- ಟಿ20 ವಿಶ್ವಕಪ್ 2026ರ ಮೊದಲ ಹಂತದ ಬುಕ್ಕಿಂಗ್ಸ್ ಓಪನ್
- 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳ ಲಭ್ಯತೆ
- ಭಾರತದಲ್ಲಿ ಟಿಕೆಟ್ ಬೆಲೆಗಳು ಬಲು ಕಡಿಮೆ
- ಫೆಬ್ರವರಿ 7-ಮಾರ್ಚ್ 8 ರವರೆಗೆ ಮೆಗಾ ಟೂರ್ನಿ
ನವದೆಹಲಿ: 2027ರ ಏಕದಿನ ವಿಶ್ವಕಪ್ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ, ಕುತೂಹಲ ಮೂಡಿರುವುದು ಬಹುತೇಕರಿಗೆ ಗೊತ್ತೇ ಇದೆ. ಕಾರಣ, ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಣ್ತುಂಬಿಕೊಳ್ಳುವ ಹೆಬ್ಬಯಕೆ. ಇದಕ್ಕೆ ಇನ್ನೂ ಒಂದು ವರ್ಷದ ಸಮಯವಿದೆ. ಈ ಮಧ್ಯೆ, ಟಿ20 ವಿಶ್ವಕಪ್ ಟೂರ್ನಿ ಬರುತ್ತಿರುವುದು ಕ್ರೀಡಾಭಿಮಾನಿಗಳ ಕ್ರಿಕೆಟ್ ಪ್ರೇಮವನ್ನು ಇನ್ನಷ್ಟು ಹೆಚ್ಚಿಸಿದೆ.
ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಮೊದಲ ಹಂತದ ಟಿಕೆಟ್ ಮಾರಾಟ ಈಗ ಶುರುವಾಗಿದೆ. ಇದೇ ಡಿ.11ರ ಸಂಜೆ 6.45ರಿಂದ ಟಿಕೆಟ್ ಬುಕಿಂಗ್ ಅಧಿಕೃತವಾಗಿ ಪ್ರಾರಂಭವಾಗಿದೆ. ಭಾರತದಲ್ಲಿ ಟಿಕೆಟ್ ಬೆಲೆಗಳು ಕೇವಲ 100 ರೂ.ನಿಂದ ಆರಂಭಗೊಂಡಿದೆ. ಶ್ರೀಲಂಕಾದಲ್ಲಿ ಟಿಕೆಟ್ ಬೆಲೆಗಳು ಎಲ್ಕೆಆರ್ 1000 (ಸರಿಸುಮಾರು 270 ರೂ.) ಪ್ರಾರಂಭ ಎನ್ನಲಾಗಿದೆ. ಮೊದಲ ಹಂತದಲ್ಲಿ 20 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟಕ್ಕೆ ಲಭ್ಯವಿವೆ. ಐಸಿಸಿ ಶೀಘ್ರದಲ್ಲೇ ಎರಡನೇ ಹಂತದ ಟಿಕೆಟ್‌ಗಳ ವಿವರಗಳನ್ನೂ ಪ್ರಕಟಿಸಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಫೆಬ್ರವರಿ 7ರಿಂದ ಮಾರ್ಚ್ 8 ರವರೆಗೆ ಈ ಮೆಗಾ ಟೂರ್ನಿಯನ್ನು ನಡೆಸಲಿದೆ.
ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಮನರಂಜನೆಯನ್ನು ಒದಗಿಸುವ ಉದ್ದೇಶದಿಂದ ಟಿಕೆಟ್ ದರವನ್ನು ಇಳಿಕೆ ಮಾಡಿರುವುದಾಗಿ ಐಸಿಸಿ ಘೋಷಿಸಿದೆ. ಕೇವಲ 100 ರೂ.ಗೆ ಟಿಕೆಟ್‌ಗಳು ಲಭ್ಯವಾಗಲಿವೆ ಎಂಬ ಸುದ್ದಿ ಸದ್ಯ ವೀಕ್ಷಕರಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ. ಭಾರತ ಮತ್ತು ಶ್ರೀಲಂಕಾದ ಎಂಟು ಸ್ಟೇಡಿಯಂಗಳಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. ಒಟ್ಟು 20 ತಂಡಗಳು ಭಾಗವಹಿಸಲಿದ್ದು, 55 ಪಂದ್ಯಗಳು ನಡೆಯಲಿವೆ. ಗ್ರೂಪ್ ಸ್ಟೇಜ್ ನಂತರ, ಟೂರ್ನಿಯ ನಾಕೌಟ್ ಹಂತ, ಸೆಮಿಫೈನಲ್ ಮತ್ತು ಫೈನಲ್ ಇರಲಿದೆ.
ಭಾರತದ ಕ್ರೀಡಾಂಗಣಗಳು
1. ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್
2. ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
3. ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
4. ವಾಂಖೆಡೆ ಕ್ರೀಡಾಂಗಣ, ಮುಂಬೈ
5. ಈಡನ್ ಗಾರ್ಡನ್ಸ್, ಕೋಲ್ಕತ
ಶ್ರೀಲಂಕಾ ಕ್ರೀಡಾಂಗಣಗಳು
1. ಆರ್. ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ
2. ಸಿನಲ್ಲೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್, ಕೊಲಂಬೊ
3. ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಕ್ಯಾಂಡಿ