T20 WorldCup Final  
ಕ್ರಿಕೆಟ್

T20 WorldCup Final : ಬುಮ್ರಾ ಕೂಡ ಮನುಷ್ಯನೇ, ಅವರಿಗೂ ಕೆಟ್ಟ ದಿನವಿರಬಹುದು! ಕಿವೀಸ್ ಆಟಗಾರ ಗ್ಲೆನ್ ಫಿಲಿಪ್ಸ್ ಲೇವಡಿ

ಅಹಮದಾಬಾದ್: ಭಾನುವಾರ ನಡೆಯಲಿರುವ ಟಿ20 ವಿಶ್ವಕಪ್‌ನ(T20 WorldCup Final ) ಮಹಾಫೈನಲ್ ಪಂದ್ಯಕ್ಕೂ ಮುನ್ನವೇ ಮೈದಾನದ ಹೊರಗೆ ಮಾತಿನ ಚಕಮಕಿ ತಾರಕಕ್ಕೇರಿದೆ.
ಹೌದು, ಹಾಲಿ ಚಾಂಪಿಯನ್ ಭಾರತ ಮತ್ತು ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗುತ್ತಿದ್ದು, ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಗುರಿಯಾಗಿಸಿಕೊಂಡು ಕಿವೀಸ್ ಆಟಗಾರ ಗ್ಲೆನ್ ಫಿಲಿಪ್ಸ್ ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 254 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ಸೋಲಲು ಬುಮ್ರಾ ಎಸೆದ 18ನೇ ಓವರ್ ಪ್ರಮುಖ ಕಾರಣವಾಗಿತ್ತು. ಕೇವಲ 6 ರನ್ ನೀಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದ್ದ ಬುಮ್ರಾ ಬಗ್ಗೆ ಪ್ರತಿಕ್ರಿಯಿಸಿರುವ ಫಿಲಿಪ್ಸ್, "ಬುಮ್ರಾ ಕೂಡ ಮನುಷ್ಯನೇ. ನಮಗಿರುವಂತೆ ಅವರಿಗೂ ಕೆಟ್ಟ ದಿನವಿರಲು ಸಾಧ್ಯವಿದೆ. ಭಾನುವಾರ ಅವರಿಗೆ ಅಂತಹ ದಿನವಾಗಲಿ ಎಂದು ನಾವು ಆಶಿಸುತ್ತೇವೆ," ಎಂದಿದ್ದಾರೆ.

ಹಳೆಯ ಅಂಕಿ-ಅಂಶಗಳ ಮೇಲೆ ಕಿವೀಸ್ ಕಣ್ಣು!

ಈ ವರ್ಷದ ಆರಂಭದಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಭಾರತ 4-1 ಅಂತರದಲ್ಲಿ ಗೆದ್ದಿದ್ದರೂ, ಬುಮ್ರಾ ವಿರುದ್ಧ ನ್ಯೂಜಿಲೆಂಡ್ ಬ್ಯಾಟರ್‌ಗಳು ಯಶಸ್ಸು ಕಂಡಿದ್ದರು. ಆ ಸರಣಿಯಲ್ಲಿ ಬುಮ್ರಾ ಪ್ರತಿ ಓವರ್‌ಗೆ ಸರಾಸರಿ 9.46 ರನ್ ನೀಡಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡಿರುವ ಫಿಲಿಪ್ಸ್, ಬುಮ್ರಾ ಲಯ ತಪ್ಪಿದರೆ ಅವರನ್ನು ದಂಡಿಸಲು ನಾವು ಸಿದ್ಧರಿದ್ದೇವೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರು ಭಾರತವನ್ನು ಬೆಂಬಲಿಸಲಿದ್ದಾರೆ. "ಜನರು ಯಾರನ್ನೇ ಬೆಂಬಲಿಸಿದರೂ ನಾವು ಆಟವನ್ನು ಆನಂದಿಸುತ್ತೇವೆ," ಎಂದು ಫಿಲಿಪ್ಸ್ ಹೇಳಿದ್ದಾರೆ.
ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತನ್ನ ಎರಡನೇ ಫೈನಲ್ ಪ್ರವೇಶದಲ್ಲಿ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯುವ ಕನಸು ಕಾಣುತ್ತಿದೆ. ಆದರೆ ಭಾರತದ ಭದ್ರಕೋಟೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ ಎಂಬುದು ಕಿವೀಸ್ ಪಡೆಗೂ ತಿಳಿದಿದೆ,(ಏಜೆನ್ಸೀಸ್).