ಸೂರ್ಯವಂಶಿ ಬ್ಯಾಟಿಂಗ್ ವೈಭವ, ಗೇಲ್ ಸಿಕ್ಸರ್ ದಾಖಲೆ ಪತನ; ಎರಡನೇ ಕ್ವಾಲಿಫೈಯರ್‌ಗೆ ರಾಜಸ್ಥಾನ 
ಕ್ರಿಕೆಟ್

ಸೂರ್ಯವಂಶಿ ಬ್ಯಾಟಿಂಗ್ ವೈಭವ, ಗೇಲ್ ಸಿಕ್ಸರ್ ದಾಖಲೆ ಪತನ; ಎರಡನೇ ಕ್ವಾಲಿಫೈಯರ್‌ಗೆ ರಾಜಸ್ಥಾನ

ಮುಲ್ಲನ್‌ಪುರ: ಐಪಿಎಲ್‌ನಲ್ಲಿ ಅತಿ ವೇಗದ ಶತಕ ಸಾಧಕ ಎನಿಸುವ ಅವಕಾಶವನ್ನು ಕೂದಲೆಳೆಯಿಂದ ತಪ್ಪಿಸಿಕೊಂಡ 15 ವರ್ಷದ ವೈಭವ್ ಸೂರ್ಯವಂಶಿ (97 ರನ್, 29 ಎಸೆತ, 5 ಬೌಂಡರಿ, 12 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರನ್‌ಪ್ರವಾಹ ಹರಿಸಿದ ರಾಜಸ್ಥಾನ ರಾಯಲ್ಸ್ ತಂಡ 19ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ಎದುರು 47 ರನ್‌ಗಳ ಗೆಲುವು ದಾಖಲಿಸಿತು.ಇದರೊಂದಿಗೆ ರಿಯಾನ್ ಪರಾಗ್ ಬಳಗ ಶುಕ್ರವಾರ ನಡೆಯಲಿರುವ ‘ಸೆಮಿಫೈನಲ್’ ಮಾದರಿಯ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದ್ದು, ಪ್ರಶಸ್ತಿ ಸುತ್ತಿಗೇರಲು ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ಪ್ಯಾಟ್ ಕಮ್ಮಿನ್ಸ್ ಪಡೆ 4ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ.
ಬುಧವಾರ ಎಂವೈಎಸ್ ಕ್ರೀಡಾಂಗಣದಲ್ಲಿ ನಡೆದ ‘ಕ್ವಾರ್ಟರ್​ಫೈನಲ್’ ಮಾದರಿಯ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ರಾಜಸ್ಥಾನ, ವೈಭವ್ ಸಿಕ್ಸರ್‌ಗಳ ಆರ್ಭಟ ಮತ್ತು ಧ್ರುವ ಜುರೆಲ್ (50 ರನ್, 21 ಎಸೆತ, 5 ಬೌಂಡರಿ, 3 ಸಿಕ್ಸರ್) ಬಿರುಸಿನ ಅರ್ಧಶತಕದ ಬಲದಿಂದ 11 ಓವರ್‌ಗಳಲ್ಲಿ 150 ರನ್ ಸೇರಿಸಿ 300ರ ಸನಿಹದ ನಿರೀಕ್ಷೆ ಮೂಡಿಸಿತು. ಸ್ಲಾಗ್ ಓವರ್‌ಗಳಲ್ಲಿ ನಿರಂತರ ವಿಕೆಟ್ ಕಳೆದುಕೊಂಡ ನಡುವೆಯೂ ರಾಜಸ್ಥಾನ 8 ವಿಕೆಟ್‌ಗೆ 243 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿತು.
ಐಪಿಎಲ್ ಪ್ಲೇಆಫ್​ ಹಂತದಲ್ಲಿ ತಂಡವೊಂದರ ಎರಡನೇ ಗರಿಷ್ಠ ಮೊತ್ತ ಇದಾಗಿದೆ. ಪ್ರತಿಯಾಗಿ ಅಗ್ರಕ್ರಮಾಂಕ ಬ್ಯಾಟರ್‌ಗಳ ವೈಫಲ್ಯದಿಂದ ಸನ್‌ರೈಸರ್ಸ್‌ ಹೈದರಾಬಾದ್ 83 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಚೇಸಿಂಗ್‌ನಲ್ಲಿ ಪ್ರಶಸ್ತಿ ಆಸೆಯೂ ಕೈಚೆಲ್ಲಿತು. ಅಂತಿಮವಾಗಿ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಗಿ ಸೋಲಿಗೆ ಶರಣಾಯಿತು.
ಗೇಲ್ ಸಿಕ್ಸರ್ ದಾಖಲೆ ಮುರಿದ ವೈಭವ್
‘ಯೂನಿವರ್ಸಲ್ ಬಾಸ್’ ಖ್ಯಾತಿಯ ವಿಂಡೀಸ್‌ನ ಕ್ರಿಸ್ ಗೇಲ್ ಅವರ 14 ವರ್ಷಗಳ ಹಿಂದಿನ ದಾಖಲೆಯನ್ನು ‘ಬೇಬಿ ಬಾಸ್’ ಎನಿಸಿಕೊಂಡಿರುವ ವೈಭವ್ ಸೂರ್ಯವಂಶಿ ಪುಡಿಗಟ್ಟಿದರು. 2026ರ ಆವೃತ್ತಿಯಲ್ಲಿ ಇದುವರೆಗೆ 65 ಸಿಕ್ಸರ್ ಸಿಡಿಸಿರುವ 15 ವರ್ಷದ ವೈಭವ್, 2014ರಲ್ಲಿ 59 ಸಿಕ್ಸರ್ ಸಿಡಿಸಿದ್ದ ಗೇಲ್ ದಾಖಲೆ ಮುರಿಯುವ ಮೂಲಕ ಆವೃತ್ತಿಯೊಂದರಲ್ಲಿ ಸರ್ವಾಧಿಕ ಸಿಕ್ಸರ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟಿ20 ಟೂರ್ನಿಯೊಂದರಲ್ಲಿ ಗರಿಷ್ಠ ಸಿಕ್ಸರ್‌ಗಳ ಸಂಖ್ಯೆಯೂ ಇದಾಗಿದೆ. ಗೇಲ್ 456 ಎಸೆತಗಳಲ್ಲಿ ನಿರ್ಮಿಸಿದ ದಾಖಲೆಯನ್ನು ವೈಭವ್ 266 ಎಸೆತಗಳಲ್ಲಿ ಹಿಂದಿಕ್ಕಿದರು. ಜತೆಗೆ ಅತಿ ಹೆಚ್ಚು ಇನಿಂಗ್ಸ್‌ಗಳಲ್ಲಿ (4) 10ಕ್ಕಿಂತ ಹೆಚ್ಚು ಸಿಕ್ಸರ್ ಗಳಿಸಿದ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದ ವೈಭವ್, ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಕ್ರಿಸ್ ಗೇಲ್ (30 ಎಸೆತ) ದಾಖಲೆ ಮುರಿಯುವ ಅವಕಾಶವನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡರು.