ನವದೆಹಲಿ: ಟೀಮ್ ಇಂಡಿಯಾ ಪರ ಟಿ20, ಟೆಸ್ಟ್ ಮತ್ತು ಏಕದಿನ ಫಾರ್ಮೆಟ್ಗಳಲ್ಲಿ ಅದ್ಭುತ ಇನ್ನಿಂಗ್ಸ್ ನೀಡುವ ಮೂಲಕ ಅಪಾರ ಸಂಖ್ಯೆಯ ಕ್ರಿಕೆಟ್ ಪ್ರೇಮಿಗಳನ್ನು ಸೆಳೆಯುವ ಭಾರತ ತಂಡದ ಸ್ಟಾರ್ ಆಟಗಾರರು, ಕೇವಲ ಮೈದಾನದಲ್ಲಿ ಮಾತ್ರವಲ್ಲ, ಸರ್ಕಾರಿ ಹುದ್ದೆಗಳಲ್ಲಿಯೂ ಮಿಂಚುತ್ತಿರುವುದು ಗಮನಾರ್ಹ.
ಕ್ರಿಕೆಟ್ ಎನ್ನುವುದು ಕೇವಲ ಕ್ರೀಡೆಯಲ್ಲ, ಅದೊಂದು ಧರ್ಮವಿದ್ದಂತೆ. ಬಹುತೇಕ ಕ್ರೀಡಾಪಟುಗಳು ಕೇವಲ ಮ್ಯಾಚ್ಗಳಿಂದ ಹಾಗೂ ಬ್ರ್ಯಾಂಡ್ ಜಾಹೀರಾತುಗಳಿಂದಲೇ ಕೋಟಿ ಕೋಟಿ ಹಣ ದುಡಿಯುತ್ತಾರೆ ಎಂಬುದು ಅನೇಕರ ಭಾವನೆ. ಆದರೆ, ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರು ಬ್ರ್ಯಾಂಡ್ಗಳಿಗೆ ಮಾತ್ರ ಸೀಮಿತವಾಗದೆ, ದೇಶದ ಸಶಸ್ತ್ರ ಪಡೆ, ಪೊಲೀಸ್ ಹಾಗೂ ರಿಸರ್ವ್ ಬ್ಯಾಂಕ್‌ಗಳಂತಹ ಪ್ರತಿಷ್ಠಿತ ಸರ್ಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ವಿಶೇಷ.
ಕ್ರೀಡಾಪಟುಗಳ ಕಠಿಣ ಪರಿಶ್ರಮವನ್ನು ಗೌರವಿಸಲು ಹಾಗೂ ಅವರ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರಗಳು ಕ್ರೀಡಾ ಕೋಟಾದಡಿ ಇಂತಹ ಉನ್ನತ ಹುದ್ದೆಗಳನ್ನು ನೀಡುತ್ತವೆ. ಅಷ್ಟಕ್ಕೂ, ಭಾರತ ತಂಡದ ಸ್ಟಾರ್ ಆಟಗಾರರ ಪೈಕಿ ಯಾರಿಗೆಲ್ಲ ಈ ವಿಶೇಷ ಗೌರವ ಸಿಕ್ಕಿದೆ? ಪ್ರಸ್ತುತ, ಯಾವ ಆಟಗಾರರು ಕ್ರಿಕೆಟ್ ಜತೆ ಜತೆಯಲ್ಲೇ ಸರ್ಕಾರಿ ಉದ್ಯೋಗವನ್ನು ನಿಭಾಯಿಸುತ್ತಿದ್ದಾರೆ ಎಂಬುದರ ವಿವರ ಇಲ್ಲಿದೆ ನೋಡಿ.
ಇಶಾನ್ ಕಿಶನ್
ಇತ್ತೀಚೆಗಷ್ಟೇ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಅವರು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ಫೋಟೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಪಾಟ್ನಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಕಚೇರಿಯಲ್ಲಿ ಅವರು ಸಹಾಯಕ ವ್ಯವಸ್ಥಾಪಕರಾಗಿ ಆಫೀಸ್ ಐಡಿ ಕಾರ್ಡ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯಗಳು ಕ್ರೀಡಾಭಿಮಾನಿಗಳ ಗಮನ ಸೆಳೆಯಿತು.
ಮಹೇಂದ್ರ ಸಿಂಗ್ ಧೋನಿ
2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ 'ಕ್ಯಾಪ್ಟನ್ ಕೂಲ್' ಧೋನಿ ಅವರಿಗೆ ಭಾರತೀಯ ಟೆರಿಟೋರಿಯಲ್ ಆರ್ಮಿ 'ಲೆಫ್ಟಿನೆಂಟ್ ಕರ್ನಲ್' (Lieutenant Colonel) ಗೌರವ ಹುದ್ದೆಯನ್ನು ನೀಡಿ ಗೌರವಿಸಲಾಯಿತು.
ಮೊಹಮ್ಮದ್ ಸಿರಾಜ್
2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ತೆಲಂಗಾಣ ಸರ್ಕಾರವು, 2024ರ ಅಕ್ಟೋಬರ್ನಲ್ಲಿ ಪೊಲೀಸ್ ಉಪ ಸೂಪರಿಂಟೆಂಡೆಂಟ್ (DSP) ಹುದ್ದೆಯನ್ನು ನೀಡಿ ಗೌರವಿಸಿತು.
ಕೆ.ಎಲ್. ರಾಹುಲ್
ಕರ್ನಾಟಕದ ಭರವಸೆಯ ಆಟಗಾರ, ಹೆಮ್ಮೆಯ ಕನ್ನಡಿಗ ಕೆ.ಎಲ್. ರಾಹುಲ್ 2018ರಲ್ಲಿ ಕ್ರೀಡಾ ಕೋಟಾದ ಮೂಲಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ.
ಯುಜ್ವೇಂದ್ರ ಚಹಾಲ್
ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ 2018ರಲ್ಲಿ ಕ್ರೀಡಾ ಕೋಟಾದಡಿ ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದಾರೆ.
ಕೇವಲ ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡಾಪಟುಗಳಿಗೂ ಈ ಗೌರವ ಲಭಿಸುತ್ತಿದೆ. 2026ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಜೂಡೋದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದುಕೊಟ್ಟ ಅಸ್ಮಿತಾ ಡೇ ಅವರಿಗೆ ಉತ್ತರ ಪ್ರದೇಶ ಸರ್ಕಾರವು ಪೊಲೀಸ್ ಉಪಪರಿವೀಕ್ಷಕಿ (Sub-Inspector) ಹುದ್ದೆ ನೀಡಿ ಗೌರವಿಸಿದೆ,(ಏಜೆನ್ಸೀಸ್).