ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ಅಮೀರ್
- ಟೀಮ್ ಇಂಡಿಯಾ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟ ಪಾಕ್ ಕ್ರಿಕೆಟಿಗ
- ಈ ಮೊದಲು ಅಭಿಷೇಕ್ ಶರ್ಮ ಬಗ್ಗೆ ವ್ಯಂಗ್ಯವಾಡಿದ್ದ ಮೊಹಮ್ಮದ್ ಅಮೀರ್
- ಈಗ ಸೆಮಿಫೈನಲ್ಗೆ ಭಾರತ ಎಂಟ್ರಿ ಕೊಡುವುದಿಲ್ಲ ಎಂದು ಹೇಳಿಕೆ
ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸರಣಿ ಗೆಲುವು ಸಾಧಿಸಿ, ಇದೀಗ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಗೆಲುವಿನ ಓಟ ಮುಂದುವರೆಸಿದೆ. ಈಗಾಗಲೇ ಸೂಪರ್ 8 ಹಂತಕ್ಕೆ ನೇರ ಪ್ರವೇಶ ಪಡೆದಿರುವ ಸೂರ್ಯಕುಮಾರ್ ಯಾದವ್ ಪಡೆ ಯಾವುದೇ ಕಾರಣಕ್ಕೂ ಸೆಮಿಫೈನಲ್ಗೆ ಪ್ರವೇಶಿಸುವುದಿಲ್ಲ ಎಂದು ಪಾಕಿಸ್ತಾನಿ ಆಟಗಾರ ಮೊಹಮ್ಮದ್ ಅಮಿರ್ ಹೇಳಿದ್ದಾರೆ. ಇದಕ್ಕೆ ಕಾರಣ ಕೂಡ ಬಹಿರಂಗಪಡಿಸಿದ್ದಾರೆ.
ನಾಲಿಗೆ ಹರಿಬಿಟ್ಟ ಪಾಕಿ
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, ಭಾರತ ಪರ ಸ್ಫೋಟಕ ಇನ್ನಿಂಗ್ಸ್ ಆಡುವ ಅಭಿಷೇಕ್ ಶರ್ಮ ಟಿ20 ವಿಶ್ವಕಪ್ನಲ್ಲಿ ಬ್ಯಾಕ್ ಟು ಬ್ಯಾಕ್ ಡಕ್ಔಟ್ ಆಗಿದ್ದಕ್ಕೆ ಲೇವಡಿ ಮಾಡಿದ್ದ ಅಮೀರ್, "ಅಭಿಷೇಕ್ ಒಬ್ಬ ಅದ್ಭುತ ಬ್ಯಾಟರ್ ಏನಲ್ಲ. ಆತ ಟೆಕ್ನಿಕ್ ಇಲ್ಲದೆ ಆಡುವ ಕ್ರಿಕೆಟಿಗ. ಅಭಿಷೇಕ್ರನ್ನು ನಾನು ನಮ್ಮದೇ ತಂಡದ ಬ್ಯಾಟರ್ ಸೈಮ್ ಆಯುಬ್ಗೆ ಹೋಲಿಸುತ್ತೇನೆ. ಕಾರಣ, ಆಯುಬ್ ಬಂದಾಗ ಅವನಿಗೆ ಯಾವ ಕಡೆ ಹೊಡೆಯಬೇಕು ಅನ್ನೋದೇ ಗೊತ್ತಿರಲಿಲ್ಲ. ಆಡಬಾರದ ಜಾಗದಲ್ಲಿ ಆಡ್ತಿದ್ದ. ಲೆಗ್ಸೈಡ್ ರನ್ಗಳನ್ನು ಕಲೆಹಾಕುತ್ತಿದ್ದ. ಬಾಲ್ ನಾಲ್ಕನೇ ಅಥವಾ ಐದನೇ ಸ್ಟಂಪ್ನತ್ತ ಬಂದರೆ ಅವನಿಗೆ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಅಭಿಷೇಕ್ ಕೂಡ ಹಾಗೆಯೇ" ಎಂದಿದ್ದ. ಈಗ ಟೀಮ್ ಇಂಡಿಯಾ ಸೆಮಿಫೈನಲ್ ಹೋಗುವುದು ಕನಸು ಎಂದು ನಾಲಿಗೆ ಹರಿಬಿಟ್ಟಿರುವುದು ಸದ್ಯ ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ.
ಬ್ಯಾಟಿಂಗ್ ಲೈನ್ಅಪ್ ಕುಸಿದಿದೆ
'ಹಾರ್ನ ಮನ ಹೈನ್' ಶೋನಲ್ಲಿ ಈ ಕುರಿತಂತೆ ಮಾತನಾಡಿದ ಅಮೀರ್ಗೆ ಒಂದು ಟಾಸ್ಕ್ ನೀಡಲಾಯಿತು. ಈಗ ಸೂಪರ್-8 ಹಂತಕ್ಕೆ ಹೋಗಿರುವ 8 ತಂಡಗಳ ಪೈಕಿ ಪ್ರತಿ ಗುಂಪಿನಿಂದ ಯಾವ ಎರಡು ತಂಡ ಸೆಮಿಫೈನಲ್ಗೆ ಪ್ರವೇಶಿಸಲಿದೆ ಎನ್ನುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಾಕ್ ಕ್ರಿಕೆಟಿಗ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಹೋಗುತ್ತದೆ. ಆದರೆ, ಭಾರತ ಮಾತ್ರ ಸೆಮಿಫೈನಲ್ಗೆ ಲಗ್ಗೆ ಇಡೋದಿಲ್ಲ ಎಂದು ಪರೋಕ್ಷವಾಗಿ ಟೀಮ್ ಇಂಡಿಯಾಗೆ ಕುಟುಕಿದರು.
ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಹೊರತುಪಡಿಸಿದರೆ ಇನ್ನೆಲ್ಲ ಪಂದ್ಯಗಳಲ್ಲಿಯೂ ಭಾರತದ ಬ್ಯಾಟಿಂಗ್ ಲೈನ್ಅಪ್ ಕುಸಿದಿದೆ. ಉತ್ತಮವಾಗಿ ಆಡಿಲ್ಲ. ಅದೇ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಅದ್ಭುತವಾಗಿ ಆಡಿಕೊಂಡು ಬಂದಿದ್ದಾರೆ. ಈ ತಂಡಗಳು ಇನ್ಯಾವುದೇ ಟೀಮ್ಗಳನ್ನು ಮಣಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಾರಣ ಸಹಿತ ಉತ್ತರಿಸಿದ್ದಾರೆ. ಅಸಲಿಗೆ, ಇಲ್ಲಿ ಭಾರತದ ಬಗ್ಗೆ ಮಾತೇ ಇರಲಿಲ್ಲ. ಆದರೂ ಸಹ ಕೆಣಕುವ ಪ್ರಯತ್ನಕ್ಕೆ ಮುಂದಾಗಿರುವುದು ಪಾಕಿಸ್ತಾನದ ನರಿಬುದ್ಧಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂಬುದರಲ್ಲಿ ಅನುಮಾನವಿಲ್ಲ.
ಅಭಿಷೇಕ್ ಶರ್ಮ ಕುರಿತು ವ್ಯಂಗ್ಯ
ಅಭಿಷೇಕ್ ಶರ್ಮ ಅಂತಹ ಬ್ಯಾಟರ್ ಏನಲ್ಲ. ಆತ ಟೆಕ್ನಿಕ್ ಇಲ್ಲದೆ ಆಡುವ ಕ್ರಿಕೆಟಿಗ. ಅಪರೂಪಕ್ಕೆ ಚೆನ್ನಾಗಿ ಆಡುತ್ತಾನೆ. ಅದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನವೇ ಹೆಚ್ಚು. 8 ಇನ್ನಿಂಗ್ಸ್ನಲ್ಲಿ ಯಾವುದೋ ಒಂದರಲ್ಲಿ ಉತ್ತಮವಾಗಿ ಆಡಿರ್ತಾನೆ. ಇಲ್ಲದಿದ್ದರೆ, ಆತನ ಸ್ಕೋರ್, 10,15, 0 ಮತ್ತು 20 ಹೀಗೆ ಇರುತ್ತದೆ ಎಂದು ಅಮೀರ್ ವ್ಯಂಗ್ಯವಾಡಿದ್ದರು,(ಏಜೆನ್ಸೀಸ್).