ಭಾರತವನ್ನು ಸೋಲಿಸಲು ನಮಗೆ ಅದರ ಅಗತ್ಯವೇ ಇಲ್ಲ... ಇಂಗ್ಲೆಂಡ್​ ನಾಯಕನಿಂದ ಅಚ್ಚರಿ ಹೇಳಿಕೆ! Harry Brook  
ಕ್ರಿಕೆಟ್

ಭಾರತವನ್ನು ಸೋಲಿಸಲು ನಮಗೆ ಅದರ ಅಗತ್ಯವೇ ಇಲ್ಲ... ಇಂಗ್ಲೆಂಡ್​ ನಾಯಕನಿಂದ ಅಚ್ಚರಿ ಹೇಳಿಕೆ! Harry Brook

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟಕ್ಕೆ ಬಂದಿದೆ
  • ಈ ಮೆಗಾ ಟೂರ್ನಿ ಮುಗಿಯಲು ಇನ್ನೂ ಎರಡು ಹೆಜ್ಜೆಗಳು ಮಾತ್ರ ಬಾಕಿ ಇದೆ
  • ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ನ್ಯೂಜಿಲೆಂಡ್​ ಫೈನಲ್​ ತಲುಪಿದೆ
  • ಇದೀಗ ಎಲ್ಲರ ಕಣ್ಣುಗಳು ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಮೇಲೆ ನೆಟ್ಟಿವೆ
Harry Brook : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟಕ್ಕೆ ಬಂದಿದೆ. ಈ ಮೆಗಾ ಟೂರ್ನಿ ಮುಗಿಯಲು ಇನ್ನೂ ಎರಡು ಹೆಜ್ಜೆಗಳು ಮಾತ್ರ ಬಾಕಿ ಇದೆ. ನಿನ್ನೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ನ್ಯೂಜಿಲೆಂಡ್​ ಫೈನಲ್​ ತಲುಪಿದೆ. ಇದೀಗ ಎಲ್ಲರ ಕಣ್ಣುಗಳು ಭಾರತ vs ಇಂಗ್ಲೆಂಡ್ ಪಂದ್ಯದ ಮೇಲೆ ನೆಟ್ಟಿವೆ. ಇಂದು (ಮಾರ್ಚ್​ 05) ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಗೆಲ್ಲುವ ತಂಡ, ಫೈನಲ್​ನಲ್ಲಿ ಪ್ರಶಸ್ತಿಗಾಗಿ ಕಿವೀಸ್​ ಜತೆ ಕಾದಾಡಲಿದೆ.
ಹಾಲಿ ಚಾಂಪಿಯನ್​ ಟೀಮ್ ಇಂಡಿಯಾ, ಮತ್ತೊಮ್ಮೆ ಫೈನಲ್‌ಗೆ ಹೋಗಿ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ಹೊಂದಿದ್ದಾರೆ. ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿರುವುದರಿಂದ ಎಲ್ಲರಲ್ಲೂ ಉತ್ಸಾಹ ಮೂಡಿದೆ. ಈ ಮಧ್ಯೆ, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಸೆಮಿಫೈನಲ್‌ಗೂ ಮುನ್ನವೇ ಭಾರತಕ್ಕೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಪಂದ್ಯಕ್ಕೂ ಮುನ್ನ ನಿನ್ನೆ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಹ್ಯಾರಿ ಬ್ರೂಕ್​, ಒತ್ತಡದ ಪಂದ್ಯಗಳಲ್ಲಿಯೂ ನಮ್ಮ ತಂಡದಲ್ಲಿರುವ ಏಕತೆ, ನಂಬಿಕೆ ಮತ್ತು ಹಿಡಿತದಿಂದ ನಾವು ಸೆಮಿಫೈನಲ್‌ ತಲುಪಿದ್ದೇವೆ. ಪ್ರಶಸ್ತಿ ವಿಜೇತ ತಂಡ ಭಾರತವನ್ನು ಸೋಲಿಸಲು ನಮಗೆ ಅತ್ಯುತ್ತಮ ಪ್ರದರ್ಶನದ ಅಗತ್ಯವಿಲ್ಲ. ಏಕೆಂದರೆ, ಟೀಮ್​ ಇಂಡಿಯಾ ಇಲ್ಲಿಯವರೆಗೆ ಗೆದ್ದ ಯಾವುದೇ ಪಂದ್ಯದಲ್ಲೂ ಪರಿಪೂರ್ಣ ಆಟವಾಡಿಲ್ಲ. ಆದರೆ, ನಮ್ಮ ತಂಡ ಪರಿಪೂರ್ಣ ಪ್ರದರ್ಶನದ ಹತ್ತಿರದಲ್ಲಿದೆ ಎಂದು ಹ್ಯಾರಿ ಬ್ರೂಕ್​ ಹೇಳಿದರು. ಈ ಮೂಲಕ ಪರೋಕ್ಷವಾಗಿ ಟೀಮ್​ ಇಂಡಿಯಾ ವಿರುದ್ಧ ಸುಲಭವಾಗಿ ಗೆಲುವು ಸಾಧಿಸುತ್ತೇವೆ ಎಂದಿದ್ದಾರೆ.
ಇನ್ನು ಮಾಜಿ ನಾಯಕ ಜೋಸ್ ಬಟ್ಲರ್ ಅವರ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹ್ಯಾರಿ ಬ್ರೂಕ್​ ಇದೇ ವೇಳೆ ಸ್ಪಷ್ಟಪಡಿಸಿದರು. ಬಟ್ಲರ್​ ಅವರು ಹಲವು ವರ್ಷಗಳಿಂದ ಅದ್ಭುತ ಆಟಗಾರರಾಗಿದ್ದಾರೆ ಮತ್ತು ಅವರು ತಂಡದಲ್ಲಿ ಏಕೆ ಇದ್ದಾರೆ ಎಂದು ಪ್ರಶ್ನಿಸುವ ಅಗತ್ಯವೇ ಇಲ್ಲ ಎಂದು ಬ್ರೂಕ್​ ತಿಳಿಸಿದರು.
ಇಂಗ್ಲೆಂಡ್ ತಂಡ ಸ್ಪಿನ್ ಬೌಲಿಂಗ್ ಅನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿದೆ ಎಂಬ ಟೀಕೆಗಳ ನಡುವೆ, ಮುಂಬೈ, ಕೋಲ್ಕತ್ತ, ಪಲ್ಲೆಕೆಲೆ ಮತ್ತು ಕೊಲಂಬೊದಂತಹ ಸ್ಥಳಗಳಲ್ಲಿ ನಮ್ಮ ತಂಡವು ಉತ್ತಮ ಪ್ರದರ್ಶನ ನೀಡಿದೆ ಎಂದು ಬ್ರೂಕ್ಸ್ ನೆನಪಿಸಿದರು. ಭಾರತೀಯ ಸ್ಪಿನ್ನರ್‌ಗಳಲ್ಲಿ ವರಣ್ ಚಕ್ರವರ್ತಿ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂದು ಹೇಳಿದ ಬ್ರೂಕ್​, ವರುಣ್​ ಅವರನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು, (ಏಜೆನ್ಸೀಸ್​).