ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್
- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು
- ಹರಿಣಗಳ ಪಡೆ ಎದುರು 51 ರನ್‌ಗಳ ಅಂತರದಿಂದ ಸೋಲಿಗೆ ಶರಣಾದ ಟೀಮ್ ಇಂಡಿಯಾ
- ಭಾರತದ ಸೋಲಿಗೆ ಅಚ್ಚರಿಯ ಕಾರಣ ಬಿಚ್ಚಿಟ್ಟ ಹರಿಣ ಪಡೆಯ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್
Quinton de Kock : ನ್ಯೂ ಚಂಡೀಗಢದ ಮುಲ್ಲನ್ಪುರದಲ್ಲಿ ನಿನ್ನೆ (ಡಿ.11) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 51 ರನ್‌ಗಳಿಂದ ಹೀನಾಯವಾಗಿ ಸೋಲುಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಎಡವಿದ್ದು ಎಲ್ಲಿ? ಪಿಚ್ ಹೇಗೆ ಪ್ರತಿಕ್ರಿಯಿಸಿತು? ಎಂಬುದರ ಬಗ್ಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ಹೇಳಿದರು.
ಪಂದ್ಯದ ಬಳಿಕ ಮಾತನಾಡಿದ ಡಿ ಕಾಕ್, ಎರಡೂ ಇನ್ನಿಂಗ್ಸ್‌ಗಳಲ್ಲಿ ಪಿಚ್ ಸಂಪೂರ್ಣವಾಗಿ ಬದಲಾಗಿದೆ ಎಂದರು. ನಾವು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಚೆಂಡು ನಿಧಾನವಾಗಿ ಬರುತ್ತಿತ್ತು ಮತ್ತು ಕಡಿಮೆ ಸೀಮ್ ಇತ್ತು. ಆದರೆ, ಭಾರತ ಬ್ಯಾಟಿಂಗ್ ಮಾಡುವಾಗ, ಪಿಚ್ ಸಂಪೂರ್ಣವಾಗಿ ಬದಲಾಯಿತು. ಪಿಚ್‌ನಲ್ಲಿ ವೇಗ ಹೆಚ್ಚಾಯಿತು ಮತ್ತು ಸೀಮ್ ಕೂಡ ತುಂಬಾ ಹೆಚ್ಚಿತ್ತು ಎಂದು ಡಿ ಕಾಕ್ ಹೇಳಿದರು.
ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಕಾರ್ಯತಂತ್ರದ ತಪ್ಪು ಎಂದು ಡಿ ಕಾಕ್ ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ಪಂದ್ಯ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 213 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ (90 ರನ್, 46 ಎಸೆತ, 5 ಬೌಂಡರಿ, 7 ಸಿಕ್ಸರ್) ದಕ್ಷಿಣ ಆಫ್ರಿಕಾದ ಪರ ಅಬ್ಬರಿಸಿ ಬೊಬ್ಬಿರಿದರು. ಉಳಿದಂತೆ ಡೊನೊವನ್ ಫೆರೇರಾ (ಅಜೇಯ 30 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಮತ್ತು ಡೇವಿಡ್ ಮಿಲ್ಲರ್ (ಅಜೇಯ 20 ರನ್, 12 ಎಸೆತ, 2 ಬೌಂಡರಿ, 1 ಸಿಕ್ಸರ್) ಸ್ಫೋಟಕ ಆಟವಾಡಿದರು.
ಟೀಮ್ ಇಂಡಿಯಾ ಬೌಲರ್‌ಗಳಲ್ಲಿ ವರುಣ್ ಚಕ್ರವರ್ತಿ ಎರಡು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಅವರು ಒಂದು ವಿಕೆಟ್ ಪಡೆದರು.
214 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲೌಟ್ ಆಯಿತು. ತಿಲಕ್ ವರ್ಮಾ (62 ರನ್, 34 ಎಸೆತ, 2 ಬೌಂಡರಿ, 5 ಸಿಕ್ಸರ್) ಅರ್ಧಶತಕದೊಂದಿಗೆ ಟೀಮ್ ಇಂಡಿಯಾದ ಅತ್ಯಧಿಕ ರನ್ ಸ್ಕೋರರ್ ಎನಿಸಿಕೊಂಡರು. ಉಳಿದಂತೆ ಅಭಿಷೇಕ್ ಶರ್ಮ (17 ರನ್, 8 ಎಸೆತ, 2 ಸಿಕ್ಸರ್), ಜಿತೇಶ್ ಶರ್ಮ (27 ರನ್, 17 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಹಾರ್ದಿಕ್ ಪಾಂಡ್ಯ (20 ರನ್, 23 ಎಸೆತ, 1 ಸಿಕ್ಸರ್) ಎರಡಂಕಿ ಸ್ಕೋರ್ ಗಳಿಸಿದರು. ಶುಭಮಾನ್ ಗಿಲ್ ಶೂನ್ಯಕ್ಕೆ ಔಟಾದರೆ, ನಾಯಕ ಸೂರ್ಯಕುಮಾರ್ ಯಾದವ್ (5) ಮತ್ತು ಶಿವಂ ದುಬೆ (5) ಕಳಪೆ ಪ್ರದರ್ಶನ ನೀಡಿದರು.
ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಒಟ್ನೀಲ್ ಬಾರ್ಟ್‌ಮನ್ ನಾಲ್ಕು ವಿಕೆಟ್ ಪಡೆದರೆ, ಲುಥೋ ಸಿಪಾಮ್ಲಾ, ಮಾರ್ಕೊ ಜಾನ್ಸೆನ್ ಮತ್ತು ಲುಂಗಿ ಎಂಗಿಡಿ ತಲಾ ಎರಡು ವಿಕೆಟ್ ಪಡೆದರು, (ಏಜೆನ್ಸೀಸ್).