ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಕಾಂಗ್ರೆಸ್ ಸಂಸದ ಶಶಿ ತರೂರ್
- ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ ಕಾಂಗ್ರೆಸ್ ಸಂಸದ
- 'ಬೇಬಿ ಬಾಸ್' ಶತಕದಾಟಕ್ಕೆ ಶಶಿ ತರೂರ್ ಫಿದಾ
- ಬಿಸಿಸಿಐ ಆಯ್ಕೆಗಾರರು ಇನ್ನೂ ಕಾಯುತ್ತಿರುವುದು ಏಕೆಂದು ಪ್ರಶ್ನೆ
ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಮತ್ತೊಂದು ಸ್ಫೋಟಕ ಶತಕ ಸಿಡಿಸಿದ ಬಿಹಾರ ತಂಡದ ಸ್ಟಾರ್ ಬ್ಯಾಟರ್ ವೈಭವ್ ಸೂರ್ಯವಂಶಿ, ಕೇವಲ 36 ಎಸೆತಗಳಲ್ಲಿ ಸೆಂಚುರಿ ಗಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಎರಡನೇ ಬಾರಿ ವೇಗದ ಶತಕ ಗಳಿಸಿದ ಮೊದಲ ಕ್ರಿಕೆಟಿಗನೆಂಬ ದಾಖಲೆ ಬರೆದರು. ಅರುಣಾಚಲ ಪ್ರದೇಶ ಮತ್ತು ಬಿಹಾರ ನಡುವಿನ ಪಂದ್ಯದಲ್ಲಿ ವೈಭವ್ ಈ ವಿಶೇಷ ಸಾಧನೆಗೈದರು. ಇದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಗಮನ ಸೆಳೆದಿರುವುದು ವಿಶೇಷ.
ತಮ್ಮ ವಿಜಯ್ ಹಜಾರೆ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ 84 ಎಸೆತಗಳಲ್ಲಿ 190 ರನ್ ಗಳಿಸುವ ಮೂಲಕ ಕ್ರಿಕೆಟ್ ಜಗತ್ತನ್ನು ವೈಭವ್ ಅಚ್ಚರಿಗೊಳಿಸಿದ್ದಾರೆ. ಅಂಡರ್ -19 ಏಷ್ಯಾಕಪ್ ಫೈನಲ್‌ನಲ್ಲಿ ವೈಫಲ್ಯದ ಕೆಲವೇ ದಿನಗಳ ಬಳಿಕ ಆಡಿದ ಈ ಇನ್ನಿಂಗ್ಸ್, ಸೂರ್ಯವಂಶಿಯನ್ನು ಶೀಘ್ರದಲ್ಲೇ ಹಿರಿಯ ಭಾರತೀಯ ತಂಡಕ್ಕೆ ಸೇರಿಸಬೇಕೇ ಅಥವಾ ಬೇಡವೇ ಎಂಬ ಬಿರುಸಿನ ಚರ್ಚೆಗೆ ಕಾರಣವಾಗಿದೆ.
ಅಂದು ಸಚಿನ್, ಇಂದು ವೈಭವ್
ದೇಶೀಯ ಕ್ರಿಕೆಟ್‌ನಲ್ಲಿ ಅದರಲ್ಲೂ, ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ಪ್ರಾಬಲ್ಯ ಸಾಧಿಸಿರುವುದು ಅಪರೂಪ. ಕೇವಲ ಶತಕ ಗಳಿಸಿದ್ದು ಮಾತ್ರವಲ್ಲದೇ, ಪುರುಷರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವೇಗವಾಗಿ 150 ರನ್ ಸಿಡಿಸಿದ ದಾಖಲೆಯನ್ನೂ ವೈಭವ್ ಹೊಂದಿದ್ದಾರೆ. 84 ಎಸೆತಗಳಲ್ಲಿ 190 ರನ್‌ಗೆ ಔಟಾದ ಸೂರ್ಯವಂಶಿ, 16 ಬೌಂಡರಿ ಮತ್ತು 15 ಸಿಕ್ಸರ್‌ಗಳನ್ನು ಬಾರಿಸಿದರು.
ಬಿಸಿಸಿಗೆ ಶಶಿ ತರೂರ್ ಕಿವಿಮಾತು
'ಬೇಬಿ ಬಾಸ್' ಸ್ಪೋಟಕ ಇನ್ನಿಂಗ್ಸ್ಗೆ ಫಿದಾ ಆದ ಕಾಂಗ್ರೆಸ್ ಸಂಸದ ಶಶಿ ತರೂರ್, ವೈಭವ್ ಅವರ ಐತಿಹಾಸಿಕ ದಾಖಲೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅವರು, ವೈಭವ್ ಸೂರ್ಯವಂಶಿಯನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿದ್ದಾರೆ. ಈ ಹಿಂದೆ 14 ವರ್ಷದ ಬಾಲಕ ಇಂತಹ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿದ್ದು ಸಚಿನ್ ತೆಂಡೂಲ್ಕರ್ ಮಾತ್ರ. ಇದೀಗ ಅವರಂತೆಯೇ ಆಡಿರುವುದು ವೈಭವ್. ಬಿಸಿಸಿಐ ಆಯ್ಕೆಗಾರರು ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಶತಕ ಗಳಿಸಿದರೂ ನಿಲ್ಲದ ಟೀಕೆ
ಇತ್ತೀಚೆಗೆ ಮುಕ್ತಾಯವಾದ ಅಂಡರ್-19 ಏಷ್ಯಾ ಕಪ್ ಟೂರ್ನಮೆಂಟ್ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋಲುಂಡಿತು. ಬಹುನಿರೀಕ್ಷಿತ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಕೈಕೊಟ್ಟರು. ಸಣ್ಣ ತಂಡಗಳ ವಿರುದ್ಧ ಶತಕ ಗಳಿಸುವ ವೈಭವ್, ನಿರ್ಣಾಯಕ ಪಾಕಿಸ್ತಾನ ಪಂದ್ಯದಲ್ಲಿ ದಯನೀಯವಾಗಿ ವಿಫಲವಾದರು. ಹೀಗಾಗಿ ಅನೇಕ ನೆಟ್ಟಿಗರು ವೈಭವ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಈ ವಿಜಯ್ ಹಜಾರೆ ಟೂರ್ನಮೆಂಟ್ನಲ್ಲಿ ಶತಕ ಬಾರಿಸಿದರೆ ಏನು ಪ್ರಯೋಜನಾ? ಪಾಕ್ ವಿರುದ್ಧ ಆಡಿದ್ದರೆ ನಿಮ್ಮನ್ನು ಮೆಚ್ಚಿಕೊಳ್ಳುತ್ತಿದ್ದೆವು ಎಂದು ಕಮೆಂಟ್ ಮಾಡುತ್ತಿದ್ದಾರೆ,(ಏಜೆನ್ಸೀಸ್).