ಟಿ20 ವಿಶ್ವಕಪ್: ಫೆ.15ರವರೆಗೂ ಭಾರತ-ಪಾಕ್ ಪಂದ್ಯದ ಗೊಂದಲ ಮುಂದುವರಿಯಲಿದೆ!
ನವದೆಹಲಿ: ಟಿ20 ವಿಶ್ವಕಪ್ನಲ್ಲಿ (T20 World Cup) ಭಾಗವಹಿಸಿದರೂ, ಭಾರತ ವಿರುದ್ಧದ ಪಂದ್ಯದಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಭಾನುವಾರವೇ ಘೋಷಣೆ ಮಾಡಿದ್ದು, ಇದನ್ನು ಅಧಿಕೃತ ನಿಲುವು ಎಂದೂ ಪರಿಗಣಿಸಲಾಗಿದೆ. ಆದರೆ ಇದಾಗಿ 2 ದಿನ ಕಳೆದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈ ಬಹಿಷ್ಕಾರದ ನಿಲುವನ್ನು ಐಸಿಸಿಗೆ ಇಮೇಲ್ ಮೂಲಕ ಲಿಖಿತವಾಗಿ ಇನ್ನೂ ಐಸಿಸಿಗೆ ಮಾಹಿತಿ ನೀಡಿಲ್ಲ. ಇದರಿಂದಾಗಿ ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದೇ, ಇಲ್ಲವೇ ಎಂಬ ಗೊಂದಲ ಫೆ.15ರವರೆಗೂ ಮುಂದುವರಿಯುವ ಸಾಧ್ಯತೆ ಇದೆ.
ಭಾರತ ವಿರುದ್ಧದ ಪಂದ್ಯ ಬಹಿಷ್ಕಾರದ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಐಸಿಸಿ, ಈ ಆಯ್ದ ಆಟದ ನಿಲುವನ್ನು ಖಂಡಿಸಿತ್ತು ಮತ್ತು ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಇದರಿಂದಾಗಿ ಪಿಸಿಬಿಗೆ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶವೇ ಕೈತಪ್ಪುವ ಭೀತಿ ಇದೆ. ಹೀಗಾಗಿ ಪಿಸಿಬಿ, ಭಾರತ ವಿರುದ್ಧದ ಪಂದ್ಯ ಬಹಿಷ್ಕಾರದ ಬಗ್ಗೆ ಐಸಿಸಿಗೆ ಅಧಿಕೃತ ಮಾಹಿತಿ ನೀಡದೆ ಕುತಂತ್ರ ಅನುಸರಿಸಿದೆ. ಇದರಿಂದ ವಿಶ್ವಕಪ್ನಿಂದ ಹೊರಬೀಳುವ ಅಪಾಯದಿಂದ ಪಾಕ್ ಸದ್ಯಕ್ಕೆ ಪಾರಾದರೂ, ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದರೆ ಭವಿಷ್ಯದಲ್ಲಾದರೂ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.