ಟಿ20 ವಿಶ್ವಕಪ್​ ಸೆಮಿಫೈನಲ್​, ಫೈನಲ್​ ತಾಣ ನಿರ್ಧಾರ ಹೇಗೆ? ಇಲ್ಲಿದೆ ಲೆಕ್ಕಾಚಾರ... 
ಕ್ರಿಕೆಟ್

ಟಿ20 ವಿಶ್ವಕಪ್​ ಸೆಮಿಫೈನಲ್​, ಫೈನಲ್​ ತಾಣ ನಿರ್ಧಾರ ಹೇಗೆ? ಇಲ್ಲಿದೆ ಲೆಕ್ಕಾಚಾರ...

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾಕ್ಕೂ ತವರಿನಲ್ಲಿ ಉಪಾಂತ್ಯ ಆಡುವ ಅವಕಾಶ!
  • ಭಾರತಕ್ಕೂ ತವರಿನಲ್ಲಿ ಸೆಮಿಫೈನಲ್​ ಆಡುವ ಅವಕಾಶ ತಪ್ಪಬಹುದು!
  • ಫೈನಲ್​ ಪಂದ್ಯದ ಅಹಮದಾಬಾದ್​ನಲ್ಲೋ? ಕೊಲಂಬೊದಲ್ಲೋ?
ನವದೆಹಲಿ: ಹೈಬ್ರಿಡ್​ ಮಾದರಿಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup)​ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್​ಗೇರಿದರೆ ಶ್ರೀಲಂಕಾದ ಕೊಲಂಬೊದಲ್ಲೇ ಆಡಲಿದೆ ಎಂಬುದು ಈಗಾಗಲೆ ನಿರ್ಧಾರವಾಗಿದೆ. ಇದರೊಂದಿಗೆ ಜಂಟಿ-ಆತಿಥೇಯ ಶ್ರೀಲಂಕಾಕ್ಕೂ ತವರಿನಲ್ಲಿ ಸೆಮಿಫೈನಲ್​ ಪಂದ್ಯ ಆಡುವ ಅವಕಾಶ ಒಲಿಯುವ ಸಾಧ್ಯತೆ ಇದೆ. ಜತೆಗೆ ಭಾರತ ತಂಡಕ್ಕೆ ತವರಿನಲ್ಲಿ ಸೆಮಿಫೈನಲ್​ ಆಡುವ ಅವಕಾಶ ಕೈತಪ್ಪುವ ಸಾಧ್ಯತೆಯೂ ಇದೆ ಎಂದು ಐಸಿಸಿಯ (ICC) ಟೂರ್ನಿ ನಿಯಮಾವಳಿಯಲ್ಲಿ ತಿಳಿಸಲಾಗಿದೆ.

ಐಸಿಸಿ ಲೆಕ್ಕಾಚಾರದ ಅನ್ವಯ, ಪಾಕಿಸ್ತಾನ, ಶ್ರೀಲಂಕಾ ತಂಡಗಳೆರಡೂ ಉಪಾಂತ್ಯಕ್ಕೆ ಏರದಿದ್ದರೆ, ಎರಡೂ ಸೆಮಿಫೈನಲ್​ ಪಂದ್ಯಗಳು ಭಾರತದ ಮುಂಬೈ (ಮಾ.5) ಮತ್ತು ಕೋಲ್ಕತದಲ್ಲೇ (ಮಾ.4) ನಡೆಯಲಿವೆ. ಆದರೆ ಪಾಕಿಸ್ತಾನ ಸೆಮಿಫೈನಲ್​ಗೇರಿದರೆ, ಮಾರ್ಚ್​ 4ಕ್ಕೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲೇ ಆಡಲಿದೆ. ಇನ್ನು ಭಾರತ ತಂಡ ಸೆಮಿಫೈನಲ್​ಗೇರಿ, ಪಾಕಿಸ್ತಾನ ಎದುರಾಳಿಯಾದರೆ ಆಗ ಶ್ರೀಲಂಕಾದಲ್ಲೇ ಸೆಮೀಸ್​ ಆಡಬೇಕಾಗುತ್ತದೆ.

ಇನ್ನು ಶ್ರೀಲಂಕಾಕ್ಕೆ ತವರಿನಲ್ಲಿ ಸೆಮೀಸ್​ ಆಡುವ ಅವಕಾಶ ಸಿಗಬೇಕಾದರೆ, ಭಾರತ ತಂಡ ಎದುರಾಳಿಯಾಗಬಾರದು ಮತ್ತು ಪಾಕಿಸ್ತಾನವೂ ಉಪಾಂತ್ಯಕ್ಕೇರಬಾರದು. ಭಾರತ ಎದುರಾಳಿಯಾದರೆ ಮತ್ತು ಪಾಕ್​ ತಂಡವೂ ಉಪಾಂತ್ಯಕ್ಕೇರಿದರೆ ಲಂಕಾ ತಂಡ ಮುಂಬೈನಲ್ಲೇ ಸೆಮೀಸ್​ ಆಡಬೇಕಾಗುತ್ತದೆ. ಯಾಕೆಂದರೆ ಮುಂಬೈನಲ್ಲಿ ಒಂದು ಸೆಮೀಸ್​ ನಡೆಯುವುದು ನಿಶ್ಚಿತ.

ಇನ್ನು ಭಾರತ ತಂಡಕ್ಕೆ ಪಾಕಿಸ್ತಾನ ತಂಡ ಎದುರಾಳಿಯಾಗದಿದ್ದರೆ, ಮಾ.5ಕ್ಕೆ ಮುಂಬೈನಲ್ಲಿ ಸೆಮೀಸ್​ ಆಡಲಿದೆ. ಪಾಕಿಸ್ತಾನ ಎದುರಾಳಿಯಾದರೆ ಭಾರತ ಮಾ.4ಕ್ಕೆ ಕೊಲಂಬೊದಲ್ಲೇ ಸೆಮೀಸ್​ ಆಡಬೇಕಾಗುತ್ತದೆ. ಲಂಕಾ-ಪಾಕ್​ ಸೂಪರ್-8ರಲ್ಲಿ ಒಂದೇ ಗುಂಪಿನಲ್ಲಿರುವುದರಿಂದ ಸೆಮೀಸ್​ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯೇ ಇಲ್ಲ.

ಭಾರತ, ಪಾಕಿಸ್ತಾನ, ಶ್ರೀಲಂಕಾ ಈ ಮೂರೂ ತಂಡಗಳು ಉಪಾಂತ್ಯಕ್ಕೇರದಿದ್ದರೆ, ಎರಡೂ ಸೆಮೀಸ್​ ಭಾರತದಲ್ಲೇ ನಡೆಯಲಿವೆ. ಆಗ ಸೂಪರ್​-8 ಗ್ರೂಪ್​-1ರ ಅಗ್ರಸ್ಥಾನಿ ಮತ್ತು ಗ್ರೂಪ್​ 2ರ ದ್ವೀತಿಯ ಸ್ಥಾನಿ ಮಾ.4ಕ್ಕೆ ಕೋಲ್ಕತದಲ್ಲಿ ಹಾಗೂ ಗ್ರೂಪ್​-2ರ ಅಗ್ರಸ್ಥಾನಿ ಮತ್ತು ಗ್ರೂಪ್​-1ರ ದ್ವೀತಿಯ ಸ್ಥಾನಿ ಮಾ.5ಕ್ಕೆ ಮುಂಬೈನಲ್ಲಿ ಸೆಮಿಫೈನಲ್​ನಲ್ಲಿ ಮುಖಾಮುಖಿ ಆಗಲಿವೆ.

ಇನ್ನು ಪಾಕಿಸ್ತಾನ ಫೈನಲ್​ಗೇರಿದರೆ ಮಾರ್ಚ್​ 8ಕ್ಕೆ ಕೊಲಂಬೊದಲ್ಲೇ ಪ್ರಶಸ್ತಿ ಹೋರಾಟ ನಡೆಯಲಿದೆ. ಪಾಕ್​ ಅರ್ಹತೆ ಗಳಿಸದೆ, ಶ್ರೀಲಂಕಾ ಅಥವಾ ಬೇರಾವುದೇ ತಂಡ ಫೈನಲ್​ಗೇರಿದರೂ, ಪ್ರಶಸ್ತಿ ಕಾದಾಟ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆಯಲಿದೆ. ಅಂದರೆ ಪಾಕ್​ ಎದುರಾಳಿಯಾದರೆ ಮಾತ್ರ ಲಂಕಾಗೆ ತವರಿನಲ್ಲಿ ಫೈನಲ್​ ಆಡುವ ಅವಕಾಶ ಲಭಿಸಲಿದೆ. ಇನ್ನು ಪಾಕ್​ ಎದುರಾಳಿಯಾದರೆ ಭಾರತಕ್ಕೂ ತವರಿನಲ್ಲಿ ಫೈನಲ್​ ಆಡುವ ಅವಕಾಶ ಲಭಿಸುವುದಿಲ್ಲ.

ಐಸಿಸಿ ಮಂಗಳವಾರ ನಾಕೌಟ್​ ಪಂದ್ಯಗಳ ಟಿಕೆಟ್​ ಮಾರಾಟ ಪ್ರಕ್ರಿಯೆ ಆರಂಭಿಸಿದೆ. ಅಂದರೆ ಮುಂಬೈ, ಕೋಲ್ಕತದಲ್ಲಿ ನಿಗದಿಯಾಗಿರುವ ಸೆಮಿಫೈನಲ್​ ಮತ್ತು ಕೊಲಂಬೊದಲ್ಲಿ ನಡೆಯಬಹುದಾದ ಮೊದಲ ಸೆಮಿಫೈನಲ್​ ಮತ್ತು ಅಹಮದಾಬಾದ್​ ಅಥವಾ ಕೊಲಂಬೊದಲ್ಲಿ ನಡೆಯಬಹುದಾದ ಫೈನಲ್​ ಪಂದ್ಯಗಳ ಟಿಕೆಟ್​ಗಳು ಇದರಲ್ಲಿ ಸೇರಿವೆ. ಆದರೆ ಕೋಲ್ಕತ ಅಥವಾ ಕೊಲಂಬೊದಲ್ಲಿ ಸೆಮಿಫೈನಲ್​ ನಡೆಯದಿದ್ದರೆ ಮತ್ತು ಅಹಮದಾಬಾದ್​ ಅಥವಾ ಕೊಲಂಬೊದಲ್ಲಿ ಫೈನಲ್​ ಪಂದ್ಯ ನಡೆಯದಿದ್ದರೆ ಆಗ ಆ ಪಂದ್ಯದ ಟಿಕೆಟ್​ಗಳ ಸಂಪೂರ್ಣ ಮೊತ್ತವನ್ನು ಟಿಕೆಟ್​ ಖರೀದಿಸಿರುವವರಿಗೆ ಮರುಪಾವತಿ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.