ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಬಾಲ್ಯದ ಗೆಳತಿಯೊಂದಿಗೆ ವಿವಾಹವಾದ ಕುಲದೀಪ್ ಯಾದವ್
ಡೆಹ್ರಾಡೂನ್: ಸತತ 2ನೇ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ (kuldeep yadav) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಶನಿವಾರ ಉತ್ತರಾಖಂಡದ ಮಸ್ಸೂರಿಯ ರೆಸಾರ್ಟ್ನಲ್ಲಿ ಬಾಲ್ಯದ ಗೆಳತಿ ವಂಶಿಕಾ ಅವರನ್ನು ವರಿಸಿದರು.
ಶುಕ್ರವಾರ ಹಳದಿ ಮತ್ತು ಮೆಹಂದಿ ಸಮಾರಂಭ ನಡೆದಿತ್ತು. ಟೀಮ್ ಇಂಡಿಯಾದ ಸಹ-ಆಟಗಾರರು ಮತ್ತು ಆಪ್ತರಾದ ಯಜುವೇಂದ್ರ ಚಾಹಲ್, ರಿಂಕು ಸಿಂಗ್, ತಿಲಕ್ ವರ್ಮ, ಭುವನೇಶ್ವರ್ ಕುಮಾರ್ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದರು.
ಮಾರ್ಚ್ 17ರಂದು ಲಖನೌದಲ್ಲಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದ್ದು, ಇದಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಆಹ್ವಾನ ನೀಡಲಾಗಿದೆ. ಕಳೆದ ವರ್ಷ ಜೂನ್ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.
ಕಳೆದ ವರ್ಷ ನವೆಂಬರ್ನಲ್ಲೇ ಕುಲದೀಪ್ ವಿವಾಹ ನಿಗದಿಯಾಗಿತ್ತು. ಆದರೆ ಕುಲದೀಪ್ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾಹವನ್ನು ಮುಂದೂಡಲಾಗಿತ್ತು. ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಏಕಮಾತ್ರ ಪಂದ್ಯದಲ್ಲಿ ಆಡಿದ್ದ ಕುಲದೀಪ್ 14 ರನ್ಗಳಿಗೆ 1 ವಿಕೆಟ್ ಕಬಳಿಸಿದ್ದರು.