ಬಲಿಷ್ಠ ಆಸ್ಟ್ರೇಲಿಯಾಕ್ಕೆ ಮಣ್ಣುಮುಕ್ಕಿಸಿದ ಜಿಂಬಾಬ್ವೆ ( T20 World Cup 2026 )
- ಫೆಬ್ರವರಿ 7ರಂದು ಆರಂಭವಾದ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ ರೋಚಕ ಹಾದಿಯಲ್ಲಿ ಸಾಗುತ್ತಿದೆ
- ಅಚ್ಚರಿಯ ಸಂಗತಿ ಏನೆಂದರೆ ಕ್ರಿಕೆಟ್ ಶಿಶುಗಳು ಅತ್ಯುತ್ತಮ ಪ್ರದರ್ಶನದೊಂದಿಗೆ ಬಲಿಷ್ಠ ತಂಡಗಳಿಗೆ ಶಾಕ್ ನೀಡುತ್ತಿವೆ
- ಇದೀಗ, ಕ್ರಿಕೆಟ್ ಶಿಶು ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ಉಣಿಸಿದೆ
T20 World Cup 2026 : ಫೆಬ್ರವರಿ 7ರಂದು ಆರಂಭವಾದ ಟಿ20 ವಿಶ್ವಕಪ್ ಮೆಗಾ ಟೂರ್ನಮೆಂಟ್ ರೋಚಕ ಹಾದಿಯಲ್ಲಿ ಸಾಗುತ್ತಿದೆ. ದಿನದಿಂದ ದಿನಕ್ಕೆ ಟೂರ್ನಿಯ ಖ್ಯಾತಿ ಹೆಚ್ಚಾಗುತ್ತಿದೆ. ಪ್ರತಿ ಪಂದ್ಯಗಳು ಪ್ರೇಕ್ಷಕರ ಕುತೂಹಲವನ್ನು ತಣಿಸುತ್ತಿವೆ. ಅಚ್ಚರಿಯ ಸಂಗತಿ ಏನೆಂದರೆ, ಕ್ರಿಕೆಟ್ ಶಿಶುಗಳು ಅಂದರೆ, ಯುವ ತಂಡಗಳೇ ಅತ್ಯುತ್ತಮ ಪ್ರದರ್ಶನ ನೀಡುತ್ತಿವೆ. ಬಲಿಷ್ಠ ತಂಡಗಳಿಗೆ ಶಾಕ್ ನೀಡುತ್ತಿವೆ.
ಲೀಗ್ ಹಂತದಲ್ಲಿ ಅಮೆರಿಕ ತಂಡ ಭಾರತವನ್ನು ಭಯ ಬೀಳಿಸಿದ್ದು ಗೊತ್ತೇ ಇದೆ. ಅದೇ ರೀತಿ, ನೆದರ್ಲ್ಯಾಂಡ್ಸ್ ತಂಡ ಪಾಕಿಸ್ತಾನಕ್ಕೆ ಆಘಾತ ಉಂಟು ಮಾಡಿತು. ಕಳೆದ ಫೆ.8ರಂದು ನೇಪಾಳ ತಂಡವು ಕ್ರಿಕೆಟ್ ಜನಕ ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್ ನೀಡಿತು. ಆಂಗ್ಲ ಪಡೆ ನೀಡಿದ 184 ರನ್‌ಗಳ ಗುರಿ ಬೆನ್ನತ್ತಿದ ನೇಪಾಳ ಕೇವಲ 4 ರನ್ ಅಂತರದಲ್ಲಿ ಸೋಲುಂಡಿತು. ಇದೀಗ, ಕ್ರಿಕೆಟ್ ಶಿಶು ಜಿಂಬಾಬ್ವೆ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ಉಣಿಸಿದೆ.
ಹೌದು, ಇಂದು (ಫೆ.13) ನಡೆದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಜಿಂಬಾಬ್ವೆ 23 ರನ್‌ಗಳಿಂದ ಗೆದ್ದಿತು. ವಿಶ್ವಕಪ್ನಂತಹ ಮೆಗಾ ಟೂರ್ನಮೆಂಟ್ಗಳನ್ನು ಉತ್ತಮ ದಾಖಲೆಯನ್ನು ಹೊಂದಿರುವ ಆಸಿಸ್ ಪಡೆಗೆ ಜಿಂಬಾಂಬ್ವೆ ಸೋಲುಣಿಸಿದ್ದು, ಇಡೀ ವಿಶ್ವ ಕ್ರಿಕೆಟ್ ಜಿಂಬಾಬ್ವೆ ಕಡೆಗೆ ಬೆರಗು ಕಣ್ಣಿನಿಂದ ನೋಡುತ್ತಿದೆ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ಜಿಂಬಾಬ್ವೆ ಪರ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ (ಔಟಾಗದೆ 64 ರನ್, 56 ಎಸೆತ, 7 ಬೌಂಡರಿ) ಅಜೇಯ ಅರ್ಧಶತಕ ಗಳಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ತಡಿವಾನಾಶೆ ಮರುಮಾನಿ (35 ರನ್, 21 ಎಸೆತ, 7 ಬೌಂಡರಿ), ಒನ್-ಡೌನ್ ಬ್ಯಾಟರ್ ರಯಾನ್ ಬರ್ಲ್ (35 ರನ್, 30 ಎಸೆತ, 4 ಬೌಂಡರಿ) ಮತ್ತು ನಾಯಕ ಸಿಕಂದರ್ ರಜಾ (ಔಟಾಗದೆ 19 ರನ್, 12 ಎಸೆತ , 2 ಬೌಂಡರಿ) ಉತ್ತಮ ಪ್ರದರ್ಶನ ನೀಡಿದರು. ಆಸೀಸ್ ಬೌಲರ್‌ಗಳಲ್ಲಿ ಮಾರ್ಕಸ್ ಸ್ಟೊಯಿನಿಸ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆಸೀಸ್ ಪರ, ಮ್ಯಾಟ್ ರೆನ್ಶಾ (65 ರನ್, 44 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕ ಗಳಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ (31 ರನ್, 32 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ರನ್ ಕಾಣಿಕೆ ನೀಡಿದರು. ನಾಯಕ ಟ್ರಾವಿಸ್ ಹೆಡ್ (17) ಪರಿಣಾಮಕಾರಿ ಆಟವಾಡಲಿಲ್ಲ. ಜೋಶ್ ಇಂಗ್ಲಿಷ್ (8) ಮತ್ತು ಮಾರ್ಕಸ್ ಸ್ಟೊಯಿನಿಸ್ (6) ಒಂದಂಕಿಗೆ ಸೀಮಿತವಾದರೆ, ಕ್ಯಾಮರೂನ್ ಗ್ರೀನ್ ಮತ್ತು ಟಿಮ್ ಡೇವಿಡ್ ಡಕ್ ಔಟ್ ಆದರು. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ ನಾಲ್ಕು ವಿಕೆಟ್ ಪಡೆದರು. ಬ್ರಾಡ್ ಇವಾನ್ಸ್ ಮೂರು ವಿಕೆಟ್ ಪಡೆದರೆ, ವೆಲ್ಲಿಂಗ್ಟನ್ ಮಸಕಡ್ಜಾ ಮತ್ತು ರಯಾನ್ ಬರ್ಲೆ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್).