ಇದೇನಾದ್ರೂ ನಡೆದರೆ ಭಾರತಕ್ಕೆ ನೆಟ್ ರನ್ ರೇಟ್ ಅವಶ್ಯಕತೆಯೇ ಇರುವುದಿಲ್ಲ! T20 World Cup 2026
- ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಭಾಗವಾಗಿ ಇಂದು ಜಿಂಬಾಬ್ವೆ ವಿರುದ್ಧ ಭಾರತ ಸೆಣಸಾಟ
- ಮಹತ್ವದ ಪಂದ್ಯಕ್ಕೆ ವೇದಿಕೆಯಾಗಲಿದೆ ಚೆನ್ನೈನ ಚೆಪಾಕ್ ಕ್ರೀಡಾಂಗಣ
- ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಶಯ ಟೀಮ್ ಇಂಡಿಯಾಗಿದೆ
T20 World Cup 2026 : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಭಾಗವಾಗಿ ಟೀಮ್ ಇಂಡಿಯಾ ಇಂದು (ಫೆ.26) ಕ್ರಿಕೆಟ್ ಶಿಶು ಜಿಂಬಾಬ್ವೆಯನ್ನು ಎದುರಿಸಲಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆಯಾಗಲಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ, ತನ್ನ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಆಶಯವನ್ನು ಟೀಮ್ ಇಂಡಿಯಾ ಹೊಂದಿದೆ.
ಆದಾಗ್ಯೂ, ಈ ಪಂದ್ಯಕ್ಕೂ ಮೊದಲು, ಅಹಮದಾಬಾದ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದ ಫಲಿತಾಂಶವು ಕೂಡ ಭಾರತ ತಂಡದ ಸೆಮಿಫೈನಲ್ ಅವಕಾಶಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹೀಗಾಗಿ, ಟೀಮ್ ಇಂಡಿಯಾದ ಅಭಿಮಾನಿಗಳು ವಿಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಸೂಪರ್-8 ರ ಮೊದಲ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಇದರಿಂದಾಗಿ, ಭಾರತ ತಂಡದ ನೆಟ್ ರನ್ ರೇಟ್ (-3.800) ತೀವ್ರವಾಗಿ ಕುಸಿಯಿತು. ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆಯನ್ನು ಭಾರಿ ಅಂತರದಿಂದ ಸೋಲಿಸಿ ಬೃಹತ್ ನೆಟ್ ರನ್ ರೇಟ್ (+5.350) ಪಡೆದುಕೊಂಡಿತು. ಉತ್ತಮ ನೆಟ್ ರನ್ ರೇಟ್ನೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸಮಾನ ಅಂಕಗಳನ್ನು ಗಳಿಸಿವೆ ಮತ್ತು ವೆಸ್ಟ್ ಇಂಡೀಸ್ ಪ್ರಸ್ತುತ ಗ್ರೂಪ್-1 ರಲ್ಲಿ ಅಗ್ರಸ್ಥಾನದಲ್ಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಬೇಕೆಂದು ಭಾರತ ತಂಡ ಬಯಸುತ್ತದೆ. ಏಕೆಂದರೆ, ಹರಿಣ ಪಡೆ ಗೆದ್ದರೆ ಭಾರತದ ಸೆಮಿಸ್ ಹಾದಿ ಸುಲಭವಾಗುತ್ತದೆ. ಒಂದು ವೇಳೆ ವೆಸ್ಟ್ ಇಂಡೀಸ್ ಗೆದ್ದರೆ, ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ತಮ್ಮ ಕೊನೆಯ ಸೂಪರ್ 8ರ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಾಗುವ ಅನಿವಾರ್ಯ ಸೃಷ್ಟಿಯಾಗುತ್ತದೆ.
ವಿಂಡೀಸ್ ಸೋತರೆ ಏನಾಗುತ್ತದೆ?
ಒಂದು ವೇಳೆ ವೆಸ್ಟ್ ಇಂಡೀಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ, ಭಾರತಕ್ಕೆ ಲಾಭವಾಗುತ್ತದೆ. ಏಕೆಂದರೆ, ಆಗ ನೆಟ್ ರನ್ ರೇಟ್ ಮುಖ್ಯವಾಗುವುದಿಲ್ಲ. ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಗೆದ್ದರೆ 4 ಅಂಕಗಳನ್ನು ಗಳಿಸಿ ಗ್ರೂಪ್ 1 ರಲ್ಲಿ ಅಗ್ರಸ್ಥಾನವನ್ನು ತಲುಪುತ್ತದೆ. ಜಿಂಬಾಬ್ವೆ ವಿರುದ್ಧ ಭಾರತ ಗೆದ್ದರೆ, ಅವರು ಎರಡು ಅಂಕಗಳನ್ನು ಗಳಿಸುತ್ತಾರೆ. ಆಗ ಭಾರತ ಮತ್ತು ವೆಸ್ಟ್ ಇಂಡೀಸ್ ತಲಾ ಎರಡು ಅಂಕಗಳೊಂದಿಗೆ ಸಮಾನವಾಗಿರುತ್ತವೆ. ಇದಾದ ಬಳಿಕ ಮಾರ್ಚ್ 1 ರಂದು ನಡೆಯುವ ಭಾರತ ಮತ್ತು ವೆಸ್ಟ್ ಇಂಡೀಸ್ ಪಂದ್ಯವು ನಿರ್ಣಾಯಕ ಪಂದ್ಯವಾಗುತ್ತದೆ. ಈ ಪಂದ್ಯವನ್ನು ಗೆದ್ದ ತಂಡವು ನೇರವಾಗಿ ಸೆಮಿಫೈನಲ್ ಪ್ರವೇಶಿಸುತ್ತದೆ.
ದಕ್ಷಿಣ ಆಫ್ರಿಕಾ ತನ್ನ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ಎದುರಿಸಲಿದೆ. ಈ ಪಂದ್ಯದ ಫಲಿತಾಂಶವು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪಂದ್ಯದಲ್ಲಿ ಸಫಾರಿಗಳು ಸೋತರೂ, ಅವರು 4 ಅಂಕಗಳೊಂದಿಗೆ ಸೆಮಿಫೈನಲ್ ತಲುಪುತ್ತಾರೆ, (ಏಜೆನ್ಸೀಸ್).