ಟಿ20 ವಿಶ್ವಕಪ್: ಇಂದಿನಿಂದ ಸೂಪರ್-8 ಹಣಾಹಣಿ; ನ್ಯೂಜಿಲೆಂಡ್-ಪಾಕಿಸ್ತಾನ ಮೊದಲ ಮುಖಾಮುಖಿ
ಕೊಲಂಬೊ/ನವದೆಹಲಿ: ಟಿ20 ವಿಶ್ವಕಪ್ (T20 World Cup) 10ನೇ ಆವೃತ್ತಿಯಲ್ಲಿ ಲೀಗ್ ಹಂತದ 40 ಪಂದ್ಯಗಳ ಬಳಿಕ ಸೂಪರ್-8 ಹಂತದ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಅಸೋಸಿಯೇಟ್ ತಂಡಗಳನ್ನೂ ಒಳಗೊಂಡ ಲೀಗ್ ಹಂತದಲ್ಲಿ ಕೆಲವು ನೀರಸ ಪಂದ್ಯಗಳಿದ್ದವು. ಆದರೆ ಸೂಪರ್-8 ಹಂತದಲ್ಲಿ ಆಡುವ ಎಲ್ಲ 8 ತಂಡಗಳು ಬಲಿಷ್ಠವಾಗಿದ್ದು, ಜಿದ್ದಾಜಿದ್ದಿನ ಕಾದಾಟದ ನಿರೀಕ್ಷೆ ಇದೆ. ಇದರಿಂದಾಗಿ "ಅಸಲಿ ವಿಶ್ವ ಸಮರ ಈಗ ಶುರು' ಎಂದು ಬಣ್ಣಿಸಬಹುದು.
ಲೀಗ್ ಹಂತದ 4 ಗುಂಪುಗಳಿಂದ ಅಗ್ರ 2 ತಂಡಗಳು ಸೂಪರ್-8 ಹಂತಕ್ಕೇರಿವೆ. ಸೂಪರ್-8 ಹಂತದಲ್ಲೂ ಎರಡು ಗುಂಪುಗಳಿವೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಭಾರತ ತಂಡವನ್ನು ಒಳಗೊಂಡ ಗ್ರೂಪ್-1ರ ಪಂದ್ಯಗಳು ಭಾರತದಲ್ಲಿ ನಡೆಯಲಿದ್ದರೆ, ಜಂಟಿ ಆತಿಥೇಯ ಶ್ರೀಲಂಕಾ ಮತ್ತು ಪಾಕಿಸ್ತಾನವನ್ನು ಒಳಗೊಂಡ ಗ್ರೂಪ್-2ರ ಪಂದ್ಯಗಳು ದ್ವೀಪರಾಷ್ಟ್ರದ ಆತಿಥ್ಯದಲ್ಲಿ ನಡೆಯಲಿವೆ. ಎರಡೂ ಗುಂಪಿನಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಸೂಪರ್-8 ಪಂದ್ಯಗಳು ನಡೆಯಲಿದ್ದು, ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ ಹಂತಕ್ಕೇರಲಿವೆ.
ಮಾರ್ಚ್ 1ರವರೆಗೆ ಸೂಪರ್-8 ಹಂತದ ಪಂದ್ಯಗಳು ನಡೆಯಲಿದ್ದು, ಮಾರ್ಚ್ 4, 5ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಮಾರ್ಚ್ 8ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.
ಗುಂಪು ವಿಂಗಡನೆಯಲ್ಲಿ ಲೋಪ: ಲೀಗ್ ಹಂತದಲ್ಲಿ ಅಜೇಯವಾಗುಳಿದ ಅಥವಾ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಎಲ್ಲ 4 ತಂಡಗಳು ಒಂದೇ ಗುಂಪಿನಲ್ಲಿವೆ. ಐಸಿಸಿ ಟೂರ್ನಿಗೆ ಮೊದಲೇ ನೀಡಿದ ಶ್ರೇಯಾಂಕದ ಅನ್ವಯ, ಸೂಪರ್-8ರಲ್ಲಿ ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇದರಿಂದಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳಿಗೆ ಯಾವುದೇ ಲಾಭ ಇಲ್ಲದಂತಾಗಿದೆ. ಗುಂಪಿನಲ್ಲಿ 2ನೇ ಸ್ಥಾನ ಪಡೆದ ತಂಡಗಳು ಒಂದೇ ಗುಂಪಿನಲ್ಲಿದ್ದು, ಲೀಗ್ನಲ್ಲಿ 2ನೇ ಸ್ಥಾನ ಪಡೆದ 2 ತಂಡಗಳಿಗೆ ಸೆಮಿಫೈನಲ್ಗೇರುವ ಅವಕಾಶ ಸಿಕ್ಕಂತಾಗಿದೆ ಮತ್ತು ಲೀಗ್ನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಸೂಪರ್-8ನಲ್ಲೇ ಹೊರಬೀಳುವುದು ಕೂಡ ಖಚಿತವಾಗಿದೆ.
ಗ್ರೂಪ್-1: ಭಾರತ, ಜಿಂಬಾಬ್ವೆ, ದಣ ಆಫ್ರಿಕಾ, ವೆಸ್ಟ್ ಇಂಡೀಸ್
ಗ್ರೂಪ್-2: ಪಾಕಿಸ್ತಾನ, ನ್ಯೂಜಿಲೆಂಡ್, ಶ್ರೀಲಂಕಾ, ಇಂಗ್ಲೆಂಡ್
ಸೂಪರ್-8 ಹಂತದಲ್ಲಿ ಎಲ್ಲ ತಂಡಗಳಿಗೆ ತಲಾ 3 ಪಂದ್ಯಗಳನ್ನು ಆಡುವ ಅವಕಾಶ ಲಭಿಸಲಿದೆ. ಈ ಪೈಕಿ ಎಲ್ಲ 3 ಪಂದ್ಯಗಳನ್ನು ಗೆದ್ದ ತಂಡ ಸೆಮಿಫೈನಲ್ಗೇರುವುದು ಖಚಿತ. ಇನ್ನು ಎರಡು ಪಂದ್ಯ ಗೆದ್ದ ತಂಡಕ್ಕೂ ಸೆಮಿಫೈನಲ್ಗೇರುವ ಅವಕಾಶ ಇರಲಿದೆ. ಆದರೆ ಒಂದು ಗುಂಪಿನ 3 ತಂಡಗಳು ತಲಾ 2 ಪಂದ್ಯ ಗೆದ್ದರೆ ಆಗ ರನ್ರೇಟ್ ನಿರ್ಣಾಯಕ ಪಾತ್ರ ವಹಿಸಲಿದೆ. ಇನ್ನು ಒಂದು ಪಂದ್ಯವನ್ನಷ್ಟೇ ಗೆದ್ದ ತಂಡ ಉಪಾಂತ್ಯಕ್ಕೇರುವ ಆಸೆ ಕೈಚೆಲ್ಲಬೇಕಾಗುತ್ತದೆ. ಆದರೆ ತೀರಾ ಅಪರೂಪದ ಸಂದರ್ಭ ಎದುರಾದರೆ, ಅಂದರೆ ಗುಂಪಿನಲ್ಲಿ ಒಂದು ತಂಡ ಎಲ್ಲ 3 ಪಂದ್ಯ ಗೆದ್ದು, ಉಳಿದ 3 ತಂಡಗಳು ತಲಾ ಒಂದರಲ್ಲಿ ಮಾತ್ರ ಗೆದ್ದರೆ ಆಗ ರನ್ರೇಟ್ ಲೆಕ್ಕಾಚಾರದ ಅನ್ವಯ ಸೆಮಿಫೈನಲ್ಗೇರಬಹುದು. ಆದರೆ ಒಂದು ಗುಂಪಿನಲ್ಲಿ 2 ತಂಡಗಳು ತಲಾ 2 ಪಂದ್ಯ ಗೆದ್ದರೆ ಆಗ 1 ಪಂದ್ಯ ಗೆದ್ದ ತಂಡ ಔಟ್ ಎನ್ನಬಹುದು. ಹೀಗಾಗಿ ಸೂಪರ್-8 ಹಂತದ ಪಂದ್ಯಗಳನ್ನು ಎಲ್ಲ ತಂಡಗಳು "ನಾಕೌಟ್' ಮಾದರಿಯಲ್ಲೇ ಆಡುವ ನಿರೀಕ್ಷೆ ಇದೆ.
ಪಾಕ್ ಎದುರು ಕಿವೀಸ್ಗೆ ಸ್ಪಿನ್ ಟೆಸ್ಟ್
ಸೂಪರ್-8 ಹಂತದಲ್ಲಿ ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಸೆಣಸಲಿವೆ. ಈ ಮುಖಾಮುಖಿಯಲ್ಲಿ ನ್ಯೂಜಿಲೆಂಡ್ ತಂಡದ ಬ್ಯಾಟರ್ಗಳು ಪಾಕಿಸ್ತಾನ ತಂಡದ ಸ್ಪಿನ್ ಬೌಲರ್ಗಳ ಸವಾಲು ಎದುರಿಸಲಿದ್ದಾರೆ. ಲೀಗ್ ಹಂತದಲ್ಲಿ ಉಭಯ ತಂಡಗಳು ತಲಾ 3 ಪಂದ್ಯಗಳಲ್ಲಿ ಗೆದ್ದಿವೆ. ಆದರೆ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋತಿದ್ದರೆ, ನ್ಯೂಜಿಲೆಂಡ್ ತಂಡ ಹಾಲಿ ರನ್ನರ್ಅಪ್ ದ. ಆಫ್ರಿಕಾ ಎದುರು ಮುಗ್ಗರಿಸಿತ್ತು. ಪಾಕ್ ತನ್ನ ಎಲ್ಲ ಪಂದ್ಯಗಳನ್ನು ಲಂಕಾದಲ್ಲೇ ಆಡುತ್ತಿದ್ದರೆ, ಕಿವೀಸ್ಗೆ ಇದು ಲಂಕಾದಲ್ಲಿ ಟೂರ್ನಿಯ ಮೊದಲ ಪಂದ್ಯವೆನಿಸಿದೆ. ಕಿವೀಸ್ ಆರಂಭಿಕರಾದ ಟಿಮ್ ಸೀರ್ಟ್ ಮತ್ತು ಫಿನ್ ಅಲೆನ್ ಒಟ್ಟಾರೆ 3 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಕಿವೀಸ್ ಮಧ್ಯಮ ಕ್ರಮಾಂಕ ಇನ್ನೂ ಸ್ಥಿರ ನಿರ್ವಹಣೆ ತೋರಿಸಿಲ್ಲ. ಲಂಕಾದ ಸ್ಪಿನ್ ಸ್ನೇಹಿ ಪಿಚ್ ಕಿವೀಸ್ಗೆ ಇನ್ನಷ್ಟು ಸತ್ವಪರೀಕ್ಷೆ ಒಡ್ಡಲಿದೆ. ವಿವಾದಾತ್ಮಕ ಸ್ಪಿನ್ನರ್ ಉಸ್ಮಾನ್ ತಾರಿಖ್ ಜತೆಗೆ ಅಬ್ರಾರ್ ಅಹ್ಮದ್, ಸೈಮ್ ಆಯುಬ್, ಶಾದಾಬ್ ಖಾನ್, ಮೊಹಮದ್ ನವಾಜ್, ನಾಯಕ ಸಲ್ಮಾನ್ ಅಘಾ ಸ್ಪಿನ್ ದಾಳಿಯ ಸವಾಲು ಎದುರಾಗಲಿದೆ. ಪಾಕಿಸ್ತಾನಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಸಾಹಿಬ್ಜಾದಾ ರ್ಹಾನ್ (220) ಆಸರೆಯಾಗಿದ್ದರೂ, ಅನುಭವಿ ಬಾಬರ್ ಅಜಮ್ ರನ್ಬರದೊಂದಿಗೆ ಸ್ಟ್ರೈಕ್ರೇಟ್ ಕೂಡ ನೀರಸವೆನಿಸಿದೆ. ಭಾರತ ವಿರುದ್ಧ ದುಬಾರಿ ಎನಿಸಿದ್ದ ವೇಗಿ ಶಹೀನ್ ಷಾ ಅಫ್ರಿದಿ ಅವರನ್ನು ನಮೀಬಿಯಾ ಎದುರು 11ರ ಬಳಗದಿಂದ ಕೈಬಿಟ್ಟಿದ್ದ ಪಾಕ್, ಈ ಬಾರಿ ಬಾಬರ್ರನ್ನೂ ಹೊರಗಿಟ್ಟು ಖರ್ ಜಮಾನ್ಗೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ. ನಾಯಕ ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್ ಒಳಗೊಂಡ ಕಿವೀಸ್ ಸ್ಪಿನ್ ವಿಭಾಗವೂ ಪರಿಣಾಮಕಾರಿ ಎನಿಸುವ ಸಾಮರ್ಥ್ಯ ಹೊಂದಿದೆ. ವೇಗದ ಬೌಲಿಂಗ್ನಲ್ಲಿ ಲಾಕಿ ಫಗ್ಯುರ್ಸನ್, ಮ್ಯಾಟ್ ಹೆನ್ರಿ, ಜೇಕಬ್ ಡಫಿ, ಜೇಮ್ಸ್ ನೀಶಮ್ ಬಲ ತುಂಬಲಿದ್ದಾರೆ.
ಪಾಕ್ ವಿರುದ್ಧದ ಕೊನೇ 16 ಟಿ20 ಪಂದ್ಯಗಳಲ್ಲಿ 12ರಲ್ಲಿ ಕಿವೀಸ್ ಜಯಿಸಿದೆ. ಆದರೆ ಟಿ20 ವಿಶ್ವಕಪ್ನಲ್ಲಿ ಕಿವೀಸ್ ವಿರುದ್ಧ ಪಾಕ್ ಉತ್ತಮ ದಾಖಲೆ ಹೊಂದಿದೆ.
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್