ಈ ಇಬ್ಬರು ಆಟಗಾರರು ತಮ್ಮ ಆಟದ ಶೈಲಿ ಬದಲಿಸದಿದ್ರೆ ಟೀಮ್​ ಇಂಡಿಯಾಗೆ ಸೋಲು ಕಟ್ಟಿಟ್ಟಬುತ್ತಿ..! T20 World Cup 2026  
ಕ್ರಿಕೆಟ್

ಈ ಇಬ್ಬರು ಆಟಗಾರರು ತಮ್ಮ ಆಟದ ಶೈಲಿ ಬದಲಿಸದಿದ್ರೆ ಟೀಮ್​ ಇಂಡಿಯಾಗೆ ಸೋಲು ಕಟ್ಟಿಟ್ಟಬುತ್ತಿ..! T20 World Cup 2026

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಕಳಪೆ ಪ್ರದರ್ಶನ
  • ಅಭಿಷೇಕ್ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರೆ ತಿಲಕ್​ರಿಂದಲೂ ಕಳಪೆ ಪ್ರದರ್ಶನ
  • ಈ ಇಬ್ಬರು ಆಟಗಾರರು ತಮ್ಮ ಆಟದ ಶೈಲಿ ಬದಲಿಸುವಂತೆ ಸಡಗೋಪನ್​ ರಮೇಶ್​ ಸಲಹೆ
T20 World Cup 2026 : ಟೀಮ್​ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ಗಳಾದ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಅಭಿಷೇಕ್ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರೆ, ತಿಲಕ್ ಕೂಡ ತಮ್ಮ ಕಳಪೆ ಬ್ಯಾಟಿಂಗ್‌ನಿಂದ ನಿರಾಶಾದಾಯಕವಾಗಿದ್ದಾರೆ.
ಭಾನುವಾರ (ಫೆ.22) ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಅಭಿ ಮತ್ತು ತಿಲಕ್​ ದಯನೀಯವಾಗಿ ವಿಫಲರಾದರು. ಅಭಿಷೇಕ್ 12 ಎಸೆತಗಳಲ್ಲಿ 15 ರನ್ ಗಳಿಸಿದರೆ, ತಿಲಕ್ 2 ಎಸೆತಗಳಲ್ಲಿ 1 ರನ್​ ಗಳಿಸಿ ಔಟಾದರು. ಇಲ್ಲಿಯವರೆಗೆ, ತಿಲಕ್ ಆಡಿದ 5 ಇನ್ನಿಂಗ್ಸ್‌ಗಳಲ್ಲಿ 21.40 ಸರಾಸರಿಯಲ್ಲಿ ಕೇವಲ 107 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 119ಕ್ಕಿಂತ ಕಡಿಮೆಯಿದೆ.
ಪ್ರತಿಷ್ಠಿತ ಟೂರ್ನಮೆಂಟ್​ನಲ್ಲಿ ಟೀಮ್​ ಇಂಡಿಯಾ ಆಟಗಾರರ ಹೀನಾಯ ಪ್ರದರ್ಶನವನ್ನು ನೋಡಿ, ಭಾರತದ ಮಾಜಿ ಕ್ರಿಕೆಟಿಗ ಸಡಗೋಪನ್ ರಮೇಶ್ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. ವಿಶ್ವಕಪ್‌ನಂತಹ ಮೆಗಾ ಟೂರ್ನಮೆಂಟ್‌ಗಳಲ್ಲಿ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಇಂತಹ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಇಲ್ಲಿಯವರೆಗೆ ಅವರು ಕೇವಲ ಉದ್ಯಾನವನವನ್ನು ಮಾತ್ರ ನೋಡಿದ್ದಾರೆ, ಆದರೆ ವಿಶ್ವಕಪ್ ಒಂದು ದಟ್ಟ ಕಾಡಿನಂತಿದೆ. ನೀವು ಇಲ್ಲಿ ಬೇಟೆಯಾಡಬೇಕು, ಇಲ್ಲದಿದ್ದರೆ ನೀವೇ ಬೇಟೆಯಾಗುತ್ತೀರಿ. ಅಂತಹ ಐಸಿಸಿ ಪಂದ್ಯಾವಳಿಗಳಲ್ಲಿ ಬಹಳಷ್ಟು ಒತ್ತಡವಿರುತ್ತದೆ. ನೀವು ಆ ಒತ್ತಡದೊಂದಿಗೆ ಆಟವಾಡಲು ಕಲಿಯಬೇಕು ಎಂದು ರಮೇಶ್ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.
ಅಂದಹಾಗೆ, ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಪ್ರವೇಶಿಸಿದ ಭಾರತ ತಂಡವು ತನ್ನ ಮೊದಲ ಸೂಪರ್-8 ಪಂದ್ಯವನ್ನು ಸೋತಿದ್ದು, ಸೆಮಿಫೈನಲ್ ಅವಕಾಶಗಳನ್ನು ಸಂಕೀರ್ಣಗೊಳಿಸಿದೆ. ಸೆಮಿಫೈನಲ್ ತಲುಪಲು ಭಾರತ ಉಳಿದ ಎರಡು ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಿದೆ, (ಏಜೆನ್ಸೀಸ್​).