ಟಿ20 ವಿಶ್ವಕಪ್: ಟ್ರೋಫಿ ಉಳಿಸಿಕೊಳ್ಳಲು ಭಾರತ ರೆಡಿ 
ಕ್ರಿಕೆಟ್

ಟಿ20 ವಿಶ್ವಕಪ್: ಟ್ರೋಫಿ ಉಳಿಸಿಕೊಳ್ಳಲು ಭಾರತ ರೆಡಿ

ಬೆಂಗಳೂರು: ಭಾರತಕ್ಕೆ ಐಸಿಸಿ ಟೂರ್ನಿಗಳ ಆತಿಥ್ಯ ಹೊಸದಲ್ಲ. 1987ರಿಂದ ಏಕದಿನ-ಟಿ20 ಮಾದರಿಯಲ್ಲಿ, ಪುರುಷ&ಮಹಿಳಾ ವಿಭಾಗಗಳಲ್ಲಿ ಹಲವಾರು ಕ್ರಿಕೆಟ್​ ವಿಶ್ವಕಪ್​ಗಳಿಗೆ ಭಾರತ ಆತಿಥ್ಯ ವಹಿಸಿಕೊಂಡಿದೆ. ಈ ಪೈಕಿ 2011ರ ಏಕದಿನ ವಿಶ್ವಕಪ್​ನಲ್ಲಿ ತವರಿನಲ್ಲೇ ಪ್ರಶಸ್ತಿ ಗೆದ್ದು ಬೀಗಿತ್ತು. 2023ರ ಏಕದಿನ ವಿಶ್ವಕಪ್​ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರೂ ಅಂತಿಮವಾಗಿ ಫೈನಲ್​ನಲ್ಲಿ ಎಡವಿತ್ತು. ಕಳೆದ ವರ್ಷವಷ್ಟೇ ಭಾರತದ ಮಹಿಳೆಯರೂ ತವರಿನಲ್ಲೇ ಚೊಚ್ಚಲ ಏಕದಿನ ವಿಶ್ವಕಪ್​ ಗೆದ್ದು ಬೀಗಿದ್ದರು. ಆದರೆ ಭಾರತ ಹಿಂದೆಂದೂ ತವರಿನ ಐಸಿಸಿ ವಿಶ್ವಕಪ್​ನಲ್ಲಿ ಹಾಲಿ ಚಾಂಪಿಯನ್​ ತಂಡವಾಗಿ ಅಭಿಯಾನ ಆರಂಭಿಸಿರಲಿಲ್ಲ. ಹೀಗಾಗಿ ಈ ಬಾರಿ ಭಾರತ ತಂಡ ತವರಿನ ಟಿ20 ವಿಶ್ವಕಪ್ (ICC T20 WorldCup)​ ಟೂರ್ನಿಯಲ್ಲಿ ದುಪ್ಪಟ್ಟು ನಿರೀಕ್ಷೆಗಳ ಭಾರ ಮತ್ತು ಒತ್ತಡದೊಂದಿಗೆ ಕಣಕ್ಕಿಳಿಯಲಿದೆ. 2024ರ ಆವೃತ್ತಿಯಲ್ಲಿ ಗೆದ್ದ ಟ್ರೋಫಿಯನ್ನು ಉಳಿಸಿಕೊಳ್ಳುವ ಸವಾಲಿನೊಂದಿಗೆ ತವರಿನ ಪ್ರೇಕ್ಷಕರ ಬೆಂಬಲದ ಬಲವೂ ಭಾರತಕ್ಕೆ ಇದೆ.

2007ರಲ್ಲಿ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿದ್ದ ಭಾರತ ನಂತರ ಮತ್ತೊಮ್ಮೆ ಟ್ರೋಫಿಗೆ ಮುತ್ತಿಡಲು 17 ವರ್ಷಗಳ ಕಾಲ ಕಾದಿತ್ತು. ಆದರೆ 3ನೇ ಬಾರಿ ಪ್ರಶಸ್ತಿ ಗೆಲ್ಲಲು ಅಷ್ಟು ಸಮಯ ಕಾಯಬೇಕಾಗಿಲ್ಲ ಎಂಬ ಭರವಸೆ ಮೂಡಿದೆ. ಯಾಕೆಂದರೆ ಈ ಬಾರಿಯ ತಂಡ ಅಷ್ಟು ಬಲಿಷ್ಠವಾಗಿದೆ. 2024ರ ಚಾಂಪಿಯನ್​ ತಂಡದ 8 ಆಟಗಾರರು ಈಗಿನ ತಂಡದಲ್ಲೂ ಇದ್ದಾರೆ. ರೋಹಿತ್​ ಶರ್ಮ-ವಿರಾಟ್​ ಕೊಹ್ಲಿ ಅವರ ಅನುಭವವನ್ನು ಈ ಬಾರಿ ಮಿಸ್​ ಮಾಡಿಕೊಂಡರೂ, ಅಭಿಷೇಕ್​ ಶರ್ಮ-ಇಶಾನ್​ ಕಿಶನ್​ರ ಆಕ್ರಮಣಕಾರಿ ಮತ್ತು ತಿಲಕ್​ ವರ್ಮ ಅವರ ಸಮಯೋಚಿತ ಆಟದ ಬಲವಿದೆ. ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ-ಅರ್ಷದೀಪ್​ ಕಾಂಬಿನೇಷನ್​ ಈ ಬಾರಿಯೂ ಮುಂದುವರಿದರೆ, ಸ್ಪಿನ್​ ವಿಭಾಗದಲ್ಲಿ ಕುಲದೀಪ್​-ಅಕ್ಷರ್​ ಪಟೇಲ್​ಗೆ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿ ಸಾಥ್​ ನೀಡಲಿದ್ದಾರೆ. ಆಲ್ರೌಂಡರ್​ಗಳಾಗಿ ಹಾರ್ದಿಕ್​ ಪಾಂಡ್ಯ-ಶಿವಂ ದುಬೆ ಮುಂದುವರಿಯಲಿದ್ದರೆ, ರಿಂಕು ಸಿಂಗ್​, ವಾಷಿಂಗ್ಟನ್​ ಸುಂದರ್​, ಸಂಜು ಸ್ಯಾಮ್ಸನ್​, ಮೊಹಮದ್ ಸಿರಾಜ್​ ಅವಕಾಶ ಸಿಕ್ಕರೆ ಬಾಚಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ಫಿಟ್ನೆಸ್​ ಕಳವಳ: ಭಾರತ ತಂಡವನ್ನು ಕೆಲ ಫಿಟ್ನೆಸ್​ ಕಳವಳಗಳೂ ಕಾಡುತ್ತಿವೆ. ತಿಲಕ್​ ವರ್ಮ ಈಗಷ್ಟೇ ಫಿಟ್​ ಆಗಿ ತಂಡ ಸೇರಿದ್ದರೆ, ವಾಷಿಂಗ್ಟನ್​ ಸುಂದರ್​ ಫಿಟ್ನೆಸ್​ ಬಗ್ಗೆ ಗೊಂದಲಗಳಿವೆ. ಅಭ್ಯಾಸ ಪಂದ್ಯದ ವೇಳೆ ಹರ್ಷಿತ್​ ರಾಣಾ ಗಾಯದ ಸಮಸ್ಯೆ ಎದುರಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಗಂಭೀರ್​ಗೆ ಮಹತ್ವದ ಸವಾಲು
2024ರ ಟಿ20 ವಿಶ್ವಕಪ್​ ಗೆಲುವಿನೊಂದಿಗೆ ರಾಹುಲ್​ ದ್ರಾವಿಡ್​ ಮುಖ್ಯ ಕೋಚ್​ ಹುದ್ದೆಯಿಂದ ನಿರ್ಗಮಿಸಿದಾಗ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಗೌತಮ್​ ಗಂಭೀರ್​ ಬಂದಿದ್ದರು. 2027ರ ಏಕದಿನ ವಿಶ್ವಕಪ್​ವರೆಗೆ ನೇಮಕಗೊಂಡ ಗಂಭೀರ್​ ಮೇಲೆ ಅಪಾರ ನಂಬಿಕೆ ಇಡಲಾಗಿತ್ತು. ಆದರೆ ಟೆಸ್ಟ್​ನಲ್ಲಿ ಅವರ ಮಾರ್ಗದರ್ಶನದಲ್ಲಿ ತಂಡದ ನಿರ್ವಹಣೆ ನೀರಸವೆನಿಸಿದ್ದರೆ, ಏಕದಿನದಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆಲುವಿನ ಹೊರತಾಗಿ ಸಾಧಾರಣವೆನಿಸಿದೆ. ಆದರೆ ಟಿ20 ಕ್ರಿಕೆಟ್​ನಲ್ಲಿ ಅದ್ಭುತ ಯಶಸ್ಸು ಕಂಡಿದ್ದಾರೆ. ಹೀಗಾಗಿ ಏಕದಿನ&ಟೆಸ್ಟ್​ನಲ್ಲಿ ತಂಡದ ನಿರ್ವಹಣೆ ಬಗ್ಗೆ ಟೀಕೆಗಳನ್ನು ಎದುರಿಸಿರುವ ಗಂಭೀರ್​, ತನ್ನ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಟಿ20 ವಿಶ್ವಕಪ್​ ಅಪೂರ್ವ ಅವಕಾಶವೆನಿಸಿದೆ. ಮತ್ತೊಂದು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟರೆ ಟೀಮ್​ ಇಂಡಿಯಾ ಅಭಿಮಾನಿಗಳಿಗೆ ಅವರ ಮೇಲೆ ವಿಶ್ವಾಸ ಹೆಚ್ಚುವುದು ಖಂಡಿತ.
ಸೂರ್ಯಗೆ ಲಾಸ್ಟ್​ ಚಾನ್ಸ್​?
2024ರ ವಿಶ್ವಕಪ್​ ಗೆಲುವಿನ ಬೆನ್ನಲ್ಲೇ ರೋಹಿತ್​ ಶರ್ಮ ಟಿ20 ನಾಯಕತ್ವದಿಂದ ನಿರ್ಗಮಿಸಿದಾಗ ಹಾರ್ದಿಕ್​ ಪಾಂಡ್ಯ ಹೊಸ ನಾಯಕರಾಗುವರು ಎಂಬುದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಗಂಭೀರ್​ ಕೋಚ್​ ಹುದ್ದೆಗೇರಿದ ಬಳಿಕ ಲೆಕ್ಕಾಚಾರಗಳು ಬದಲಾಗಿ ಸೂರ್ಯಕುಮಾರ್​ಗೆ ನಾಯಕತ್ವ ಒಲಿದಿತ್ತು. ಈ ನಂಬಿಕೆಯನ್ನು ಅವರು ಉಳಿಸಿಕೊಂಡಿದ್ದು, ನಾಯಕರಾಗಿ ಅದ್ಭುತ ನಿರ್ವಹಣೆಯನ್ನೇ ತೋರಿದ್ದಾರೆ. ಸೂರ್ಯಕುಮಾರ್​ ಸಾರಥ್ಯದಲ್ಲಿ ಆಡಿದ 43 ಟಿ20 ಪಂದ್ಯಗಳಲ್ಲಿ 34ರಲ್ಲಿ ಗೆದ್ದಿರುವ ಭಾರತ, 7ರಲ್ಲಿ ಸೋತಿದೆ. 2 ರದ್ದುಗೊಂಡಿವೆ. ಆದರೆ ಇತ್ತೀಚೆಗೆ ಅವರ ಬ್ಯಾಟಿಂಗ್​ ಫಾರ್ಮ್​ ಕಳವಳಕಾರಿ ಎನಿಸಿತ್ತು. ಆದರೆ ವರ್ಷಾರಂಭದಲ್ಲಿ ಆಡಿದ ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ರನ್​ಮಳೆ ಹರಿಸುವ ಮೂಲಕ ಆ ಚಿಂತೆಯನ್ನೂ ನಿವಾರಿಸಿದರು. ಆದರೂ ನಾಯಕರಾಗಿ ಇದು 35 ವರ್ಷದ ಸೂರ್ಯಕುಮಾರ್​ಗೆ ಕೊನೇ ಟೂರ್ನಿ ಎನಿಸಬಹುದು. ಯಾಕೆಂದರೆ ನಂತರ 2028ರ ಟಿ20 ವಿಶ್ವಕಪ್​ ಮತ್ತು ಒಲಿಂಪಿಕ್ಸ್​ಗೆ ಭಾರತದ ಸಿದ್ಧತೆ ಶುರುವಾಗಲಿದೆ. ಆದರೆ ವಿಶ್ವಕಪ್​ ಗೆದ್ದುಕೊಟ್ಟರೆ ಸೆಪ್ಟೆಂಬರ್​-ಅಕ್ಟೋಬರ್​ನಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ವರೆಗೂ ನಾಯಕತ್ವ ಮುಂದುವರಿಯುವ ಸಾಧ್ಯತೆಯೂ ಇದೆ.
ಅಭಿಷೇಕ್​ ಕೇಂದ್ರ ಬಿಂದು
ಭಾರತ ಇತ್ತೀಚೆಗೆ ಟಿ20 ಕ್ರಿಕೆಟ್​ನಲ್ಲಿ ಅಲ್ಟ್ರಾ ಅಟ್ಯಾಕಿಂಗ್​ ಆಟವಾಡುತ್ತಿದೆ. ಇದರ ಪ್ರಮುಖ ರೂವಾರಿ ಅಭಿಷೇಕ್​ ಶರ್ಮ. ಎಡಗೈ ಆರಂಭಿಕ ಸಿಕ್ಸರ್​ ಮಳೆಹರಿಸುವ ಮೂಲಕ ಈಗಾಗಲೆ ಎದುರಾಳಿ ಬೌಲರ್​ಗಳಿಗೆ ಭೀತಿ ಹುಟ್ಟಿಸಿದ್ದಾರೆ. ಟಿ20 ವಿಶ್ವಕಪ್​ನಲ್ಲೂ ಅವರು ಇದೇ ಫಾರ್ಮ್​ ಮುಂದುವರಿದರೆ, ಭಾರತದ ಗೆಲುವಿನ ರೂವಾರಿ ಎನಿಸುವ ಮತ್ತು ಟೂರ್ನಿಯ ಸರ್ವಾಧಿಕ ರನ್​ ಸ್ಕೋರರ್​ ಎನಿಸುವ ನಿರೀೆ ಇದೆ. 2024ರ ವಿಶ್ವಕಪ್​ ಬಳಿಕ ಭಾರತ 13 ಪಂದ್ಯಗಳಲ್ಲಿ 200 ಪ್ಲಸ್​ ಮೊತ್ತ ಪೇರಿಸಿದೆ. ಒಮ್ಮೆ 300ರ ಸನಿಹ ತಲುಪಿತ್ತು. ಜತೆಗೆ ಪ್ರತಿ 11 ಎಸೆತಕ್ಕೊಂದು ಸಿಕ್ಸರ್​ ಸಿಡಿಸಿದೆ. ಈ ಪೈಕಿ ಅಭಿಷೇಕ್​ ಕೊಡುಗೆಯೇ ಹೆಚ್ಚಿದೆ. ಕಳೆದ ವಿಶ್ವಕಪ್​ ಬೆನ್ನಲ್ಲೇ ಭಾರತ ಪರ ಪದಾರ್ಪಣೆ ಮಾಡಿದ್ದ ಅಭಿಷೇಕ್​ ಇದುವರೆಗೆ ಆಡಿರುವ 38 ಟಿ20 ಪಂದ್ಯಗಳಲ್ಲಿ 88 ಸಿಕ್ಸರ್​ ಸಿಡಿಸಿದ್ದಾರೆ. 200ರ ಸನಿಹ ಸ್ಟ್ರೈಕ್​​ ಹೊಂದಿದ್ದಾರೆ.
ಭರ್ಜರಿ ಫಾರ್ಮ್​
ಭಾರತ ತಂಡ 2024ರ ಟಿ20 ವಿಶ್ವಕಪ್​ ಗೆಲುವಿನ ಬಳಿಕ ಚುಟುಕು ಕ್ರಿಕೆಟ್​ ಮಾದರಿಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ನಂತರದಲ್ಲಿ ಆಡಿರುವ 42 ಪಂದ್ಯಗಳಲ್ಲಿ 33ರಲ್ಲಿ ಜಯಿಸಿದ್ದು, 6ರಲ್ಲಿ ಮಾತ್ರ ಸೋತಿದೆ. ಉಳಿದಂತೆ 3 ಪಂದ್ಯಗಳು ರದ್ದುಗೊಂಡಿವೆ. ವಿಶ್ವ ಚಾಂಪಿಯನ್​ ಪಟ್ಟದೊಂದಿಗೆ ಆಡಿದ ಎಲ್ಲ 8 ದ್ವಿಪಯ ಟಿ20 ಸರಣಿಗಳಲ್ಲೂ ಭಾರತ ಜಯ ಸಾಧಿಸಿದೆ. ಈ ನಡುವೆ ಟಿ20 ಏಷ್ಯಾಕಪ್​ನಲ್ಲಿ ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು.
ಟಿ20 ವಿಶ್ವಕಪ್​ನಲ್ಲಿ
ಭಾರತದ ಸಾಧನೆ
2007 ಚಾಂಪಿಯನ್​
2009 ಸೂಪರ್​ 8
2010 ಸೂಪರ್​ 8
2012 ಸೂಪರ್​ 8
2014 ರನ್ನರ್​ ಅಪ್​
2016 ಸೆಮಿಫೈನಲ್​
2021 ಸೂಪರ್​ &12
2022 ಸೆಮಿಫೈನಲ್​
2024 ಚಾಂಪಿಯನ್​