ಪಾಕಿಸ್ತಾನದ ಸೆಮೀಸ್ ಆಸೆ ಜೀವಂತ! Pakistan
- ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ
- ಕೆಲವೊಂದಿಷ್ಟು ಅಚ್ಚರಿಗಳು ನಡೆದರೆ ಮಾತ್ರ ಪಾಕ್ ಸಮೀಸ್ ಹಂತವನ್ನು ಪ್ರವೇಶಿಸುತ್ತದೆ
- ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿರುವುದು ಕೂಡ ಪಾಕಿಸ್ತಾನಕ್ಕೆ ಮುಳುವಾಗಿದೆ
Pakistan : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ಪಾಕಿಸ್ತಾನ ಸಂಕಷ್ಟಕ್ಕೆ ಸಿಲುಕಿದೆ. ಸೆಮಿಫೈನಲ್ ಹಂತಕ್ಕೆ ಏರುವ ಪಾಕಿಸ್ತಾನ ಹಾದಿ ಕಠಿಣವಾಗಿದೆ. ಕೆಲವೊಂದಿಷ್ಟು ಅಚ್ಚರಿಗಳು ನಡೆದರೆ ಮಾತ್ರ ಪಾಕ್, ಸಮೀಸ್ ಹಂತವನ್ನು ಪ್ರವೇಶಿಸುತ್ತದೆ. ಹಾಗಾದರೆ, ಪಾಕ್ ಮುಂದಿರುವ ಸವಾಲುಗಳು ಏನು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಬುಧವಾರ (ಫೆ.25) ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ. ಈ ಸೋಲಿನಿಂದಾಗಿ ಪಾಕಿಸ್ತಾನ, ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಬಹಳ ಕಡಿಮೆಯಾಗಿದೆ.
ಹೌದು, ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಹಗ್ಗದ ಮೇಲೆ ನೇತಾಡುತ್ತಿವೆ. ಕೊಲಂಬೊದಲ್ಲಿ ಆಡಿದ ನ್ಯೂಜಿಲೆಂಡ್ ತಂಡವು ಸಹ-ಆತಿಥೇಯರಾದ ಶ್ರೀಲಂಕಾ ತಂಡವನ್ನು 61 ರನ್‌ಗಳ ಭಾರಿ ಅಂತರದಿಂದ ಸೋಲಿಸಿತು. ಈ ಪ್ರಬಲ ಗೆಲುವಿನ ನಂತರ ನ್ಯೂಜಿಲೆಂಡ್ ತಂಡದ ನೆಟ್ ರನ್ ರೇಟ್ ಈಗ +3.050ಕ್ಕೆ ಏರಿದೆ. ಇಂಗ್ಲೆಂಡ್ ಜೊತೆಗೆ ನ್ಯೂಜಿಲೆಂಡ್ ತಂಡಗಳು ಗ್ರೂಪ್-2 ರಿಂದ ಸೆಮಿಫೈನಲ್ ತಲುಪುವ ನೆಚ್ಚಿನ ತಂಡಗಳಾಗಿವೆ. ಆದಾಗ್ಯೂ, ಪಾಕಿಸ್ತಾನ ಇನ್ನೂ ಪಂದ್ಯಾವಳಿಯಲ್ಲಿ ಜೀವಂತವಾಗಿದೆ. ತಮ್ಮ ಸೂಪರ್-8 ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರೀ ಅಂತರದಲ್ಲಿ ಸೋಲಿಸಬೇಕಾಗಿದೆ.
ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಲೆಕ್ಕಾಚಾರ ಹೀಗಿದೆ...
ಪ್ರಸ್ತುತ -0.461 ನೆಟ್ ರನ್ ರೇಟ್ ಹೊಂದಿರುವ ಪಾಕಿಸ್ತಾನ, ತಮ್ಮ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು 70 ರನ್‌ಗಳ ಅಂತರದಿಂದ ಸೋಲಿಸಬೇಕಾಗಿದೆ. ಅದೇ ಸಮಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಇಂಗ್ಲೆಂಡ್ ಸೋಲಿಸಬೇಕಿದೆ. ಕಿವೀಸ್ ವಿರುದ್ಧ ಆಂಗ್ಲರ ಗೆಲುವಿನ ಅಂತರವು ಪಾಕಿಸ್ತಾನ ಅರ್ಹತೆ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಕಿವೀಸ್ ವಿರುದ್ಧದ ಇಂಗ್ಲೆಂಡ್‌ನ ಪಂದ್ಯ ಮಳೆಯಿಂದ ರದ್ದಾದರೆ, ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯುತ್ತದೆ. ಒಂದು ವೇಳೆ ಇಂಗ್ಲೆಂಡ್ ನ್ಯೂಜಿಲೆಂಡ್ ಅನ್ನು 20 ರನ್‌ಗಳಿಂದ ಸೋಲಿಸಿದರೆ, ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಶ್ರೀಲಂಕಾ ವಿರುದ್ಧ 50 ರನ್‌ಗಳಿಂದ ಗೆಲ್ಲಬೇಕಾಗುತ್ತದೆ.
ಅಂಪೈರ್ ರಿಚರ್ಡ್ ಕೆಟಲ್‌ಬರೋ ಲೆಕ್ಕಾಚಾರ
ಇನ್ನು ಇಂಗ್ಲೆಂಡ್ ಮೂಲದ ಕ್ರಿಕೆಟ್ ಅಂಪೈರ್ ರಿಚರ್ಡ್ ಕೆಟಲ್‌ಬರೋ ಅವರ ಲೆಕ್ಕಾಚಾರದ ಪ್ರಕಾರ ಪಾಕಿಸ್ತಾನದ ಹಾದಿ ದುರ್ಗಮವಾಗಿದೆ. ಒಂದು ವೇಳೆ, ಶ್ರೀಲಂಕಾ ಮೊದಲು ಬ್ಯಾಟ್ ಮಾಡಿದರೆ ಪಾಕಿಸ್ತಾನಕ್ಕೆ ಅರ್ಹತೆ ಪಡೆಯುವ ಪರಿಸ್ಥಿತಿ ಇನ್ನಷ್ಟು ಜಟಿಲವಾಗುತ್ತದೆ. ಹೌದು, ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಿದರೆ, 220 ರನ್ ಗಳಿಸಿ 155 ರನ್‌ಗಳ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ 200 ರನ್ ಗಳಿಸಿದರೆ 152 ರನ್‌ಗಳ ಅಂತರದಲ್ಲಿ ಅಥವಾ 180 ರನ್ ಗಳಿಸಿದರೆ 149 ರನ್‌ಗಳಿಂದ ಗೆಲುವು ಸಾಧಿಸಬೇಕಾಗುತ್ತದೆ. ಒಂದು ವೇಳೆ ಪಾಕ್ ಸೆಕೆಂಡ್ ಬ್ಯಾಟಿಂಗ್ ಮಾಡಿದರೆ, 100 ರನ್ಗಳನ್ನು 4.2 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ ಅಥವಾ 120 ರನ್ಗಳನ್ನು 5.1 ಓವರ್ಗಳಲ್ಲಿ ಅಥವಾ 140 ರನ್ಗಳನ್ನು 6.2 ಓವರ್ಗಳಲ್ಲಿ ಗಳಿಸಬೇಕಾಗುತ್ತದೆ.
ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲವು ಸಾಧಿಸಿದರೆ ಈ ಎಲ್ಲ ಲೆಕ್ಕಾಚಾರಗಳು ಪ್ರಯೋಜನಕ್ಕೆ ಬಾರವು. ಪಾಕಿಸ್ತಾನ ಏನಾದರೂ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಅವರು ಕೊಲಂಬೊದಲ್ಲಿ ಗ್ರೂಪ್-1ರಲ್ಲಿ ಅಗ್ರಸ್ಥಾನದಲ್ಲಿರುವ ತಂಡದ ವಿರುದ್ಧ ಆಡಬೇಕಾಗುತ್ತದೆ. ಫೈನಲ್‌ಗೆ ಅರ್ಹತೆ ಪಡೆದರೆ, ಫೈನಲ್ ಪಂದ್ಯವನ್ನು ಎಲ್ಲಿ ಆಡುತ್ತಾರೆ ಎನ್ನುವುದನ್ನು ಕಾದು ನೊಡಬೇಕಿದೆ, (ಏಜೆನ್ಸೀಸ್).