- ಟೀಮ್ ಇಂಡಿಯಾ 30 ರನ್ಗಳಿಂದ ಹೀನಾಯ ಸೋಲು
- ಹರಿಣರ ಎದುರು ಮೊದಲ ಟೆಸ್ಟ್ ಸೋತ ಭಾರತ
- ಉತ್ತಮ ಪ್ರದರ್ಶನ ನೀಡುವಲ್ಲಿ ಬ್ಯಾಟರ್ಗಳು ವಿಫಲ
ಕೋಲ್ಕತ: ಇಂದು (ನ.16) ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿದ್ದು, ಮೂರನೇ ದಿನದಾಟದಲ್ಲಿ ಶುಭಮಾನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ 30 ರನ್ಗಳಿಂದ ಹೀನಾಯ ಸೋಲುಂಡಿತು.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಶುಕ್ರವಾರ ಪ್ರಾರಂಭವಾಯಿತು. ಮೊದಲ ದಿನ ಭಾರತೀಯ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು ಮತ್ತು ಹರಿಣರ ಪಡೆಯು ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್‌ಗೆ ಆಲೌಟ್ ಆಯಿತು. ತದನಂತರ, ಬ್ಯಾಟಿಂಗ್ ಆರಂಭಿಸಿದ ಭಾರತ ತಂಡವು ಸಹ ಕಡಿಮೆ ರನ್‌ಗಳಿಗೆ ಆಲೌಟ್ ಆಯಿತು. ಭಾರತೀಯ ತಂಡದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 189 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ, ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭಿಸಿತು. ಮತ್ತು ಮೂರನೇ ದಿನ (ಭಾನುವಾರ) ಅವರು ಕೇವಲ 153 ರನ್‌ಗೆ ಆಲೌಟ್ ಆದರು. ತಂಡದ ಕ್ಯಾಪ್ಟನ್ ಟೆಂಬಾ ಬವುಮಾ (55 ರನ್) ಹೊರತುಪಡಿಸಿ, ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಪೆವಿಲಿಯನ್ ಸೇರಿದರು.
124 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ, ಆರಂಭದಿಂದಲೇ ಆಘಾತಗಳನ್ನು ಎದುರಿಸಿತು. ಆರಂಭಿಕ ಬ್ಯಾಟರ್ಗಳಾದ ಕೆ.ಎಲ್. ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ವಿಕೆಟ್ಗಳು ಪತನಗೊಂಡಿದ್ದು, ತಂಡವನ್ನು ತೀರ ಸಂಕಷ್ಟಕ್ಕೆ ಸಿಲುಕಿಸಿತು. ಮೊದಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಬಹುಬೇಗನೆ ಔಟಾದರು. ಧ್ರುವ್ ಜುರೆಲ್ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿದ್ದರು. ಆದರೆ, ಅವರು 13 ರನ್‌ಗೆ ಔಟಾದರು.
ಆ ನಂತರ ಮೈದಾನಕ್ಕೆ ಬಂದ ರಿಷಭ್ ಪಂತ್, ಕ್ರೀಸ್‌ನಲ್ಲಿ ಉಳಿಯಲು ಪರದಾಡಿದರು. ಈ ವೇಳೆ ಸೈಮನ್ ಹಾರ್ಮರ್ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. 13 ಎಸೆತಗಳನ್ನು ಎದುರಿಸಿದ ಪಂತ್, ಕೇವಲ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ಹರಿಣರ ವಿರುದ್ಧ ಭಾರತ ಗೆಲ್ಲಲು ಬೇಕಿದ್ದು ಕೆಲವೇ ರನ್‌ಗಳಷ್ಟೇ. ಆದರೆ, ಒಬ್ಬರ ಹಿಂದೆ ಮತ್ತೊಬ್ಬರು ವಿಕೆಟ್ ಕಳೆದುಕೊಂಡು ಪೆವಿಲಿಯನ್ನತ್ತ ಮುಖಮಾಡಿದ್ದು, ಹೀನಾಯ ಸೋಲಿಗೆ ಕಾರಣವಾಯಿತು,(ಏಜೆನ್ಸೀಸ್).