- ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಪಂದ್ಯಗಳು ಶುರು
- ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ತಂಡಗಳಿಗೂ ಬಹುಮಾನ ಹಣ
- ಗೆಲುವನ್ನೇ ನೋಡದ ತಂಡಗಳಿಗೂ ಹೊಡೆದಿದೆ ಜಾಕ್ಪಾಟ್
ನವದೆಹಲಿ: ಟಿ20 ವಿಶ್ವಕಪ್ 2026 ಟೂರ್ನಿಯಲ್ಲಿ 8 ತಂಡಗಳು ಇದೀಗ ಸೂಪರ್ 8 ಹಂತವನ್ನು ಪ್ರವೇಶಿಸಿದ್ದು, ಇಂದಿನಿಂದ ಸೆಮಿಫೈನಲ್ಗೆ ತಲುಪಲು ಭಾರೀ ಹಣಾಹಣಿ ನಡೆಯಲಿದೆ. 20 ತಂಡಗಳೊಂದಿಗೆ ಆರಂಭವಾದ ಈ ಮೆಗಾ ಟೂರ್ನಮೆಂಟ್‌ನಲ್ಲಿ, 12 ತಂಡಗಳು ಈಗಾಗಲೇ ತವರಿಗೆ ವಾಪಾಸ್ ಆಗಿವೆ. ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ನಂತಹ ಬಲಿಷ್ಠ ತಂಡಗಳು ಸೆಮಿಫೈನಲ್ಗೆ ಎಂಟ್ರಿಕೊಡಲಿವೆ ಎಂಬ ಲೆಕ್ಕಾಚಾರಗಳ ಒಂದೆಡೆಯಾದರೆ, ಈ ಟೂರ್ನಮೆಂಟ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲದ ಟೀಮ್ಗಳು ಬರಿಗೈಯಲ್ಲಿ ಹಿಂತಿರುಗಿಲ್ಲ. ಬದಲಿಗೆ ಕೋಟ್ಯಂತರ ರೂಪಾಯಿ ಬಹುಮಾನದ ಹಣದೊಂದಿಗೆ ತವರಿಗೆ ಮರಳಿವೆ.
ಖಾತೆ ತೆರೆಯದ ಮೂರು ತಂಡಗಳಿವು
ಟಿ20 ವಿಶ್ವಕಪ್ ಟೂರ್ನಿಯಲ್ಲಿ, ಒಟ್ಟು ಮೂರು ತಂಡಗಳು ಆಡಿದ ನಾಲ್ಕು ಲೀಗ್ ಪಂದ್ಯಗಳಲ್ಲಿ ಸೋತಿವೆ. 'ಗ್ರೂಪ್-ಎ'ನಲ್ಲಿದ್ದ ನಮೀಬಿಯಾವನ್ನು ಭಾರತ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ಮತ್ತು ಯುಎಸ್‌ಎ ಸೋಲಿಸಿತು. ಎರಡನೆಯದು ಕೆನಡಾ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಈ ತಂಡಕ್ಕೆ ಸಾಧ್ಯವಾಗಲಿಲ್ಲ. ಇನ್ನು ಮೂರನೆಯದು ಓಮನ್. ಈ ತಂಡವು ಜಿಂಬಾಬ್ವೆ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ವಿರುದ್ಧ ಹೀನಾಯ ಸೋಲುಂಡಿತು. ಉಳಿದ 17 ತಂಡಗಳು ಟೂರ್ನಿಯಲ್ಲಿ ಕನಿಷ್ಠ ಒಂದು ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿವೆ ಎಂಬುದು ಗಮನಾರ್ಹ.
ಪ್ರತಿ ತಂಡಕ್ಕೆ 2 ಕೋಟಿ ರೂ. ಬಹುಮಾನ ಹಣ
ಐಸಿಸಿ ನಿಯಮಗಳ ಅನುಸಾರ, ಈ ಮೆಗಾ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡವು ಅವರ ಶ್ರೇಯಾಂಕದ ಆಧಾರದ ಮೇಲೆ ಬಹುಮಾನ ಹಣವನ್ನು ಪಡೆಯುತ್ತದೆ. ಹಿಂದಿನ ಅಂಕಿಅಂಶಗಳ ಪ್ರಕಾರ, ಈ ಟೂರ್ನಮೆಂಟ್‌ನಲ್ಲಿ 13ರಿಂದ 20ನೇ ಸ್ಥಾನದಲ್ಲಿರುವ ತಂಡಗಳಿಗೆ ಸುಮಾರು 225,000 ಡಾಲರ್ ನೀಡಲಾಗುತ್ತದೆ. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 2 ಕೋಟಿ ರೂ.ಗೆ ಸಮ.
ಇನ್ನು 9ರಿಂದ 12ನೇ ಸ್ಥಾನದಲ್ಲಿರುವ ತಂಡಗಳು ಸುಮಾರು 2.25 ಕೋಟಿ ರೂ. (247,500 ಡಾಲರ್) ಪಡೆಯುತ್ತವೆ. ಅದರಂತೆ, ಒಂದೇ ಒಂದು ಪಂದ್ಯವನ್ನು ಗೆಲ್ಲದ ಓಮನ್, ನಮೀಬಿಯಾ ಮತ್ತು ಕೆನಡಾದಂತಹ ತಂಡಗಳೂ ಸಹ ಐಸಿಸಿಯಿಂದ ಕನಿಷ್ಠ 2 ಕೋಟಿ ರೂ. ಹಣವನ್ನು ಬಹುಮಾನದ ರೂಪದಲ್ಲಿ ಪಡೆಯಲಿದೆ.
ಬಹುಮಾನದ ಹಣ ಯಾವುದಕ್ಕೆ ಉಪಯೋಗ?
ಸಹವರ್ತಿ ರಾಷ್ಟ್ರಗಳಾಗಿರುವ ಈ ತಂಡಗಳಿಗೆ ನೀಡಲಾಗುವ ಬಹುಮಾನ ಹಣವನ್ನು ಆಯಾ ದೇಶಗಳಲ್ಲಿ ಕ್ರಿಕೆಟ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು, ಯುವ ಆಟಗಾರರನ್ನು ಉತ್ತೇಜಿಸಲು ಮತ್ತು ಮುಂದಿನ ಅಂತಾರಾಷ್ಟ್ರೀಯ ಟೂರ್ನಿ ಆಯೋಜಿಸಲು ಅಥವಾ ನಡೆಸಲು ತಯಾರಿಗೆ ಬಳಸಲಾಗುತ್ತದೆ,(ಏಜೆನ್ಸೀಸ್).