ಮೈಯೆಲ್ಲ ಬೆವರು ಹರಿದಿತ್ತು...ಪಾಕ್ ವಿರುದ್ಧದ ಪಂದ್ಯದ ಆ ರೋಚಕ ಕ್ಷಣವನ್ನು ಎಂದಿಗೂ ಮರೆಯಲ್ಲ ಎಂದ ಸೂರ್ಯಕುಮಾರ್! Suryakumar Yadav
- ತಂಡದ ಆಯ್ಕೆಯಲ್ಲಿ ನನ್ನ ಹೆಸರಿಲ್ಲದಿದ್ದರೂ ಮಂದಹಾಸದಿಂದ ಸ್ವೀಕರಿಸುತ್ತೇನೆ ಎಂದ ಸೂರ್ಯಕುಮಾರ್ ಯಾದವ್
- ಅಹಮದಾಬಾದ್ ಸ್ಟೇಡಿಯಂ ಬಗ್ಗೆ ಇದ್ದ ನೆಗೆಟಿವ್ ಭಾವನೆ ಬದಲಾಯಿಸಲು ದೃಢಸಂಕಲ್ಪ ಮಾಡಿದ್ದೆವು ಎಂದ ಸೂರ್ಯ
- ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪಡೆದ ಸಂಜು ಸ್ಯಾಮ್ಸನ್ ಆಟವನ್ನು ಮುಕ್ತಕಂಠದಿಂದ ಪ್ರಶಂಸಿದ ನಾಯಕ
- ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಪತನದ ಬಳಿಕ ಮೈಯೆಲ್ಲಾ ಬೆವರು ಹರಿದಿತ್ತು ಎಂದ ಸೂರ್ಯಕುಮಾರ್
ನವದೆಹಲಿ: ಕ್ರಿಕೆಟ್ ಮೈದಾನದಲ್ಲಿ ಎಂಥದ್ದೇ ಕಠಿಣ ಪರಿಸ್ಥಿತಿಯಲ್ಲೂ ತುಂಬಾ ಕೂಲ್ ಆಗಿ ಇರುತ್ತಿದ್ದ ಟೀಮ್ ಇಂಡಿಯಾದ ಟಿ20 ತಂಡದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ( Suryakumar Yadav ), ಪ್ರಸಿದ್ಧ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅವರ 'ಬೈತ್ & ಬೋಲ್' ಟಾಕ್ ಶೋನಲ್ಲಿ ತಮ್ಮ ವೃತ್ತಿಜೀವನ ಹಾಗೂ ನಾಯಕತ್ವದ ಪ್ರಯಾಣದ ಕುರಿತು ಹಲವು ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಂಡದ ಆಯ್ಕೆ, ಕಠಿಣ ನಿರ್ಧಾರಗಳು ಮತ್ತು ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯದ ಒತ್ತಡದ ಕ್ಷಣಗಳ ಬಗ್ಗೆ ಸೂರ್ಯಕುಮಾರ್ ಅವರು ಮುಕ್ತವಾಗಿ ಹಂಚಿಕೊಂಡಿದ್ದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.
ಮುಂದಿನ ಸರಣಿಗೂ ನಿಮ್ಮ ಹೆಸರು ಭಾರತ ತಂಡದಲ್ಲಿ ಇಲ್ಲದಿದ್ದರೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ಆಕಾಶ್ ಚೋಪ್ರಾ ಅವರು ಪ್ರಶ್ನಿಸಿದರು. ಇದಕ್ಕೆ ಕೂಲ್ ಆಗಿಯೇ ಉತ್ತರಿಸಿದ ಸೂರ್ಯಕುಮಾರ್, ಈ ಹಿಂದೆ ತಂಡದಲ್ಲಿ ನನ್ನ ಹೆಸರಿಲ್ಲದಿದ್ದಾಗಲೂ ನಾನು ಮಂದಹಾಸ ಬೀರಿದ್ದೆ. ಮುಂದೆಯೂ ಅದೇ ರೀತಿ ಇರುತ್ತೇನೆ. ತಂಡದ ಭವಿಷ್ಯಕ್ಕಾಗಿ ಆಯ್ಕೆ ಸಮಿತಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನೆಂದಿಗೂ ಗೌರವಿಸಿ ಸ್ವೀಕರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ತಮ್ಮ ನಾಯಕತ್ವದಲ್ಲಿ ನಡೆದ ಟಿ20 ವಿಶ್ವಕಪ್ ಬಗ್ಗೆ ಮಾತನಾಡಿದ ಸೂರ್ಯಕುಮಾರ್, 2023ರ ವಿಶ್ವಕಪ್ ಸೋಲಿನ ನಂತರ ಅಹಮದಾಬಾದ್ ಸ್ಟೇಡಿಯಂ ಬಗ್ಗೆ ಒಂದು ನೆಗೆಟಿವ್ ಭಾವನೆ ಮೂಡಿತ್ತು. ಅದನ್ನು ಈ ಬಾರಿ ಹೇಗಾದರೂ ಮಾಡಿ ಬದಲಾಯಿಸಬೇಕು ಎಂದು ನಾವು ದೃಢಸಂಕಲ್ಪ ಮಾಡಿದ್ದೆವು. ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಾಗ 'ನಾವು ಏನಾದರೂ ವಿಶೇಷ ಸಾಧನೆ ಮಾಡಲಿದ್ದೇವೆ' ಎಂಬ ನಂಬಿಕೆ ಬಂದಿತು ಎಂದು ಸೂರ್ಯಕುಮಾರ್ ಸ್ಮರಿಸಿಕೊಂಡರು.
ತಂಡದ ಆಯ್ಕೆಯಲ್ಲಿ ಅತ್ಯಂತ ಕಷ್ಟಕರವಾದ ನಿರ್ಧಾರದ ಕುರಿತು ಪ್ರಸ್ತಾಪಿಸಿದ ಸೂರ್ಯಕುಮಾರ್, ಪ್ರತಿಭಾವಂತ ಆಟಗಾರನೊಬ್ಬ ತಂಡದ ಕಾಂಬಿನೇಷನ್ ಕಾರಣದಿಂದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿರುವುದು ಬಹಳ ಬೇಸರ ತಂದಿತ್ತು ಎಂದು ಒಪ್ಪಿಕೊಂಡಿದ್ದಾರೆ. ಈ ವೇಳೆ ಸಂಜು ಸ್ಯಾಮ್ಸನ್ ಅವರ ಹೆಸರನ್ನು ಪ್ರಸ್ತಾಪಿಸಿದ ಸೂರ್ಯಕುಮಾರ್, ಟೂರ್ನಮೆಂಟ್‌ನ ಆರಂಭದಿಂದ ಫೈನಲ್ ವರೆಗೆ ಅತ್ಯುತ್ತಮ ಪ್ರದರ್ಶನ ನೀಡಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಪಡೆದ ಸಂಜು ಅವರ ಆಟವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಪಾಕಿಸ್ತಾನದ ವಿರುದ್ಧದ ಪಂದ್ಯದ ಒತ್ತಡದ ಬಗ್ಗೆ ಮಾತನಾಡಿದ ಸೂರ್ಯ, ಪಂದ್ಯದ ಆರಂಭದಲ್ಲಿ ತಮಗೆ ಯಾವುದೇ ಒತ್ತಡ ಕಾಡಲಿಲ್ಲ ಎಂದಿದ್ದಾರೆ. ಆದರೆ, 13ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪತನಗೊಂಡಾಗ ಪಂದ್ಯದ ಚಿತ್ರಣ ಸಂಪೂರ್ಣವಾಗಿ ಬದಲಾಯಿತು ಮತ್ತು ಆ ಸಂದರ್ಭದಲ್ಲಿ ತಮಗೆ ಮೈಯೆಲ್ಲಾ ಬೆವರು ಹರಿದಿತ್ತು ಎಂದು ರೋಚಕ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ 24 ಎಸೆತಗಳನ್ನು ಆರೆಂಜ್ಗೋಲ್ಡ್ಗೆ ಹೋಲಿಸಿರುವ ಸೂರ್ಯಕುಮಾರ್, ಕಷ್ಟದ ಸಮಯದಲ್ಲಿ ತಾವೇ ಮುಂದೆ ನಿಂತು ಜವಾಬ್ದಾರಿ ತೆಗೆದುಕೊಳ್ಳುವ ಬುಮ್ರಾ ಅವರ ಗುಣವನ್ನು ವಿಶೇಷವಾಗಿ ಕೊಂಡಾಡಿದ್ದಾರೆ, (ಏಜೆನ್ಸೀಸ್).