ಗಂಭೀರ್ ತೆಗೆದುಕೊಂಡ ಈ ನಿರ್ಧಾರವೇ ಟೀಮ್ ಇಂಡಿಯಾ ಸೋಲಿಗೆ ಕಾರಣ! Gautam Gambhir
- ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ
- ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡ ಭಾರತ
- ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾದ ಟೀಮ್ ಇಂಡಿಯಾ
Gautam Gambhir : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಮೆಗಾ ಟೂರ್ನಮೆಂಟ್‌ನ ಭಾಗವಾಗಿ ನಿನ್ನೆ (ಫೆ.22) ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಭಾರತ 74 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಯಿತು.
188 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ವಿಫಲವಾಯಿತು. ತಂಡದ ಆಡಳಿತ ಮಂಡಳಿ ಮಾಡಿದ ಕೆಲವು ತಪ್ಪುಗಳು ಮೆನ್ ಇನ್ ಬ್ಲೂ ತಂಡದ ಸೋಲಿಗೆ ಮುಖ್ಯ ಕಾರಣವಾಯಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಉಪನಾಯಕ ಅಕ್ಷರ್ ಪಟೇಲ್ ಬದಲಿಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸುವ ಮೂಲಕ ಭಾರತೀಯ ಆಡಳಿತ ಮಂಡಳಿಯು ದೊಡ್ಡ ತಪ್ಪು ಮಾಡಿತು.
ಗಂಭೀರ್ ಆಘಾತಕಾರಿ ನಿರ್ಧಾರ
ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಅಕ್ಷರ್‌ಗೆ ನೆದರ್ಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿತ್ತು. ಅವರ ಸ್ಥಾನದಲ್ಲಿ ಸುಂದರ್ ಅವರನ್ನು ಅಂತಿಮ ತಂಡದಲ್ಲಿ ಆಡಿಸಲಾಯಿತು. ಆದಾಗ್ಯೂ, ಹರಿಣಗಳ ವಿರುದ್ಧದ ಸೂಪರ್-8 ಪಂದ್ಯಕ್ಕೆ ಅಕ್ಷರ್ ಮತ್ತೆ ಲಭ್ಯವಾಗುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, ಮುಖ್ಯ ಕೋಚ್ ಗೌತಮ್ ಗಂಭೀರ್, ಅಕ್ಷರ್ ಅವರನ್ನು ಬೆಂಚ್‌ಗೆ ಸೀಮಿತಗೊಳಿಸುವ ಮೂಲಕ ಆಘಾತಕಾರಿ ನಿರ್ಧಾರ ತೆಗೆದುಕೊಂಡರು.
ಟಾಸ್ ವೇಳೆ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಇದು ಕೇವಲ ಯುದ್ಧತಂತ್ರದ ನಿರ್ಧಾರ ಎಂದು ಹೇಳಿದರು. ದಕ್ಷಿಣ ಆಫ್ರಿಕಾದ ಟಾಪ್ - 5 ರಲ್ಲಿ ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳಿರುವುದರಿಂದ, ಎಡಗೈ ಸ್ಪಿನ್ನರ್ ಅಕ್ಷರ್ಗಿಂತ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ತಂಡದಲ್ಲಿರುವುದು ಉತ್ತಮ ಎಂದು ಮ್ಯಾನೇಜ್‌ಮೆಂಟ್ ಭಾವಿಸಿದೆ ಎಂದರು.
ಮಾಡಿದ್ದು ಎರಡೇ ಓವರ್
ಆದರೆ, ಟೀಮ್ ಇಂಡಿಯಾದ ಈ ತಂತ್ರವು ಅವರಿಗೆ ಉಲ್ಟಾ ಹೊಡೆಯಿತು. ಪವರ್‌ಪ್ಲೇನಲ್ಲಿ ಸುಂದರ್ ಒಂದೇ ಒಂದು ಓವರ್ ಎಸೆಯಲಿಲ್ಲ. ನಾಯಕ ಏಳನೇ ಓವರ್‌ನಲ್ಲಿ ಸುಂದರ್ ಅವರನ್ನು ಬೌಲಿಂಗ್ ದಾಳಿಗೆ ಇಳಿಸಿದರು. ಆದರೂ, ಸುಂದರ್ ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಲಿಲ್ಲ. ಎರಡು ಓವರ್ ಬೌಲ್ ಮಾಡಿ 17 ರನ್‌ಗಳನ್ನು ಬಿಟ್ಟುಕೊಟ್ಟರು.
ಇನ್ನು ಸುಂದರ್ ಅವರು ಬ್ಯಾಟಿಂಗ್ನಲ್ಲಿಯೂ ವಿಫಲರಾದರು. 11 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಇದಕ್ಕಾಗಿ ನೆಟ್ಟಿಗರು ಗಂಭೀರ್ ವಿರುದ್ಧ ಹರಿಹಾಯ್ದಿದ್ದಾರೆ. "ಕೇವಲ 'ಮ್ಯಾಚ್-ಅಪ್' ಗಳಿಗಾಗಿ ಫಾರ್ಮ್ನಲ್ಲಿರುವ ಆಟಗಾರನನ್ನು ಕೈಬಿಡುವುದು ಎಷ್ಟು ಸಮಂಜಸ ಎಂದು ಗಂಭೀರ್ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸೂಪರ್ 8 ಹಂತದ ಗಾಂಭಿರ್ಯತೆಯನ್ನೇ ಗಂಭೀರ್ ಮರೆತಂತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ, (ಏಜೆನ್ಸೀಸ್).