ರಾಜ್ಯ ಈಜು ಚಾಂಪಿಯನ್ಷಿಪ್: ತನಿಷಿ ಗುಪ್ತಾ ಅವಳಿ ದಾಖಲೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಡಾಲ್ಫಿನ್ ಈಜು ಕೇಂದ್ರದ ತನಿಷಿ ಗುಪ್ತಾ (tanishi gupta) ಕೆಎಸ್ಎ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನ (national swimming championship) ಎರಡನೇ ದಿನ ಅವಳಿ ಕೂಟ ದಾಖಲೆ ನಿರ್ಮಿಸಿದ್ದಾರೆ. ಮಂಗಳವಾರ ಒಟ್ಟು 8 ಕೂಟ ದಾಖಲೆ ರಚನೆಯಾದವು. ಬಸವನಗುಡಿ ಈಜು ಕೇಂದ್ರದ ಶೋನ್ ಗಂಗೂಲಿ, ಅನೀಶ್ ಎಸ್. ಗೌಡ, ದರ್ಶನ್ ಎಸ್, ನೈಷಾ, ಎಸ್. ಲಕ್ಷ್ಯ ಮತ್ತು ಜೈನ್ ರೆಸಿಡೆನ್ಶಿಯಲ್ ಸ್ಕೂಲ್ನ ತಾನ್ಯಾ ಎಸ್. ದಿನದ ಇತರ ದಾಖಲೆ ಬರೆದರು.
ಬಸವನಗುಡಿ ಈಜು ಕೇಂದ್ರದಲ್ಲಿ (ಬಿಎಸಿ) ನಡೆಯುತ್ತಿರುವ ಕೂಟದಲ್ಲಿ ತನಿಷಿ ಗುಪ್ತಾ ಮಹಿಳೆಯರ 100 ಮೀ. ಬಟರ್ಫ್ಲೈ ಮತ್ತು ಬ್ಯಾಕ್ಸ್ಟೋಕ್ ವಿಭಾಗದಲ್ಲಿ ಕೂಟ ದಾಖಲೆ ಮುರಿದರು. ತನಿಷಿ ಬಟರ್ಫ್ಲೈ ವಿಭಾಗದಲ್ಲಿ 1 ನಿಮಿಷ, 0.49 ಸೆಕೆಂಡ್ನಲ್ಲಿ ಈಜಿದರೆ, ಬ್ಯಾಕ್ಸ್ಟ್ರೊಕ್ ವಿಭಾಗದಲ್ಲಿ 1 ನಿಮಿಷ, 5.16 ಸೆಕೆಂಡ್ಗಳಲ್ಲಿ ಈಜಿ ಚಿನ್ನಕ್ಕೆ ಕೊರಳೊಡ್ಡಿದರು. ಎರಡೂ ಸ್ಪರ್ಧೆಗಳಲ್ಲಿ ಅವರು ಕ್ರಮವಾಗಿ ನೀನಾ ವೆಂಕಟೇಶ್ (1ನಿ,3.45ಸೆ) ಮತ್ತು ರಿಧಿಮಾ (1ನಿ,5.81ಸೆ) ದಾಖಲೆ ಅಳಿಸಿದರು.
ಶೋನ್ ಗಂಗೂಲಿ ಪುರುಷರ 400 ಮೀ. ಮೆಡ್ಲೆಯಲ್ಲಿ 4 ನಿಮಿಷ, 31.99 ಸೆಕೆಂಡ್ಗಳಲ್ಲಿ ಈಜಿ ಶಿವಾ ಎಸ್. (4ನಿ, 33.77ಸೆ) ದಾಖಲೆ ಮುರಿಯುವ ಮೂಲಕ ಚಿನ್ನ ಗೆದ್ದರು. ನೈಷಾ ಮಹಿಳೆಯರ 200 ಮೀ. ಬ್ಯಾಕ್ಸ್ಟ್ರೊಕ್ನಲ್ಲಿ 2 ನಿಮಿಷ, 23.92 ಸೆಕೆಂಡ್ಗಳಲ್ಲಿ ಈಜಿ, ರಿದಿಮಾ (2ನಿ,24.54ಸೆ) ದಾಖಲೆ ಅಳಿಸಿ ಸ್ವರ್ಣ ಒಲಿಸಿಕೊಂಡರು. ಲಕ್ಷ್ಯ ಮಹಿಳೆಯರ 100 ಮೀ. ಬ್ಯಾಕ್ಸ್ಟ್ರೊಕ್ನಲ್ಲಿ 1 ನಿಮಿಷ, 13.67 ಸೆಕೆಂಡ್ಗಳಲ್ಲಿ ಈಜಿ, ಮಾನವಿ ವರ್ಮ (1ನಿ,14.92ಸೆ) ದಾಖಲೆ ಮುರಿದು ಅಗ್ರಸ್ಥಾನ ಗಳಿಸಿದರು. ತಾನ್ಯಾ ಮಹಿಳೆಯರ 400 ಮೀ. ಮೆಡ್ಲೆಯಲ್ಲಿ 5 ನಿಮಿಷ, 8.65 ಸೆಕೆಂಡ್ಗಳಲ್ಲಿ ಈಜಿ 2024ರಲ್ಲಿ ತಾನೇ ರಚಿಸಿದ್ದ ದಾಖಲೆ (5ನಿ,11.17ಸೆ) ಸುಧಾರಿಸುವ ಮೂಲಕ ಚಿನ್ನ ಒಲಿಸಿಕೊಂಡರು.
ಪುರುಷರ 200 ಮೀ. ಫ್ರೀಸ್ಟೈಲ್ನಲ್ಲಿ ಅನೀಶ್ ಗೌಡ (1ನಿ, 51.87 ಸೆ), ದರ್ಶನ್ ಎಸ್. (1ನಿ,51.92ಸೆ) ಇಬ್ಬರೂ ಕೂಟ ದಾಖಲೆ ಮುರಿದರು. ಆದರೆ ಅನೀಶ್ ಚಿನ್ನ ಗೆದ್ದರೆ, ದರ್ಶನ್ ಬೆಳ್ಳಿಗೆ ತೃಪ್ತಿಪಟ್ಟರು. ಅನೀಶ್ ಕಳೆದ ವರ್ಷ ತಾವೇ ಬರೆದಿದ್ದ ದಾಖಲೆ (1ನಿ,52.41ಸೆ) ಸುಧಾರಿಸಿಕೊಂಡರು.
ಡಾಲ್ಫಿನ್ ಅಕ್ವೆಟಿಕ್ಸ್ ಪ್ರತಿನಿಧಿಸಿದ ಒಲಿಂಪಿಯನ್ ಧಿನಿಧಿ ದೇಸಿಂಘು ಮಹಿಳೆಯರ 400 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀಸ್ಟೈಲ್ ವಿಭಾಗಗಳಲ್ಲಿ ಚಿನ್ನ ಗೆದ್ದುಕೊಂಡರು.
ಹಾಲಿ ವರ್ಷ ಅಹಮದಾಬಾದ್ನಲ್ಲಿ ನಡೆಯಲಿರುವ 79ನೇ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ಇದು ಅರ್ಹತಾ ಕೂಟವೂ ಆಗಿದ್ದು, ಬುಧವಾರ 3ನೇ ಹಾಗೂ ಕೊನೇ ದಿನದ ಸ್ಪರ್ಧೆಗಳು ನಡೆಯಲಿವೆ.