ಏಷ್ಯಾಕಪ್ ಫೈನಲ್ನಲ್ಲಿ ಮೊಹ್ಸಿನ್ ನಖ್ವಿಯಿಂದ ಪ್ರಶಸ್ತಿ ಪಡೆಯದ ಭಾರತ
- ಹೈವೋಲ್ಟೇಜ್ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಮೊಹ್ಸಿನ್ ನಖ್ವಿ
- ನಖ್ವಿಯಿಂದ ರನ್ನರ್ ಅಪ್ ಪದಕ ಪಡೆಯದ ಟೀಮ್ ಇಂಡಿಯಾ
- ಅಫ್ಘಾನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಿರ್ವೈಸ್ ಅಶ್ರಫ್ ಅವರಿಂದ ಭಾರತಕ್ಕೆ ಟ್ರೋಫಿ, ಮೆಡಲ್ ಹಸ್ತಾಂತರ
Team India: ಇಂದು (ಡಿ.21) ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್ 19 ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ 191 ರನ್ಗಳಿಂದ ಭಾರತ ವಿರುದ್ಧ ಭಾರೀ ಅಂತರದ ಜಯ ಗಳಿಸಿತು. ಹೈವೋಲ್ಟೇಜ್ ಫೈನಲ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಸೋತಿದ್ದೇ ಆದರೂ ರನ್ನರ್ ಅಪ್ ಪ್ರಶಸ್ತಿ ಸ್ವೀಕರಿಸುವ ವೇಳೆ ಹಳೆಯ ಘಟನೆಯನ್ನು ನೆನಪಿಸಿದರು.
ಪಂದ್ಯ ಸೋತ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಟೀಮ್ ಇಂಡಿಯಾ ನಾಯಕ ಆಯುಷ್ ಮಾತ್ರೆ ತಂಡದ ಪರವಾಗಿ ರನ್ನರ್ ಅಪ್ ಬಹುಮಾನಗಳನ್ನು ಪಡೆಯಲು ವೇದಿಕೆ ಹತ್ತಲಿಲ್ಲ. ಇದಕ್ಕೆ ಕಾರಣ, ವೇದಿಕೆಯಲ್ಲಿ ಏಷ್ಯನ್ ಕ್ರಿಕೆಟ್ ಮಂಡಳಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಉಪಸ್ಥಿತಿ. ಈ ವರ್ಷ ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯವನ್ನು ಗೆದ್ದ ಭಾರತ ಸೀನಿಯರ್ಸ್ ತಂಡಕ್ಕೆ ನಖ್ವಿ ಟ್ರೋಫಿ ಕೊಡದೆ ಹೊತ್ತೊಯ್ದರು. ಅಂದು ತನ್ನೊಂದಿಗೆ ಕಪ್ ಎತ್ತೊಯ್ದ ಮೊಹ್ಸಿನ್, ಸೂರ್ಯಕುಮಾರ್ ಯಾದವ್ ಪಡೆ ತನ್ನಿಂದ ಮೆಡಲ್ ಸ್ವೀಕರಿಸಲು ವೇದಿಕೆಗೆ ಬರಲಿಲ್ಲ ಎಂಬ ಜಿದ್ದಿಗೆ ಸಿಡಿಮಿಡಿಗೊಂಡಿದ್ದರು.
ಅಂದು ತಮ್ಮ ಸೀನಿಯರ್ಸ್ ಹೇಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಂದ ಪ್ರಶಸ್ತಿ ಸ್ವೀಕರಿಸಲಿಲ್ಲವೋ, ಇಂದು ಜೂನಿಯರ್ಸ್ ಕೂಡ ಅವರ ಹಾದಿಯನ್ನು ಹಿಡಿದದ್ದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ವಿನ್ನರ್ ಹಾಗೂ ರನ್ನರ್ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಲು ನಖ್ವಿ ವೇದಿಕೆಗೆ ಬಂದ ಕೂಡಲೇ ಹಿಂದೆ ಸರಿದ ಟೀಮ್ ಇಂಡಿಯಾ, ಅವರಿಂದ ಮೆಡಲ್ಗಳನ್ನು ಸ್ವೀಕರಿಸಲು ಒಪ್ಪಲಿಲ್ಲ. ಈ ಬೆಳವಣಿಗೆ ನೋಡ್ತಿದ್ದಂತೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮಿರ್ವೈಸ್ ಅಶ್ರಫ್, ಭಾರತ ತಂಡಕ್ಕೆ ಟ್ರೋಫಿ ಹಸ್ತಾಂತರಿಸಿದರು.
ಪ್ರಶಸ್ತಿ ಹಸ್ತಾಂತರಕ್ಕೆ ಪ್ರತ್ಯೇಕ ವ್ಯವಸ್ಥೆ
ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಸೋತ ಬಳಿಕ, ನಖ್ವಿಯಿಂದ ರನ್ನರ್ ಅಪ್ ಟ್ರೋಫಿ ಸ್ವೀಕರಿಸುವ ಅಗತ್ಯವಿಲ್ಲ ಎಂದು ಆಯುಷ್ ಮಾತ್ರೆ ತಂಡ ನಿರ್ಧರಿಸಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಆಯೋಜಕರು, ಈ ಸಂದರ್ಭದಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಭಾರತಕ್ಕೆ ಟ್ರೋಫಿಯನ್ನು ಪ್ರದಾನ ಮಾಡುವುದು ಸೂಕ್ತ ಎಂದು ನಿರ್ಧರಿಸಿದರು. ಅಂತೆಯೇ, ಟೀಮ್ ಇಂಡಿಯಾಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ನಖ್ವಿ ಇಲ್ಲದ ವೇದಿಕೆಗೆ ಕರೆಸಿ, ಮೆಡಲ್ಗಳನ್ನು ನೀಡಿದರು,(ಏಜೆನ್ಸೀಸ್).