ಟೀಮ್​ ಇಂಡಿಯಾ ವಿರುದ್ಧ ಆಡಲ್ಲ ಎಂದ ಪಾಕಿಸ್ತಾನ 
ಕ್ರಿಕೆಟ್

ಟೀಮ್​ ಇಂಡಿಯಾ ವಿರುದ್ಧ ಆಡದೇ ಹೋದರೆ ಪಾಕಿಸ್ತಾನಕ್ಕೆ ಇಷ್ಟೆಲ್ಲ ನಷ್ಟವಿದೆಯಾ? ಹಾಗಾದರೆ ಮುಗಿತು ಕತೆ...Pakistan

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 7 ರಿಂದ ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್​ ಆರಂಭವಾಗಲಿದೆ
  • ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ
  • ಇನ್ನೇನು ಟೂರ್ನಿ ಆರಂಭವಾಗಬೇಕು ಅಷ್ಟರಲ್ಲಿ ಪಾಕಿಸ್ತಾನ ಮತ್ತೊಂದು ಖ್ಯಾತೆ ತೆಗೆದಿದೆ
  • ಟೀಮ್​ ಇಂಡಿಯಾ ವಿರುದ್ಧ ಗ್ರೂಪ್​ ಪಂದ್ಯವನ್ನು ಆಡುವುದಿಲ್ಲ ಎನ್ನುತ್ತಿದೆ ಪಾಕ್​
Pakistan : ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಫೆ. 7 ರಿಂದ ಈ ಮೆಗಾ ಟೂರ್ನಮೆಂಟ್​ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಇನ್ನೇನು ಟೂರ್ನಿ ಆರಂಭವಾಗಬೇಕು ಅಷ್ಟರಲ್ಲಿ ಪಾಕಿಸ್ತಾನ ಮತ್ತೊಂದು ಖ್ಯಾತೆ ತೆಗೆದಿದೆ. ಈವರೆಗೆ ವಿಶ್ವಕಪ್​ ಬಹಿಷ್ಕರಿಸುತ್ತೇವೆ ಎಂದು ಬೊಂಬಡಿ ಬಜಾಯಿಸುತ್ತಿದ್ದ ಪಾಕ್​, ಇದೀಗ ಇಂಡಿಯಾ ವಿರುದ್ಧ ಗ್ರೂಪ್​ ಪಂದ್ಯವನ್ನು ಆಡುವುದಿಲ್ಲ ಎಂದಿದೆ. ಹೀಗಾಗಿ, ಜಾಗತಿಕವಾಗಿ ಪಾಕ್​, ತೀವ್ರ ಟೀಕೆಗೆ ಗುರಿಯಾಗಿದೆ. ಒಂದು ವೇಳೆ, ಪಾಕ್​ ಹೇಳಿದಂತೆ ಭಾರತದ ವಿರುದ್ಧ ಆಡದೇ ಹೋದರೆ, ಏನೆಲ್ಲ ಪರಿಣಾಮಗಳನ್ನು ಎದುರಿಸಲಿದೆ ಅನ್ನೋದನ್ನು ನಾವೀಗ ಡೀಟೈಲ್​ ಆಗಿ ತಿಳಿದುಕೊಳ್ಳೋಣ.

ಅನುಮತಿ ನೀಡಿದ ಪಾಕ್​ ಸರ್ಕಾರ

ಪಾಕಿಸ್ತಾನದ ಮೇಲಿನ ಪರಿಣಾಮವನ್ನು ತಿಳಿದುಕೊಳ್ಳುವ ಮುನ್ನ ನಿನ್ನೆ ಏನಾಯಿತು ಅನ್ನೋದನ್ನು ಮೊದಲು ತಿಳಿದುಕೊಂಡು ಬಿಡೋಣ. ಅಂದಹಾಗೆ, ಭಾನುವಾರ (ಫೆ.01) ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ಸರ್ಕಾರ, 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ತಮ್ಮ ತಂಡಕ್ಕೆ ಅನುಮತಿ ನೀಡಿರುವುದಾಗಿ ಘೋಷಿಸಿದೆ. ಆದರೆ, ಫೆಬ್ರವರಿ 15 ರಂದು ಭಾರತ ವಿರುದ್ಧ ನಿಗದಿಯಾಗಿರುವ ಗ್ರೂಪ್​ ಪಂದ್ಯವನ್ನು ನಮ್ಮ ತಂಡ ಆಡುವುದಿಲ್ಲ ಎಂದು ಅದೇ ಸಮಯದಲ್ಲಿ ಹೇಳಿದೆ.

ಕಾರಣ ತಿಳಿಸಿಲ್ಲ ಪಾಕ್​

ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಕಾರಣ ಏನು ಅನ್ನೋದನ್ನು ಪಾಕಿಸ್ತಾನ ತಿಳಿಸಿಲ್ಲ. ಆದರೆ, ಈ ಮೆಗಾ ಟೂರ್ನಮೆಂಟ್​ನಿಂದ ಬಾಂಗ್ಲಾದೇಶವನ್ನು ಹೊರಗಿಡುವ ಮೂಲಕ ಐಸಿಸಿ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಅನ್ನೋದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ)ಯ ಚೇರ್ಮನ್​ ಮೋಹ್ಸಿನ್​ ನಖ್ವಿ ಅವರ ವಾದ. ಆದರೆ, ಭಾರತಕ್ಕೆ ಬರಲು ಬಾಂಗ್ಲಾ ಒಪ್ಪದೇ, ಈ ಟೂರ್ನಿಯಿಂದ ಹಿಂದೆ ಸರಿದಿದೆ. ಭಾರತದಲ್ಲಿ ನಮಗೆ ಭದ್ರತೆ ಇಲ್ಲ ಎಂಬ ನೆಪ ನೀಡಿದೆ. ಆದರೆ, ಭಾರತದಲ್ಲೇ ಆಡಬೇಕು ಎಂದು ಐಸಿಸಿ ಹೇಳಿತು. ಆದರೆ, ಐಸಿಸಿ ಮಾತನ್ನು ಧಿಕ್ಕರಿಸಿ, ವಿಶ್ವಕಪ್​ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಗ್ಲಾ ಹೇಳಿದೆ. ಹೀಗಾಗಿ ಬಾಂಗ್ಲಾ ಬದಲು ಸ್ಕಾಟ್​ಲೆಂಡ್​ಗೆ ಐಸಿಸಿ ಅವಕಾಶ ನೀಡಿದೆ. ಟಿ20 ವಿಶ್ವಕಪ್​ನಲ್ಲಿ ನಮ್ಮ ತಂಡ ಭಾಗವಹಿಸುವುದು ನಮ್ಮ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದು ನಖ್ವಿ ಆರಂಭದಲ್ಲಿ ಹೇಳಿದ್ದರು. ಆದರೆ, ಇಡೀ ವಿಶ್ವಕಪ್​ ಅನ್ನು ಬಹಿಷ್ಕರಿಸುವ ಬದಲು ಇಂಡಿಯಾ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಪಾಕ್​ ತೆಗೆದುಕೊಂಡಿದೆ.
ಟೀಮ್​ ಇಂಡಿಯಾದ ವಿರುದ್ಧ ಗ್ರೂಪ್​ ಪಂದ್ಯವನ್ನು ಬಹಿಷ್ಕರಿಸಿರುವ ಪಾಕಿಸ್ತಾನದ ಮೇಲೆ ಏನೆಲ್ಲ ಪರಿಣಾಮಗಳು ಬೀರಬಹುದು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.

ಆರ್ಥಿಕ ಹೊಡೆತ

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯದಿದ್ದರೆ ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವ ಒಪ್ಪಂದಗಳಿಂದ ಐಸಿಸಿಗೆ ಗಮನಾರ್ಹ ಆದಾಯ ನಷ್ಟವಾಗುತ್ತದೆ. ಇದರಿಂದ ಪಾಕ್​ ವಿರುದ್ಧ ಐಸಿಸಿ ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಐಸಿಸಿಯ ವಾರ್ಷಿಕ ಆದಾಯದಲ್ಲಿ ಪಾಕಿಸ್ತಾನಕ್ಕೆ ತನ್ನ ಪಾಲು ಸಿಗುವುದಿಲ್ಲ. ಅಂದಾಜು 34.5 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 316 ಕೋಟಿ) ಪಾಕಿಸ್ತಾನಕ್ಕೆ ನಷ್ಟವಾಗಬಹುದು. ಇದು ಐಸಿಸಿಯ ಶೇ. 6 ರಷ್ಟು ಆದಾಯವಾಗಿದೆ. ಈಗಾಗಲೇ ಆರ್ಥಿಕ ಸ್ಥಿತಿಯಲ್ಲಿ ಹೀನಾಯ ಹಂತವನ್ನು ತಲುಪಿರುವ ಪಾಕ್​, ಶೇ. 6 ರಷ್ಟು ಆದಾಯ ಕಳೆದುಕೊಂಡಲ್ಲಿ ಪಿಸಿಬಿ, ಆರ್ಥಿಕ ಕುಸಿತ ಕಾಣುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೆ, ಅದರಿಂದ ಪಾಕ್​, ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಜಿಯೋ-ಸ್ಟಾರ್‌ಗೆ ಉಂಟಾದ ನಷ್ಟ ಸರಿದೂಗಿಸುವುದು

ಟಿ20 ವಿಶ್ವಕಪ್​ ಟೂರ್ನಿಯ ಪ್ರಸಾರದ ಹಕ್ಕನ್ನು ಜಿಯೋ-ಸ್ಟಾರ್​ ಸಾವಿರಾರು ಕೋಟಿ ನೀಡಿ ಖರೀದಿ ಮಾಡಿದೆ. ಇಷ್ಟೊಂದು ಬಂಡವಾಳ ಹೂಡಿರುವ ಜಿಯೋ-ಸ್ಟಾರ್​, ಜಾಹೀರಾತು ಆದಾಯಗಳ ಮೂಲಕ ಲಾಭ ಗಳಿಸುತ್ತದೆ. ಅದರಲ್ಲೂ ಇಂಡೋ-ಪಾಕ್​ ಪಂದ್ಯ ಎಂದರೆ, ಇಡೀ ವಿಶ್ವವೇ ತುದಿಗಾಲಲ್ಲಿ ಎದುರು ನೋಡುತ್ತಾರೆ. ಮಿಲಿಯನ್​ಗಟ್ಟಲೆ ಜನರು ಹೈವೋಲ್ಟೇಜ್​ ಪಂದ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಹೀಗಾಗಿ, ಈ ಪಂದ್ಯದ ವೇಳೆ ತಮ್ಮ ಉತ್ಪನ್ನಗಳ ಜಾಹೀರಾತಿಗಾಗಿ ಅನೇಕ ಕಂಪನಿಗಳು ಕೋಟಿ ಕೋಟಿ ಖರ್ಚು ಮಾಡುತ್ತವೆ. ಒಂದು ವೇಳೆ ಪಂದ್ಯ ರದ್ದಾದರೆ, ಜಿಯೋ-ಸ್ಟಾರ್​ಗೆ ಕೋಟಿ ಕೋಟಿ ನಷ್ಟವಾಗುತ್ತದೆ. 10 ಸೆಕೆಂಡುಗಳ ಕಮರ್ಷಿಯಲ್ ಸ್ಲಾಟ್‌ಗೆ 40 ಲಕ್ಷ ರೂ. ನಿಗದಿಯಂತೆ ಸುಮಾರು 200ರಿಂದ 250 ಕೋಟಿ ರೂ. ಜಾಹೀರಾತು ಆದಾಯ ನಷ್ಟವಾಗಬಹುದು. ಆ ಸಮಯದಲ್ಲಿ ಆ ನಷ್ಟವನ್ನು ಭರಿಸುವಂತೆ ಪಿಸಿಬಿಗೆ ಐಸಿಸಿ ಆದೇಶ ನೀಡಬಹುದು. ಇದರಿಂದ ಪಿಸಿಬಿಗೆ ಭಾರೀ ಆರ್ಥಿಕ ಹೊರೆಯಾಗಲಿದೆ.

ದ್ವಿಪಕ್ಷೀಯ ಸರಣಿ, ಡಬ್ಲ್ಯುಟಿಸಿ ಅಂಕ, ಐಸಿಸಿ ರ್ಯಾಂಕಿಂಗ್​ ಮೇಲೆ ಪರಿಣಾಮ

ಒಂದು ವೇಳೆ ಪಾಕಿಸ್ತಾನ ವಿಶ್ವಕಪ್​ನಲ್ಲಿ ವೇಳಾಪಟ್ಟಿಯ ಪ್ರಕಾರ ಆಡದೇ ಹೋದರೆ, ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ. ಐಸಿಸಿಯು ದ್ವಿಪಕ್ಷೀಯ ಸರಣಿಯನ್ನು ಆಡದಂತೆ ಬ್ಯಾನ್​ ಮಾಡಬಹುದು. ಇದರಿಂದ ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಫ್​ (ಡಬ್ಲ್ಯುಟಿಸಿ) ಅಂಕಗಳು ಮತ್ತು ಐಸಿಸಿ ರ್ಯಾಂಕಿಂಗ್​ನಲ್ಲಿ ಭಾರಿ ಕುಸಿತ ಕಾಣುತ್ತದೆ. ಇದಿಷ್ಟೇ ಅಲ್ಲದೇ, ತವರಿನಲ್ಲಿ ಯಾವುದೇ ಕ್ರಿಕೆಟ್​ ಪಂದ್ಯಗಳು ನಡೆಯದೇ ಪಾಕಿಸ್ತಾನದ ಒಟ್ಟಾರೆ ಆರ್ಥಿಕತೆಯೇ ಕುಸಿತ ಕಾಣಬಹುದು.

ಪಿಎಸ್​ಎಲ್​ ಮೇಲೆ ಪರಿಣಾಮ

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನ ಪ್ರಮುಖ ಟಿ20 ಲೀಗ್ ಆಗಿದೆ. ಆದಾಗ್ಯೂ, ಇದರ ಯಶಸ್ಸು ಸಂಪೂರ್ಣವಾಗಿ ವಿದೇಶಿ ಆಟಗಾರರ ಭಾಗವಹಿಸುವಿಕೆ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಪಾಕಿಸ್ತಾನ ವಿಶ್ವ ಕ್ರೀಡಾಕೂಟದ ನಿಯಮಗಳನ್ನು ಅನುಸರಿದೇ ಹೋದರೆ, ಐಸಿಸಿ ಮತ್ತು ಇತರ ಸದಸ್ಯ ಮಂಡಳಿಗಳು (ಕ್ರಿಕೆಟ್ ಆಸ್ಟ್ರೇಲಿಯಾ ಅಥವಾ ಇಸಿಬಿ ನಂತಹವು) ಐಸಿಸಿ ಸೂಚನೆಯ ಮೇರೆಗೆ ತಮ್ಮ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸಲು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ನಿರಾಕರಿಸಬಹುದು. ಇದರಿಂದ ಪಾಕ್​ಗೆ ಬಹುದೊಡ್ಡ ಹೊಡೆತ ಬಿದ್ದಂತಾಗುತ್ತದೆ.

ವಿಶ್ವಕಪ್​ನಿಂದಲೇ ಬ್ಯಾನ್​

ಭಾರತಕ್ಕೆ ಬರಲು ಒಪ್ಪದ ಪಾಕಿಸ್ತಾನಕ್ಕೆ ಅದರ ಮನವಿಯಂತೆ ಹೈಬ್ರಿಡ್​ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಆಡಿಸಲು ಐಸಿಸಿ ಅನುಮತಿ ನೀಡಿದೆ. ಹೀಗಿರುವಾಗ, ಭಾರತದ ವಿರುದ್ಧ ಆಡುವುದೇ ಇಲ್ಲ ಅಂದರೆ, ಅದು ಐಸಿಸಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದಂತೆ. ಫೆ.15ರಂದು ಟೀಮ್​ ಇಂಡಿಯಾ ವಿರುದ್ಧ ಪಾಕ್​ ಆಡದೇ ಹೋದರೆ, ಇಡೀ ವಿಶ್ವಕಪ್​ನಿಂದಲೇ ಪಾಕಿಸ್ತಾನವನ್ನು ಐಸಿಸಿ ಹೊರಗಿಡಬಹುದು. ಈ ರೀತಿ ಆದಲ್ಲಿ ಪಾಕಿಸ್ತಾನ ಕ್ರೀಡಾ ಜಗತ್ತಿನ ಎದುರು ಬೆತ್ತಲಾಗಲಿದೆ. ಭಾರೀ ಆರ್ಥಿಕ ಹೊಡೆತದಿಂದ ಸಂಪೂರ್ಣ ನೆಲ ಕಚ್ಚಲಿದೆ.

ಏಕಾಂಗಿಯಾಗಿಬಿಡುತ್ತೆ ಪಾಕ್​

ಕ್ರಿಕೆಟ್ ಆರ್ಥಿಕತೆಯು ದ್ವಿಪಕ್ಷೀಯ ಸಂಬಂಧಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಅಲ್ಲದೆ, ಐಸಿಸಿಯ ಪ್ರಾಥಮಿಕ ಆದಾಯದ ಮೂಲ ವಿಶ್ವಕಪ್​ನಂತಹ ಮೆಗಾ ಟೂರ್ನಿಗಳು. ಇದಕ್ಕೆ ಅಡ್ಡಿಪಡಿಸಿದರೆ, ಪಾಕಿಸ್ತಾನವು ಬಹಳ ದೊಡ್ಡ ಹೊಡೆತವನ್ನು ಅನುಭವಿಸುತ್ತದೆ. ಎಲ್ಲ ರಾಷ್ಟ್ರಗಳು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ, ಪಿಸಿಬಿಯ ಸ್ವತಂತ್ರ ಆದಾಯದ ಪ್ರಾಥಮಿಕ ಮೂಲವೇ ಮಾಯವಾಗುತ್ತದೆ.

ವಿಶ್ವಕಪ್​ ಆಡಲು ಅನುಮತಿ ಸಿಕ್ಕರೂ ಪಾಕ್​ಗೆ ನಷ್ಟ

ಅಂದಹಾಗೆ, ಭಾರತದ ವಿರುದ್ಧ ಆಡುವುದಿಲ್ಲ ಎಂಬುದು ಪಾಕಿಸ್ತಾನದ ನಿರ್ಧಾರ. ಒಂದು ವೇಳೆ ಐಸಿಸಿ ಇದಕ್ಕೆ ಅನುಮತಿ ನೀಡಿದರು ಕೂಡ ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ಬೀಳಲಿದೆ. ಪಾಕ್​ನ ಈ ಒಂದು ನಿರ್ಧಾರವು ಗ್ರೂಪ್ ಎ ಅರ್ಹತಾ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ. ಒಂದೆಡೆ ಇದು ಭಾರತಕ್ಕೆ ಪ್ಲಸ್​ ಆದರೆ, ಪಾಕಿಸ್ತಾನಕ್ಕೆ ಗಂಭೀರ ಹೊಡೆತ ಬೀಳಲಿದೆ. ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೈದಾನಕ್ಕೆ ಇಳಿಯದಿದ್ದರೆ, ಐಸಿಸಿ ನಿಯಮಗಳ ಪ್ರಕಾರ ಭಾರತವು ವಾಕ್‌ಓವರ್ ಮೂಲಕ ಪೂರ್ಣ ಎರಡು ಅಂಕಗಳನ್ನು ಪಡೆಯುತ್ತದೆ. ಅದೇ ರೀತಿ ಪಾಕಿಸ್ತಾನಕ್ಕೆ ಶೂನ್ಯ ಅಂಕಗಳು ಸಿಗುತ್ತದೆ. ಇದು ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಆದರೆ, ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕಠಿಣವಾಗುತ್ತದೆ. ಈ ನಿರ್ಧಾರದಿಂದ ಪಾಕಿಸ್ತಾನ ಯೂಟರ್ನ್​ ತೆಗೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).