ಸೂರ್ಯಕುಮಾರ್ ಯಾದವ್(ಎಡ), ಗೌತಮ್ ಗಂಭೀರ್(ಬಲ)
- 3ನೇ ಬಾರಿ ಟಿ20 ವಿಶ್ವಕಪ್ ಗೆದ್ದ ಭಾರತ
- ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಸೂರ್ಯಕುಮಾರ್ ಯಾದವ್
- ವಿಶ್ವಕಪ್ ಗೆದ್ದ ಬೆನ್ನಲ್ಲೇ ಹಲವು ವಿಷಯಗಳನ್ನು ಹಂಚಿಕೊಂಡ ಟೀಮ್ ಇಂಡಿಯಾ ನಾಯಕ
ಅಹಮದಾಬಾದ್: ಮಾ.08ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಸಾಕ್ಷಿಯಾದ ಟೀಮ್ ಇಂಡಿಯಾ ಗೆಲುವು, ನ್ಯೂಜಿಲೆಂಡ್ ತಂಡದ ಚೊಚ್ಚಲ ಟಿ20 ವಿಶ್ವಕಪ್ ಕನಸನ್ನು ಭಗ್ನಗೊಳಿಸಿತು. 96 ರನ್‌ಗಳ ಭಾರೀ ಅಂತರದಿಂದ ಕಿವೀಸ್ ಪಡೆಯನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಸೂರ್ಯಕುಮಾರ್ ಯಾದವ್ ಪಡೆಗೆ ಸದ್ಯ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಆಡಿರುವ ಮಾತುಗಳು ಜಾಲತಾಣಗಳಲ್ಲಿ ಹಲವರ ಗಮನ ಸೆಳೆಯುತ್ತಿವೆ.
2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಹೆಡ್ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮ ಅವರ ಕಾಂಬೊ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಿತೋ, ಅದೇ ರೀತಿ 2026ರ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಗೌತಮ್ ಗಂಭೀರ್ ಆ ನಂಬಿಕೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದಂತಿದೆ.
ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ತಮ್ಮ ಹೆಡ್ಕೋಚ್ ಗೌತಮ್ ಗಂಭೀರ್ ಕುರಿತು ಸೂರ್ಯಕುಮಾರ್ ಹಲವು ವಿಷಯಗಳನ್ನು ಹಂಚಿಕೊಂಡರು. ನಾಲ್ಕು ವರ್ಷಗಳಿಂದ ಗೌತಿ ಭಾಯ್ ಜೊತೆಗೆ ಕ್ರಿಕೆಟ್ ಆಡಿದ್ದೇನೆ. ಅವರು ಹೇಗೆ ಯೋಚಿಸುತ್ತಾರೆ ಅಂತ ನನಗೆ ಗೊತ್ತಿದೆ. ಅವರು ಎರಡೆಜ್ಜೆ ಇಟ್ಟರೆ, ನಾನು ಒಂದೆರೆಡು ಹೆಜ್ಜೆ ಇಡ್ತೇನೆ. ಆಗ ನಾವಿಬ್ಬರು ಒಂದು ಪಾಯಿಂಟ್ಗೆ ಬಂದು ತಲುಪುತ್ತೇವೆ. ನನಗೆ ನೆನಪಿರುವಂತೆ, ನಾವಿಬ್ಬರೂ ಯಾವ ವಿಚಾರಕ್ಕೂ ಜಗಳವಾಡಿಲ್ಲ. ಪ್ರಾಯಶಃ, ಅದೇ ನಮ್ಮಿಬ್ಬರ ಪಾರ್ಟ್ನರ್ಶಿಪ್ ಅನ್ನು ಗಟ್ಟಿಯಾಗಿಸಿದೆ ಅನಿಸುತ್ತದೆ ಎಂದರು.
ಶ್ರೀಲಂಕಾ ಸರಣಿಯಿಂದ ನಾವಿಬ್ಬರು ಒಟ್ಟಿಗೆ ಕೆಲಸ ಮಾಡಲು ಶುರು ಮಾಡಿದೆವು. ಅಂದಿನಿಂದಲೂ ಯಾವ ಆಟಗಾರನ ವಿಚಾರಕ್ಕೂ ನಾವಿಬ್ಬರೂ ಕಿತ್ತಾಡಿಕೊಂಡಿಲ್ಲ. ಯಾವುದೇ ಮನಸ್ತಾಪ ಸಹ ಬಂದಿಲ್ಲ. ತಂಡವನ್ನು ಹೇಗೆ ಗೆಲ್ಲಿಸೋದು, ಯಾರನ್ನು ಆಡಿಸುವುದರಿಂದ ಹೆಚ್ಚು ಲಾಭವಿದೆ ಎಂಬುದನ್ನು ಲೆಕ್ಕಾಚಾರ ಮಾಡ್ತಿದ್ವಿ. ಡ್ರೆಸ್ಸಿಂಗ್ ರೂಮ್ನಲ್ಲಿ ಮಾತನಾಡುವ ಹಕ್ಕು ಬಹಳ ಮುಖ್ಯ. ನೀವು ಎಲ್ಲರ ಮಾತನ್ನು ಆಲಿಸಲಿಲ್ಲ ಎಂದರೆ, ಖಂಡಿತ ಎಲ್ಲರನ್ನು ಹಾಕಿಕೊಂಡು ಒಂದು ಟ್ರೋಫಿಯನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ ಎಂದರು.
ಪ್ರಾಮಾಣಿಕತೆ ಬಗ್ಗೆ ಸೂರ್ಯ ಮಾತು
ಕೊನೆಯದಾಗಿ ಪ್ರಮಾಣಿಕತೆ ಬಗ್ಗೆ ಮಾತನಾಡಿದ ಸೂರ್ಯಕುಮಾರ್, ಇದೇ ನಿರಂತರ ಯಶಸ್ಸಿನ ಮೂಲ. ನೀವು ಕ್ರೀಡೆಯಲ್ಲಿ ಯಶಸ್ವಿಯಾಗುವುದಕ್ಕಿಂತ ಹೆಚ್ಚು ಬಾರಿ ವಿಫಲರಾಗುತ್ತೀರಿ. ಆದರೆ, ನಿಮಗೆ ನೀವು ಸತ್ಯವಾಗಿದ್ದರೆ ಅದೇ ದೊಡ್ಡ ಗೆಲುವು. ನಾವು ಯಾರಿಗೆ ಬೇಕಾದರೂ ಸುಳ್ಳು ಹೇಳಬಹುದು. ಆದರೆ, ಕನ್ನಡಿಯಲ್ಲಿರುವ ವ್ಯಕ್ತಿಗೆ ಖಂಡಿತ ಮೋಸ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು,(ಏಜೆನ್ಸೀಸ್).