ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಂದ ಗಂಭೀರ ಆರೋಪ
- ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲುಂಡ ಶ್ರೀಲಂಕಾ
- 61 ರನ್‌ಗಳ ಭಾರೀ ಅಂತರದಲ್ಲಿ ಸೋತ ಶ್ರೀಲಂಕಾ
- ಈ ಪಂದ್ಯ ಫಿಕ್ಸಿಂಗ್ ಆಗಿದೆ ಎಂದು ಆರೋಪಿಸಿದ ಪಾಕ್ ಮಾಜಿ ಕ್ರಿಕೆಟಿಗ
Pakistan: ನಿನ್ನೆ (ಫೆ.25) ನಡೆದ ಟಿ20 ವಿಶ್ವಕಪ್ ಸೂಪರ್-8 ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಶ್ರೀಲಂಕಾ ಹೀನಾಯ ಸೋಲುಂಡಿತು. ಈ ಪಂದ್ಯದಿಂದ ಕೇವಲ ಸಿಂಹ ಪಡೆಗೆ ಮಾತ್ರ ಸಂಕಷ್ಟ ಎದುರಾಗಲಿಲ್ಲ. ಬದಲಿಗೆ ಪಾಕಿಸ್ತಾನ ತಂಡಕ್ಕೂ ದೊಡ್ಡ ತಲೆನೋವು ತಂದೊಡ್ಡಿದೆ. ಕಿವೀಸ್ ಗೆಲುವಿನಿಂದ ಇದೀಗ ಪಾಕ್ ಸೆಮೀಸ್ ಕನಸು ಬಹುತೇಕ ಭಗ್ನಗೊಂಡಿದೆ.
ಪಾಕಿಸ್ತಾನಕ್ಕೆ ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲಲೇಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ವಿರುದ್ಧ 61 ರನ್‌ಗಳ ಭಾರೀ ಅಂತರದಲ್ಲಿ ಹೀನಾಯ ಸೋಲನ್ನು ಅನುಭವಿಸಿತು. ಲಂಕಾ ಪಡೆಯು ಈ ಹೀನಾಯ ಸೋಲಿನಿಂದ ಸದ್ಯ ಪಾಕ್ ಆಸೆ ನುಚ್ಚುನೂರಾಗಿದೆ. ಇಲ್ಲಿ ಪವಾಡ ಸಂಭವಿಸಿದರೆ ಮಾತ್ರ ಸಲ್ಮಾನ್ ಅಲಿ ಅಘಾ ಪಡೆಗೆ ಸೆಮೀಸ್ಗೆ ಎಂಟ್ರಿಕೊಡುವ ಅವಕಾಶವಿದೆ. ತಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎಂಬ ಸಿಟ್ಟಿನಿಂದ ಇದೀಗ ಹುಚ್ಚರಂತೆ ಮಾತನಾಡುತ್ತಿರುವ ಪಾಕ್ ಕ್ರಿಕೆಟಿಗರು, ಈ ಪಂದ್ಯವು ಫಿಕ್ಸಿಂಗ್ ಆಗಿದೆ ಎಂದು ಆರೋಪಿಸಿದ್ದಾರೆ.
ಐಸಿಸಿ ಅಧ್ಯಕ್ಷರೇ ಕಾರಣ...
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಮಾತನಾಡಿ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಪಂದ್ಯವನ್ನು ಉದ್ದೇಶಪೂರ್ವಕವಾಗಿ ಫಿಕ್ಸಿಂಗ್ ಮಾಡಲಾಗಿದೆ ಎಂದು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಶ್ರೀಲಂಕಾ ಬೇಕಂತಲೇ ಕಿವೀಸ್ ಪಡೆ ಎದುರು ಸೋತಿದೆ. ಈ ಎರಡೂ ತಂಡಗಳ ನಡುವೆ ಮ್ಯಾಚ್ ಫಿಕ್ಸಿಂಗ್ ನಡೆದಿರುವುದು ಪಕ್ಕಾ. ಈ ಕುತಂತ್ರದ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜಯ್ ಶಾ ಅವರ ಕೈವಾಡವಿದೆ. ಪಾಕಿಸ್ತಾನವನ್ನು ಈ ಟೂರ್ನಿಯಿಂದ ಹೊರಗಟ್ಟಲು ಇಂತಹ ನಾಟಕಕ್ಕೆ ಇಳಿದಿದ್ದಾರೆ. ಶ್ರೀಲಂಕಾ ತಂಡವು ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಪಾಕ್ ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯುವಂತಾಗಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಪಾಕ್ ಆಸೆಗೆ ತಣ್ಣೀರು?
ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪಲು ಪಾಕಿಸ್ತಾನಕ್ಕೆ ಇರುವುದು ಕೇವಲ 1% ಅಷ್ಟೇ ಅವಕಾಶ. ಮುಂದಿನ ಸೂಪರ್-8 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ 15 ರನ್‌ಗಳಿಂದ ಗೆದ್ದರೆ, ಪಾಕಿಸ್ತಾನವು ಶ್ರೀಲಂಕಾ ವಿರುದ್ಧ 55 ರನ್‌ಗಳಿಂದ ಗೆಲ್ಲಬೇಕು. ಅದೇ ರೀತಿ, ಇಂಗ್ಲೆಂಡ್ ಕಿವೀಸ್ ಪಡೆ ವಿರುದ್ಧ ಕೇವಲ ಒಂದು ರನ್‌ನಿಂದ ಗೆದ್ದರೆ, ಪಾಕ್ ಶ್ರೀಲಂಕಾ ವಿರುದ್ಧ 69 ರನ್‌ಗಳಿಂದ ಗೆಲ್ಲಬೇಕು. ಹಾಗಿದ್ದಲ್ಲಿ ಮಾತ್ರ, ಪಾಕಿಸ್ತಾನ ಸೆಮಿಫೈನಲ್‌ಗೆ ಲಗ್ಗೆಯಿಡುತ್ತದೆ. ಅದೇ ನ್ಯೂಜಿಲೆಂಡ್ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಪಾಕಿಸ್ತಾನ ಶ್ರೀಲಂಕಾ ಜೊತೆಗೆ ತವರಿಗೆ ಗಂಟುಮೂಟೆ ಕಟ್ಟಿಕೊಂಡು ಹೋಗಬೇಕು,(ಏಜೆನ್ಸೀಸ್).