T20WorldCup: ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾಕ್ಕೆ ಕೆನಡಾ ಮೊದಲ ಎದುರಾಳಿ 
ಕ್ರಿಕೆಟ್

T20WorldCup: ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾಕ್ಕೆ ಕೆನಡಾ ಮೊದಲ ಎದುರಾಳಿ

ಅಹಮದಾಬಾದ್: ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾ ಐಸಿಸಿ ಟಿ20 ವಿಶ್ವಕಪ್ 10ನೇ ಆವೃತ್ತಿಯಲ್ಲಿ ಸೋಮವಾರ ತನ್ನ ಅಭಿಯಾನ ಆರಂಭಿಸಲಿದ್ದು, ಡಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ ಕಣಕ್ಕಿಳಿಯಲಿದೆ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಏಡನ್ ಮಾರ್ಕ್ರಮ್ ಬಳಗ ಶುಭಾರಂಭದ ತವಕದಲ್ಲಿದೆ.
ಕಳೆದ ಬಾರಿ ಸ್ವಲ್ಪದರಲ್ಲಿ ಪ್ರಶಸ್ತಿ ವಂಚಿತವಾಗಿದ್ದ ಹರಿಣಗಳ ಪಡೆಯ 15 ಆಟಗಾರರ ಪೈಕಿ 9 ಆಟಗಾರರು ಹಾಲಿ ವರ್ಷವೂ ಆಡಲಿದ್ದಾರೆ. 2024ರ ಫೈನಲ್ ನಂತರ ಪೂರ್ಣ ಬಲದೊಂದಿಗೆ ಆಡದ ದ,ಆಫ್ರಿಕಾ, 32 ಪಂದ್ಯಗಳಲ್ಲಿ 20 ಸೋಲು ಅನುಭವಿಸಿದೆ. ಹೆನ್ರಿಚ್ ಕ್ಲಾಸೆನ್ ಟಿ20ಗೆ ನಿವೃತ್ತಿ ಘೋಷಿಸಿದ್ದು, ವಿದಾಯದಿಂದ ಹಿಂದಿರುಗಿರುವ ಕ್ವಿಂಟನ್ ಡಿಕಾಕ್, ಡಿವಾಲ್ಡ್ ಬ್ರೆವಿಸ್ ಮೇಲೆ ಬ್ಯಾಟಿಂಗ್ ವಿಭಾಗದ ಅವಲಂಬಿತವಾಗಿದೆ. ತವರಿನಲ್ಲಿ ವಿಂಡೀಸ್ ಎದುರು ಏಕದಿನ ಸರಣಿ ಜಯಿಸಿದ ಆತ್ಮವಿಶ್ವಾಸದಲ್ಲಿ ಚುಟುಕು ಟೂರ್ನಿಯಲ್ಲಿ ಆಡಲಿದೆ.
ಪ್ರಮುಖರಾದ ನಾಯಕ ಏಡನ್ ಮಾರ್ಕ್ರಮ್, ಡಿಕಾಕ್, ಕಗಿಸೋ ರಬಾಡ, ಅನ್ರಿಚ್ ನೋಕಿಯಾ ಹಾಗೂ ಮಾರ್ಕೋ ಯಾನ್ಸೆನ್ ಭಾರತದಲ್ಲಿ ಐಪಿಎಲ್ ಆಡಿರುವ ಅನುಭವ ಹೊಂದಿದ್ದಾರೆ. ಆದರೆ ಗುಂಪಿನ 4ರಲ್ಲಿ 3 ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ಆಡುವ ಲಾಭ ಹೊಂದಿದೆ. ಕೆನಡಾ ತಂಡ ಸತತ ಎರಡನೇ ಆವೃತ್ತಿಯಲ್ಲಿ ಆಡುತ್ತಿದ್ದು, ದಿಲ್‌ಪ್ರೀತ್ ಬಾಜ್ವಾ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಟೂರ್ನಿಗೆ ಮುನ್ನ ಆಡಿದ ಎರಡು ಅಭ್ಯಾಸ ಪಂದ್ಯಗಳಲ್ಲಿ ಸೋಲು ಕಂಡಿದೆ. ಟೂರ್ನಿಯ ಮೊದಲ ಎರಡು ದಿನದಂತೆ ಅಸೋಸಿಯೇಟ್ ದೇಶದ ತಂಡಗಳ ನಿಕಟ ಪೈಪೋಟಿಯ ಟ್ರೆಂಡ್ ಅನ್ನು ಕೆನಡಾ ಮುಂದುವರಿಸುವ ಹಂಬಲದಲ್ಲಿದೆ.
ಆರಂಭ: ರಾತ್ರಿ 7.00
ಇಟಲಿ ಪದಾರ್ಪಣೆ (World Cup debutants)
ಕೋಲ್ಕತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಇಟಲಿ ತಂಡ ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಲಿದೆ. ಉಭಯ ತಂಡಗಳು ಟಿ20ಯಲ್ಲಿ ಎರಡು ಬಾರಿ ಮುಖಾಮುಖಿ ಆಗಿದ್ದು, ತಲಾ 1-1ರ ಸೋಲು-ಗೆಲುವಿನ ಸಮಬಲ ಹೊಂದಿವೆ. ಯೂರೋಪ್‌ನ ಪ್ರಾದೇಶಿಕ ತಂಡಗಳ ಅರ್ಹತಾ ಟೂರ್ನಿಯ ಫೈನಲ್‌ನಲ್ಲಿ ಸ್ಕಾಟ್ಲೆಂಡ್ ತಂಡವನ್ನು 12 ರನ್‌ಗಳಿಂದ ಮಣಿಸಿ ಇಟಲಿ ಜಾಗತಿಕ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಬಾಂಗ್ಲಾದೇಶ ಹೊರಬಿದ್ದ ನಂತರ ಬದಲಿ ತಂಡವಾಗಿ ಸ್ಕಾಟ್ಲೆಂಡ್ ವಿಶ್ವಕಪ್‌ಗೆ ಪ್ರವೇಶಿಸಿದೆ. ಆರಂಭ: ಬೆಳಗ್ಗೆ 11
ಇಂದಿನ ಇತರ ಪಂದ್ಯ
ಜಿಂಬಾಬ್ವೆ-ಓಮನ್
ಆರಂಭ: ಮಧ್ಯಾಹ್ನ 3
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
1. ದ.ಆಫ್ರಿಕಾ-ಕೆನಡಾ ತಂಡಗಳ ಮೊದಲ ಟಿ20 ಇದಾಗಿದ್ದು, 2003ರಲ್ಲಿ ಕೊನೆಯದಾಗಿ ಉಭಯ ತಂಡಗಳು ಏಕದಿನ ಪಂದ್ಯ ಆಡಿದ್ದವು.