ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಗೆಲುವಿನ ಕಾರಣಗಳು...
ಬೆಂಗಳೂರು: ಟೀಮ್ ಇಂಡಿಯಾ 3ನೇ ಬಾರಿ ಟಿ20 ವಿಶ್ವಕಪ್ (T20 World Cup) ಜಯಿಸುವಲ್ಲಿ ಹಲವು ವ್ಯಕ್ತಿಗಳು, ನಿರ್ಧಾರಗಳು ಮತ್ತು ಸನ್ನಿವೇಶಗಳು ಪ್ರಮುಖ ಪಾತ್ರ ವಹಿಸಿವೆ. ಇದು ಬರೀ ಟೂರ್ನಿ ಆರಂಭಗೊಂಡ ಬಳಿಕವಷ್ಟೇ ಅಲ್ಲ, ರೋಹಿತ್ ಶರ್ಮ-ವಿರಾಟ್ ಕೊಹ್ಲಿ ಅವರ ಟಿ20 ನಿವೃತ್ತಿಯ ನಂತರ ಕಳೆದ 2 ವರ್ಷಗಳಿಂದ ಭಾರತ ತಂಡವನ್ನು ಬಲಿಷ್ಠವಾಗಿ ಕಟ್ಟುವ ಪ್ರಕ್ರಿಯೆಯ ಭಾಗವಾಗಿದ್ದವು. ಭಾರತ ತಂಡ ಯಶಸ್ಸಿಗೆ ನೆರವಾದ ಅಂಥ ಕೆಲ ಪ್ರಮುಖಾಂಶಗಳ ಸಂಪ್ತ ವಿವರ ಇಲ್ಲಿದೆ...
ಮ್ಯಾನೇಜ್ಮೆಂಟ್ ದಿಟ್ಟ ನಿರ್ಧಾರ
ಭಾರತ ತಂಡದ ಯಶಸ್ಸಿನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತೆಗೆದುಕೊಂಡ ಕೆಲವು ದಿಟ್ಟ ನಿರ್ಧಾರಗಳೂ ಪ್ರಮುಖ ಪಾತ್ರವಹಿಸಿವೆ. 2024ರ ವಿಶ್ವಕಪ್ ಬಳಿಕ ರೋಹಿತ್ ಶರ್ಮ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ಗೆ ನಾಯಕತ್ವ ನೀಡಿದಲ್ಲಿಂದಲೇ ಟಿ20 ತಂಡದ ಆಯ್ಕೆಯಲ್ಲಿ ಕೆಲ ನಿಷ್ಠುರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೂಪರ್ಸ್ಟಾರ್ ಸಂಸತಿಗೆ ಮನ್ನಣೆ ನೀಡದೆ ತಂಡದ ಹಿತದೃಷ್ಟಿಯನ್ನೇ ಗಮನದಲ್ಲಿಟ್ಟುಕೊಂಡು ಟಿ20 ವಿಶ್ವಕಪ್ ತಂಡದಿಂದ ಉಪನಾಯಕ ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್, ಫಿನಿಷರ್ ಜಿತೇಶ್ ಶರ್ಮರನ್ನು ಕೈಬಿಡಲಾಗಿತ್ತು. ಕಿಶನ್ ಮಾತ್ರವಲ್ಲ, ಕಳೆದ 2 ವರ್ಷಗಳಿಂದ ಟಿ20 ಆಡಿರದ ವೇಗಿ ಮೊಹಮದ್ ಸಿರಾಜ್ರನ್ನು ಕೊನೇಕ್ಷಣದಲ್ಲಿ ತಂಡಕ್ಕೆ ಸೇರಿಸಲು ಕೂಡ ಹಿಂದೇಟು ಹಾಕಲಿಲ್ಲ.
ಭಾರತ ಆಡಿದ ಕೊನೇ 3 ಪಂದ್ಯಗಳಲ್ಲಿ ರನ್ಪ್ರವಾಹ ಹರಿದು ಬೌಲರ್ಗಳು ತೀವ್ರ ದಂಡನೆಗೆ ಒಳಗಾದ ನಡುವೆಯೂ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಬಿಗಿ ದಾಳಿಯೊಂದಿಗೆ ಎದುರಾಳಿಯನ್ನು ಕಾಡಿದರು. ಈ ಮೂಲಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅದರಲ್ಲೂ ಅವರ ಶ್ರೇಷ್ಠ ಬೌಲಿಂಗ್ (15ಕ್ಕೆ 4) ಫೈನಲ್ ಪಂದ್ಯದಲ್ಲಿ ಹೊರಹೊಮ್ಮಿದ್ದು ವಿಶೇಷವಾಗಿತ್ತು. ಇಂಗ್ಲೆಂಡ್ ವಿರುದ್ಧದ ಸೆಮೀಸ್ನಲ್ಲಿ ಭಾರತ 253 ರನ್ ಸಿಡಿಸಿಯೂ ಸೋಲುವ ಭೀತಿ ಎದುರಿಸಿದಾಗ ಬುಮ್ರಾ ಇನಿಂಗ್ಸ್ನ 18ನೇ ಓವರ್ನಲ್ಲಿ ಕೇವಲ 6 ರನ್ ಬಿಟ್ಟುಕೊಟ್ಟಿದ್ದು ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿತು.
ಸ್ಯಾಮ್ಸನ್ ಸ್ಪೆಷಲ್ ಇನಿಂಗ್ಸ್
ಕೇರಳದ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರೂ, ಅಸ್ಥಿರ ನಿರ್ವಹಣೆಯಿಂದಾಗಿ ಎಂದೂ ತಂಡದಲ್ಲಿ ಭದ್ರ ಸ್ಥಾನ ಕಂಡಿರಲಿಲ್ಲ. ಟಿ20 ವಿಶ್ವಕಪ್ಗೆ ಮುನ್ನವೂ ರನ್ಬರ ಎದುರಿಸಿದ್ದ ಅವರನ್ನು ಆರಂಭದಲ್ಲಿ ಆಡುವ 11ರ ಬಳಗಕ್ಕೆ ಪರಿಗಣಿಸಿರಲಿಲ್ಲ. ಆದರೆ ತಂಡದ ಅಗ್ರ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಸ್ಯಾಮ್ಸನ್ಗೆ ಟೂರ್ನಿಯ ನಿರ್ಣಾಯಕ ಹಂತದಲ್ಲಿ ಮತ್ತೆ ಅವಕಾಶ ಕಲ್ಪಿಸಲಾಯಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಅವರು ವಿಂಡೀಸ್ ವಿರುದ್ಧದ ನಿರ್ಣಾಯಕ ಸೂಪರ್-8 ಪಂದ್ಯ, ಸೆಮೀಸ್, ಫೈನಲ್ನಲ್ಲಿ ಭಾರತದ ಗೆಲುವಿನ ರೂವಾರಿ ಎನಿಸಿದರು.
ಕ್ಯಾಚ್ಗಳು ಪಂದ್ಯ ಗೆಲ್ಲಿಸುತ್ತವೆ ಎಂಬುದು ಸುಳ್ಳಲ್ಲ. 1983ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ನಾಯಕ ಕಪಿಲ್ ದೇವ್ ಹಿಡಿದ ವಿವ್ ರಿಚರ್ಡ್ಸ್ ಅವರ ಕ್ಯಾಚ್, 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಶ್ರೀಶಾಂತ್ ಹಿಡಿದ ಮಿಸ್ಬಾ ಉಲ್ ಹಕ್ ಕ್ಯಾಚ್, 2024ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಸೂರ್ಯಕುಮಾರ್ ಬೌಂಡರಿ ಗೆರೆ ಬಳಿ ಹಿಡಿದ ಡೇವಿಡ್ ಮಿಲ್ಲರ್ ಕ್ಯಾಚ್ಗಳು ಭಾರತಕ್ಕೆ ಕಪ್ ಗೆದ್ದುಕೊಟ್ಟಿದ್ದವು. ಈ ಬಾರಿ ಅದೇ ರೀತಿಯ 2 ಅದ್ಭುತ ಕ್ಯಾಚ್ಗಳನ್ನು ಅಕ್ಷರ್ ಪಟೇಲ್ ಸೆಮಿಫೈನಲ್ನಲ್ಲಿ ಹಿಡಿದಿದ್ದರು. ಮೊದಲಿಗೆ ಇಂಗ್ಲೆಂಡ್ ನಾಯ ಹ್ಯಾರಿ ಬ್ರೂಕ್ ಕ್ಯಾಚ್ಅನ್ನು ಸುಮಾರು 18 ಮೀಟರ್ ದೂರ ಓಡಿ ಹೋಗಿ ಹಿಡಿದರು. ಬಳಿಕ ವಿಲ್ ಜಾಕ್ಸ್ ಹೊಡೆದ ಚೆಂಡನ್ನು ಹಿಡಿದು ಬೌಂಡರಿ ಗೆರೆ ದಾಟುವ ಮುನ್ನ ಶಿವಂ ದುಬೆಗೆ ಪಾಸ್ ಮಾಡಿದರು. ಇವೆರಡು ಕ್ಯಾಚ್ಗಳು ಭಾರತ ಫೈನಲ್ಗೇರುವಲ್ಲಿ ಮಹತ್ವದ್ದಾಗಿದ್ದವು.
ಟಿ20 ಕ್ರಿಕೆಟ್ನಲ್ಲಿ ಕಳೆದ 2 ವರ್ಷಗಳಿಂದ ಸತತ ಗೆಲುವನ್ನೇ ಕಂಡಿದ್ದರಿಂದ ಭಾರತ ತಂಡದ ಕೆಲ ದೌರ್ಬಲ್ಯಗಳು ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಬಂದರೂ ಗೆಲುವಿನ ಓಟದ ನಡುವೆ ಅದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದ. ಆಫ್ರಿಕಾ ಎದುರು ಕಂಡ ಸೋಲು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಇದರಿಂದ ಎಚ್ಚೆತ್ತ ಭಾರತ ತಂಡ ಎಡಗೈ ಬ್ಯಾಟರ್ಗಳಿಂದಲೇ ತುಂಬಿದ್ದ ಅಗ್ರ ಕ್ರಮಾಂಕದಲ್ಲಿ ಬಲಗೈ ಬ್ಯಾಟರ್ಗೂ (ಸ್ಯಾಮ್ಸನ್) ಅವಕಾಶ ಕಲ್ಪಿಸಿತು. ಫೀಲ್ಡಿಂಗ್ ವಿಭಾಗವನ್ನು ಸುಧಾರಿಸಲು ಆದ್ಯತೆ ನೀಡಿತು. ಆಫ್ ಸ್ಪಿನ್ನರ್ ಎದುರಿನ ವೈಫಲ್ಯವನ್ನೂ ನಿವಾರಿಸಲು ಪ್ರಯತ್ನಿಸಿತು.
ಕೊನೇಕ್ಷಣದಲ್ಲಿ ಕಿಶನ್ ಸೇರ್ಪಡೆ
ಕಳೆದ 2 ವರ್ಷಗಳಿಂದ ಭಾರತ ತಂಡದಿಂದ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ರನ್ನು ಕೊನೇಕ್ಷಣದಲ್ಲಿ ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡ ಭಾರತದ ನಡೆ ನಿರ್ಣಾಯಕ ಎನಿಸಿತು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಒಟ್ಟಾರೆ 517 ರನ್ ಮತ್ತು ಫೈನಲ್ ಶತಕ ಸಿಡಿಸಿ ಜಾರ್ಖಂಡ್ ಗೆಲುವಿನ ರೂವಾರಿ ಎನಿಸಿದ್ದ ಕಿಶನ್ರ ಭರ್ಜರಿ ಫಾರ್ಮ್ಗೆ ಮನ್ನಣೆ ನೀಡಿದ್ದು ಲಾಭದಾಯಕ ಎನಿಸಿತು.