ನವದೆಹಲಿ: ಭಾರತಕ್ಕೆ 2ನೇ ಬಾರಿಗೆ ತವರು ನೆಲದಲ್ಲೇ ಟಿ20 ವಿಶ್ವಕಪ್ ಗೆದ್ದುಕೊಟ್ಟ ಹೊರತಾಗಿಯೂ ನಾಯಕತ್ವದಿಂದ ಕೈಬಿಡಲ್ಪಟ್ಟಿದ್ದ ಸೂರ್ಯಕುಮಾರ್ ಯಾದವ್ (
Suryakumar Yadav
), ಆಯ್ಕೆಗಾರರ ಈ ನಿರ್ಧಾರ ತನಗೆ ಶಾಕ್ ನೀಡಿತ್ತು ಮತ್ತು ತೀವ್ರ ಬೇಸರ ತಂದಿತ್ತು ಎಂದು ಹೇಳಿಕೊಂಡಿದ್ದಾರೆ.
ಟಿ20 ನಾಯಕತ್ವ ಕಳೆದುಕೊಂಡ 2 ತಿಂಗಳ ಬಳಿಕ ಈ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ಸೂರ್ಯಕುಮಾರ್, "2 ವರ್ಷಗಳ ಕಾಲ ಯಾವುದೇ ಸರಣಿಯಲ್ಲಿ ಸೋಲದೆ ತಂಡವನ್ನು ಮುನ್ನಡೆಸುತ್ತಿದ್ದೆ. ಹೀಗಾಗಿ ನಾಯಕನಾಗಿ ಮುಂಬರುವ ಟಿ20 ವಿಶ್ವಕಪ್, ಒಲಿಂಪಿಕ್ಸ್ ಸೇರಿದಂತೆ 2 ವರ್ಷಗಳ ಸವಾಲಿಗೆ ನಾನು ಸಿದ್ಧತೆ ನಡೆಸುತ್ತಿದ್ದೆ. ಹೀಗಾಗಿ ನಾಯಕತ್ವ ಕೈತಪ್ಪಿದ್ದು ನಿರಾಸೆ ಮೂಡಿಸಿತ್ತು. ಭಾರತ ತಂಡದಿಂದ ಹೊರಬಿದ್ದ ಬಳಿಕ ನಾನು 40-50 ದಿನಗಳ ಕಾಲ ಮನೆಯಲ್ಲಿ ಸುಮ್ಮನೆ ಕುಳಿತಿದ್ದೆ ಮತ್ತು ಸಂಪೂರ್ಣ ಆಘಾತದಲ್ಲಿದ್ದೆ. ನಾನಿನ್ನು ಏನು ಮಾಡಬೇಕು ಎಂಬ ಬಗ್ಗೆ ಯೋಚಿಸುತ್ತಿದ್ದೆ. ನಾನಿನ್ನು ಮತ್ತೆ ಆಡಬೇಕೇ, ಬೇಡವೇ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದೆ. ಆಗ ಪತ್ನಿ ನನ್ನ ಬಳಿ ಬಂದು, 20 ವರ್ಷಗಳ ಹಿಂದೆ ಕೇವಲ ಕ್ರಿಕೆಟ್ ಮೇಲಿನ ಪ್ರೀತಿಯಿಂದ ಆಡಲು ಆರಂಭಿಸಿದ್ದನ್ನು ನೆನಪಿಸಿದಳು. ಇದೀಗ ಅದೇ ಉತ್ಸಾಹದಲ್ಲಿ ಮತ್ತೆ ಆಡಲು ನಿರ್ಧರಿಸಿದ್ದೇನೆ' ಎಂದಿದ್ದಾರೆ.