2026 T20 World Cup: ಸುಲಭ ಗುಂಪಿನಲ್ಲಿ ಭಾರತ, ಪಾಕಿಸ್ತಾನ ತಂಡಗಳು!
ನವದೆಹಲಿ: ಭಾರತ-ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಮುಂದಿನ ವರ್ಷದ ಟಿ20 ವಿಶ್ವಕಪ್ ಟೂರ್ನಿಯ ಸಂಭಾವ್ಯ ಗುಂಪುಗಳ ವಿವರ ಬಹಿರಂಗಗೊಂಡಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದರೂ, ಇದೊಂದು ಸುಲಭ ಗುಂಪು ಆಗಿದೆ.
ಟೆಸ್ಟ್ ಮಾನ್ಯತೆ ಇಲ್ಲದ ನೆದರ್ಲೆಂಡ್, ನಮೀಬಿಯಾ, ಅಮೆರಿಕ ಗುಂಪಿನಲ್ಲಿರುವ ಇತರ 3 ತಂಡಗಳಾಗಿವೆ. ಇದರಿಂದ ಭಾರತ-ಪಾಕ್ ನಡುವಿನ ಪಂದ್ಯದ ಲಿತಾಂಶ ಏನೇ ಬಂದರೂ, ಉಭಯ ತಂಡಗಳು ಸೂಪರ್-8 ಹಂತಕ್ಕೇರುವ ಹಾದಿ ಸುಲಭವಿದೆ. ಆದರೆ ಕಳೆದ ಆವೃತ್ತಿಯಲ್ಲಿ ಪಾಕ್, ಅಮೆರಿಕ ವಿರುದ್ಧ ಆಘಾತ ಎದುರಿಸಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು ಎಂಬುದು ಕೂಡ ಗಮನಾರ್ಹವೆನಿಸಿದೆ.
ಟೂರ್ನಿಯಲ್ಲಿ ಆಡುವ 20 ತಂಡಗಳನ್ನು ತಲಾ 5ರಂತೆ 4 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್-8 ಹಂತಕ್ಕೇರಲಿವೆ. ಇಲ್ಲಿಂದ ಅಗ್ರ 4 ತಂಡಗಳು ಸೆಮಿಫೈನಲ್ಗೇರಲಿವೆ.
ಸಹ-ಆತಿಥೇಯ ಶ್ರೀಲಂಕಾ ತಂಡ ಗ್ರೂಪ್ ಆಫ್ ಡೆತ್ ಎನಿಸುವಂಥ ಗುಂಪಿನಲ್ಲಿದ್ದು, ಮಾಜಿ ಚಾಂಪಿಯನ್ ಆಸ್ಟ್ರೆಲಿಯಾ ಜತೆಗೆ ಟೆಸ್ಟ್ ಮಾನ್ಯತೆಯ ಜಿಂಬಾಬ್ವೆ, ಐರ್ಲೆಂಡ್ ಮತ್ತು ಓಮನ್ ಗುಂಪಿನ ಇತರ ತಂಡಗಳಾಗಿವೆ. 2026ರ ಫೆಬ್ರವರಿ 7ರಿಂದ ಮಾರ್ಚ್ 8ರವರೆಗೆ ನಡೆಯಲಿರುವ ಟೂರ್ನಿಯ ಡ್ರಾ ವಿವರವನ್ನು ಐಸಿಸಿ ನವೆಂಬರ್ 25ರಂದು ಮುಂಬೈನಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ.
1: ಭಾರತ (1ನೇ ರ್ಯಾಂಕ್), ಪಾಕಿಸ್ತಾನ (7), ನೆದರ್ಲೆಂಡ್ (13), ನಮೀಬಿಯಾ (15), ಅಮೆರಿಕ (18).
2: ಆಸ್ಟ್ರೆಲಿಯಾ (2), ಶ್ರೀಲಂಕಾ (8), ಜಿಂಬಾಬ್ವೆ (11), ಐರ್ಲೆಂಡ್ (12), ಓಮನ್ (20).
3: ಇಂಗ್ಲೆಂಡ್ (3), ವೆಸ್ಟ್ ಇಂಡೀಸ್ (6), ಬಾಂಗ್ಲಾದೇಶ (9), ನೇಪಾಳ (17), ಇಟಲಿ (28).
4: ನ್ಯೂಜಿಲೆಂಡ್ (4), ದಕ್ಷಿಣ ಆಫ್ರಿಕಾ (5), ಅಫ್ಘಾನಿಸ್ತಾನ (10), ಯುಎಇ (16), ಕೆನಡಾ (18).