ಟಿ20 ವಿಶ್ವಕಪ್: ದ. ಆಫ್ರಿಕಾ-ವಿಂಡೀಸ್ ಮಹತ್ವದ ಕಾದಾಟ; ಇದರ ಫಲಿತಾಂಶ ಭಾರತಕ್ಕೂ ನಿರ್ಣಾಯಕ!
ಅಹಮದಾಬಾದ್: ಲೀಗ್ ಹಂತದ ಸತತ 4 ಗೆಲುವಿನ ಬಳಿಕ, ಸೂಪರ್-8 ಹಂತದ ಆರಂಭಿಕ ಪಂದ್ಯದಲ್ಲಿ ಬೃಹತ್ ಗೆಲುವು ದಾಖಲಿಸಿ ಬೀಗಿರುವ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟಿ20 ವಿಶ್ವಕಪ್ನಲ್ಲಿ (T20 World Cup) ಗುರುವಾರ ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ಗೇರುವ ಅವಕಾಶ ವೃದ್ಧಿಸಲಿದೆ. ಈ ಪಂದ್ಯ ಭಾರತದ ಪಾಲಿಗೂ ಮಹತ್ವದ್ದಾಗಿದ್ದು, ಹರಿಣಗಳು ಗೆದ್ದರೆ (ಅಥವಾ ದ. ಆಫ್ರಿಕಾ ತಂಡ ವಿಂಡೀಸ್, ಜಿಂಬಾಬ್ವೆ ಎರಡೂ ತಂಡಗಳ ವಿರುದ್ಧ ಸೋತರೆ) ಭಾರತ ರನ್ರೇಟ್ ಲೆಕ್ಕಾಚಾರವನ್ನು ನೆಚ್ಚಿಕೊಳ್ಳದೆ, ಸತತ 2 ಜಯದೊಂದಿಗೆ ಉಪಾಂತ್ಯಕ್ಕೇರಬಹುದಾಗಿದೆ.
ದ. ಆಫ್ರಿಕಾ ಕಳೆದ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಮಣಿಸಿದ ಆತ್ಮವಿಶ್ವಾಸದಲ್ಲಿದ್ದು, ಕಳೆದ ಬಾರಿ ಕೈತಪ್ಪಿದ್ದ ಪ್ರಶಸ್ತಿಯನ್ನು ಈ ಬಾರಿ ಒಲಿಸಿಕೊಳ್ಳುವ ಹಂಬಲದಲ್ಲಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ಕಳೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ರನ್ಮಳೆ ಹರಿಸಿದ್ದು, ಮೂರನೇ ಬಾರಿ ಉಪಖಂಡದಲ್ಲೇ ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ತವಕದಲ್ಲಿದೆ. ಉಭಯ ತಂಡಗಳು ಸ್ಫೋಟಕ ಬ್ಯಾಟರ್ಸ್ ಮತ್ತು ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿವೆ. ಆದರೆ ವಿಂಡೀಸ್ಗೆ ಇದು ನಮೋ ಸ್ಟೇಡಿಯಂನಲ್ಲಿ ಟೂರ್ನಿಯ ಮೊದಲ ಪಂದ್ಯವಾಗಿದ್ದರೆ, ಹರಿಣಗಳು ಈಗಾಗಲೆ ಇಲ್ಲಿ ಕೆಲ ಪಂದ್ಯಗಳನ್ನು ಆಡಿದ ಲಾಭ ಹೊಂದಿದ್ದಾರೆ. ವಿಂಡೀಸ್ ಪರ ಶಿಮ್ರೊನ್ ಹೆಟ್ಮೆಯರ್ ಮತ್ತು ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಮಧ್ಯಮ ಕ್ರಮಾಂಕದ ಬಲ ಆಗಿದ್ದಾರೆ.
ಈ ಪಂದ್ಯದಲ್ಲಿ ಸೋತ ತಂಡಕ್ಕೂ ಸೆಮೀಸ್ ಆಸೆ ಜೀವಂತವಿರಲಿದ್ದು, ದ. ಆಫ್ರಿಕಾ ಕೊನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಮತ್ತು ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಗೆದ್ದು ಉಪಾಂತ್ಯಕ್ಕೇರಬಹುದಾಗಿದೆ.
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.