಿದೆ. ತದನಂತರ, ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಭಾರತ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಹೋರಾಡಲಿದೆ. ಆದರೆ ಎಲ್ಲರ ಕಣ್ಣು ಮಾತ್ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಮೇಲಿರಲಿದೆ. ಈ ಬೃಹತ್ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಜಂಟಿಯಾಗಿ ಆಯೋಜಿಸುತ್ತಿವೆ, (ಏಜೆನ್ಸೀಸ್​).