Rinku Singh  
ಕ್ರಿಕೆಟ್

ಯುಪಿ ಸರ್ಕಾರದ ಬಂಪರ್ ಗಿಫ್ಟ್: ಟಿ20 ವಿಶ್ವಕಪ್ ಹೀರೊ ರಿಂಕು ಸಿಂಗ್‌ಗೆ 'ಸ್ಪೋರ್ಟ್ಸ್ ಆಫೀಸರ್' ಪಟ್ಟ! | Rinku Singh

ಲಕ್ನೋ: ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ, ಸಿಕ್ಸರ್‌ಗಳ ಸರದಾರ ರಿಂಕು ಸಿಂಗ್(Rinku Singh) ಅವರಿಗೆ ಉತ್ತರ ಪ್ರದೇಶ ಸರ್ಕಾರವು ರಾಜಮರ್ಯಾದೆ ನೀಡಿದೆ.
2026ರ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಿಂಕು ಸಿಂಗ್ ಅವರನ್ನು ರಾಜ್ಯ ಸರ್ಕಾರವು 'ಪ್ರಾದೇಶಿಕ ಕ್ರೀಡಾ ಅಧಿಕಾರಿ' (Regional Sports Officer - RSO) ಆಗಿ ನೇಮಕ ಮಾಡಲು ನಿರ್ಧರಿಸಿದೆ ಎಂದು ಮಂಗಳವಾರ ವರದಿಯಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಹಾಗೂ ನಗದು ಬಹುಮಾನದ ಮಹತ್ತರ ಪ್ಯಾಕೇಜ್ ಘೋಷಿಸಿದ್ದು, ರಿಂಕು ಸಿಂಗ್ ಈ ಗೌರವಕ್ಕೆ ಪಾತ್ರರಾದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.
ರಿಂಕು ಸಿಂಗ್ ಅವರಿಗೆ ಈ ಗೌರವ ಸಲ್ಲಿಕೆಯಾಗುತ್ತಿರುವುದು ಕೇವಲ ಅವರ ಆಟಕ್ಕಷ್ಟೇ ಅಲ್ಲ, ಅವರ ಬದ್ಧತೆಗೂ ಕೂಡ. ವಿಶ್ವಕಪ್ ಟೂರ್ನಿಯ ವೇಳೆ ರಿಂಕು ಅವರ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯ ನಿಧನದ ನಡುವೆಯೂ, ರಿಂಕು ಸಿಂಗ್ ಟೀಮ್ ಇಂಡಿಯಾ ಮತ್ತು ಆಸ್ಪತ್ರೆಯ ನಡುವೆ ಓಡಾಡುತ್ತಾ ದೇಶಕ್ಕಾಗಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಈ ಅಪ್ರತಿಮ ಬದ್ಧತೆಯನ್ನು ಗುರುತಿಸಿ ಸರ್ಕಾರ ಈ ಉನ್ನತ ಹುದ್ದೆ ನೀಡಿದೆ.

ರಾಜಕುಮಾರ್ ಪಾಲ್‌ಗೆ ಡಿಎಸ್‌ಪಿ ಹುದ್ದೆ

ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಸದಸ್ಯ ರಾಜಕುಮಾರ್ ಪಾಲ್ ಅವರನ್ನು ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ನೇಮಕ ಮಾಡಲಾಗಿದೆ. ಇವರು ಗಾಜಿಪುರ ಮೂಲದವರಾಗಿದ್ದು, ರಾಜ್ಯದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ್ದಾರೆ.
ಪ್ಯಾರಾ ಅಥ್ಲೀಟ್‌ಗಳಿಗೂ ಉನ್ನತ ಸ್ಥಾನ
ಯೋಗಿ ಸರ್ಕಾರವು ಪ್ಯಾರಾ ಅಥ್ಲೀಟ್‌ಗಳಿಗೆ ಸಿಂಹಪಾಲು ನೀಡಿದ್ದು, ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಹಂಚಿಕೆ ಮಾಡಿದೆ.
ಪ್ರವೀಣ್ ಕುಮಾರ್ (ಹೈಜಂಪ್ ಚಿನ್ನ): ಡಿಎಸ್‌ಪಿ (DSP) ಹುದ್ದೆ.
ಅಜಿತ್ ಸಿಂಗ್ (ಜಾವೆಲಿನ್ ಬೆಳ್ಳಿ): ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ.
ಸಿಮ್ರಾನ್ (200ಮೀ ಕಂಚು): ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ.
ಪ್ರೀತಿಪಾಲ್ (100ಮೀ & 200ಮೀ ಕಂಚು): ಬ್ಲಾಕ್ ಡೆವಲಪ್‌ಮೆಂಟ್ ಆಫೀಸರ್ (BDO).

ಲಕ್ಷ್ಮಣ್ ಮತ್ತು ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿಗಳ ಸುರಿಮಳೆ

ಲೋಕಭವನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಒಟ್ಟು 9 ಕ್ರೀಡಾಪಟುಗಳಿಗೆ 'ಲಕ್ಷ್ಮಣ್ ಪ್ರಶಸ್ತಿ' ಹಾಗೂ 'ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 3.11 ಲಕ್ಷ ರೂ. ನಗದು ಹಾಗೂ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ. ಅಲ್ಲದೆ, 14 ಆಟಗಾರರಿಗೆ ಒಟ್ಟು 1.64 ಕೋಟಿ ರೂ.ಗಳ ನಗದು ಬಹುಮಾನವನ್ನು ವಿತರಿಸಲಾಗುವುದು.

ಗಮನಾರ್ಹ ಸಾಧಕರು!

ಹಾಕಿಯಲ್ಲಿ ಉತ್ತಮ ಸಿಂಗ್, ಕುಸ್ತಿಯಲ್ಲಿ ವಿಕ್ರಾಂತ್ ಬಾಲಿಯನ್, ಶೂಟಿಂಗ್‌ನಲ್ಲಿ ಸಾಗರ್ ಡಾಂಗಿ ಹಾಗೂ ಪರ್ವತಾರೋಹಣದಲ್ಲಿ ಭಾನು ಪಾಠಕ್ ಸೇರಿದಂತೆ ಹಲವು ಕ್ರೀಡಾಪಟುಗಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಏಕಲವ್ಯ ಕ್ರೀಡಾ ನಿಧಿಯಡಿ 19 ಆಟಗಾರರಿಗೆ 8.75 ಲಕ್ಷ ರೂ.ಗಳ ಆರ್ಥಿಕ ನೆರವು ಕೂಡ ಲಭ್ಯವಾಗಲಿದೆ,(ಏಜೆನ್ಸೀಸ್).