- ಟೀಮ್ ಇಂಡಿಯಾ ಆಟಗಾರರಲ್ಲಿ ಭಯ ಹುಟ್ಟಿಕೊಂಡಿದೆ ಎಂದ ಮಾಜಿ ಕ್ರಿಕೆಟಿಗ
- ನಾಳೆ ನಮಗೂ ಇದೇ ಪರಿಸ್ಥಿತಿ ಬರಬಹುದು ಎಂಬ ಭಯ
- ಹಿರಿಯ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅಚ್ಚರಿ ಹೇಳಿಕೆ
Team India Players: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, 1-0 ಅಂತರದಲ್ಲಿ ಇಂಗ್ಲೆಂಡ್ ಮುನ್ನಡೆ ಕಾಯ್ದುಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಸೋಲಿನ ಬದಲು ಹೀನಾಯ ಸೋಲು ಮತ್ತು ಅತ್ಯಂತ ಕಳಪೆ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾ ಆಟಗಾರರ ಕುರಿತು ಮಾಜಿ ಕ್ರಿಕೆಟಿಗ ಆರ್. ಅಶ್ವಿನ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಜತೆಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರವಿಚಂದ್ರನ್ ಅಶ್ವಿನ್, ಟೀಮ್ ಮ್ಯಾನೇಜ್ಮೆಂಟ್ನ ಮನೋಭಾವನೆ ನನಗೆ ಸ್ವಲ್ಪವು ಇಷ್ಟವಾಗುತ್ತಿಲ್ಲ. ಟಿ20 ವಿಶ್ವಕಪ್ ಗೆದ್ದ ಕೂಡಲೇ ಸಂಜು ಸ್ಯಾಮ್ಸನ್ ಮತ್ತು ಸೂರ್ಯ ಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ. ಈ ನಿರ್ಧಾರವು ತಂಡದ ಉಳಿದವರಲ್ಲಿ, ನಾಳೆ ನಮಗೂ ಇದೇ ಪರಿಸ್ಥಿತಿ ಎಂಬ ಭಯವನ್ನು ಹುಟ್ಟುಹಾಕಿದೆ ಎಂದರು.
ಆಟಗಾರರಲ್ಲಿ ಹೆಚ್ಚುತ್ತಿದೆ ಅಭದ್ರತೆ
ಆಟಗಾರರನ್ನು ಮ್ಯೂಸಿಕಲ್ ಚೇರ್ಸ್ ಆಟದಂತೆ ಇಷ್ಟಬಂದಾಗ ಹಾಕುವುದು, ಬಿಡುವುದು ಡ್ರೆಸ್ಸಿಂಗ್ ರೂಮ್ನ ವಾತಾವರಣವನ್ನು ಡ್ಯಾಮೇಜ್ ಮಾಡುತ್ತದೆ. ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಮತ್ತು ಸೂರ್ಯಕುಮಾರ್ ಅವರನ್ನು ಇದ್ದಕ್ಕಿದ್ದಂತೆ ಬದಿಗಿಟ್ಟರೆ ಹೇಗೆ? ಪ್ರಸ್ತುತ ತಂಡದಲ್ಲಿ ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ ಮತ್ತು ಇಶಾನ್ ಕಿಶನ್ ರೂಪದಲ್ಲಿ ಮೂವರು ಎಡಗೈ ಆಟಗಾರರಿದ್ದಾರೆ. ಹೀಗಾಗಿ, ಸ್ಯಾಮ್ಸನ್ಗೆ ಆ 3ನೇ ಸ್ಥಾನವೂ ಸಿಕ್ಕಿಲ್ಲ. ಇದು ಸಂಜುಗೆ ಮಾತ್ರವಲ್ಲ, ಟೀಮ್ ಇಂಡಿಯಾ ಭವಿಷ್ಯಕ್ಕೂ ಒಳ್ಳೆಯದಲ್ಲ ಎಂದು ಎಚ್ಚರಿಸಿದರು.
ವೈಭವ್ನಿಂದ ಅಡ್ಡಿ
ತಂಡಕ್ಕೆ ಹೊಸ ಆಟಗಾರ ವೈಭವ್ ಸೂರ್ಯವಂಶಿ ಬಂದರೆ, ಹಿರಿಯ ಆಟಗಾರರಿಗೆ ಸ್ಪಷ್ಟ ಭರವಸೆ ಕೊಡಿ. ನಾನು ಮ್ಯನೇಜ್ಮೆಂಟ್ ಸ್ಥಾನದಲ್ಲಿ ಇದ್ದಿದ್ದರೆ, ಸಂಜು ಅಥವಾ ಅಭಿಷೇಕ್ ಬಳಿ ಹೋಗಿ ಹೀಗೆ ಹೇಳುತ್ತಿದ್ದೆ. ಹೊಸ ವ್ಯಕ್ತಿಯೊಬ್ಬ ಬೆಂಚ್ನಲ್ಲಿ ಕುಳಿತು ಒತ್ತಡ ಹೇರುತ್ತಿದ್ದಾನೆ. ನೀವು ನಮಗೆ ವಿಶ್ವಕಪ್ ಗೆದ್ದು ಕೊಟ್ಟಿದ್ದೀರಿ. ಹೀಗಾಗಿ, ಕನಿಷ್ಠ 2ರಿಂದ 3 ಸರಣಿಗಳಿಗೆ ನಿಮಗೆ ಪೂರ್ಣ ಅವಕಾಶ ಕೊಡುತ್ತೇವೆ' ಎನ್ನುವುದಾಗಿ ಅಶ್ವಿನ್ ಹೇಳಿದ್ದಾರೆ,(ಏಜೆನ್ಸೀಸ್).