ಸಂಜು ಸ್ಯಾಮ್ಸನ್ಗೆ ಐಸಿಸಿ ಮಾಸಿಕ ಪ್ರಶಸ್ತಿ ಗೌರವ
ದುಬೈ: ಭಾರತದ ಟಿ20 ವಿಶ್ವಕಪ್ ಗೆಲುವಿನಲ್ಲಿ ಮಿಂಚಿದ್ದ ವಿಕೆಟ್ ಕೀಪರ್-ಆರಂಭಿಕ ಸಂಜು ಸ್ಯಾಮ್ಸನ್ (Sanju Samson) ಐಸಿಸಿಯ ಮಾರ್ಚ್ ತಿಂಗಳ ಆಟಗಾರ ಪ್ರಶಸ್ತಿಗೆ (ICC Men''s Player of the Month for March) ಭಾಜನರಾಗಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಸರಣಿಶ್ರೇಷ್ಠ ಪ್ರಶಸ್ತಿಯ ಬಳಿಕ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಮೊದಲಿಗೆ ಆಡುವ 11ರ ಬಳಗದ ಮೊದಲ ಆಯ್ಕೆ ಆಗಿರದ ಸ್ಯಾಮ್ಸನ್ ಬಳಿಕ ಆಡಿದ ಕೊನೇ 3 ಪಂದ್ಯಗಳಲ್ಲೂ ಅಮೋಘ ನಿರ್ವಹಣೆ ತೋರುವ ಮೂಲಕ ಭಾರತದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು. ಭಾರತ ಗೆಲ್ಲಲೇಬೇಕಾಗಿದ್ದ ಸೂಪರ್-8 ಹಂತದ ಕೊನೇ ಪಂದ್ಯದಲ್ಲಿ ವಿಂಡೀಸ್ ಎದುರು ಅಜೇಯ 97 ರನ್ ಸಿಡಿಸಿದ್ದ ಸ್ಯಾಮ್ಸನ್ ಬಳಿಕ ಸೆಮೀಸ್ ಮತ್ತು ಫೈನಲ್ನಲ್ಲಿ ಕ್ರಮವಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಎದುರು ತಲಾ 89 ರನ್ ಸಿಡಿಸಿ ಗೆಲುವಿಗೆ ನೆರವಾಗಿದ್ದರು.
ಮಾರ್ಚ್ನಲ್ಲಿ ಆಡಿದ 3 ಪಂದ್ಯಗಳಲ್ಲಿ ಅವರು 137.50ರ ಸರಾಸರಿ ಮತ್ತು 199.27ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 275 ರನ್ ಬಾರಿಸಿದ್ದರು. ಅವರು ಪ್ರಶಸ್ತಿ ರೇಸ್ನಲ್ಲಿ ಭಾರತದವರೇ ಆದ ಜಸ್ಪ್ರೀತ್ ಬುಮ್ರಾ ಮತ್ತು ದಣ ಆಫ್ರಿಕಾದ ಕಾನರ್ ಈಸ್ಟರ್ಹುಯಿಜೆನ್ರನ್ನು ಹಿಂದಿಕ್ಕಿದ್ದಾರೆ. ಮಹಿಳಾ ವಿಭಾಗದಲ್ಲಿ ನ್ಯೂಜಿಲೆಂಡ್ ನಾಯಕಿ ಅಮೆಲಿಯಾ ಕೆರ್ ಮಾರ್ಚ್ ತಿಂಗಳ ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅವರು ಮೂರನೇ ಬಾರಿಗೆ ಐಸಿಸಿಯ ಮಾಸಿಕ ಪ್ರಶಸ್ತಿ ಜಯಿಸಿದ್ದಾರೆ.