ಸ್ಟಾರ್​ ಬ್ಯಾಟ್ಸ್​ಮನ್​ ಸೂರ್ಯಕುಮಾರ್​ ಇಂಪ್ಯಾಕ್ಟ್​ ಪ್ಲೇಯರ್​ ಆಗಿದ್ದೇಕೆ? ಕೊನೆಗೂ ಮೌನ ಮುರಿದ ಜಯವರ್ಧನೆ! Suryakumar Yadav  
ಕ್ರಿಕೆಟ್

ಸ್ಟಾರ್​ ಬ್ಯಾಟ್ಸ್​ಮನ್​ ಸೂರ್ಯಕುಮಾರ್​ ಇಂಪ್ಯಾಕ್ಟ್​ ಪ್ಲೇಯರ್​ ಆಗಿದ್ದೇಕೆ? ಕೊನೆಗೂ ಮೌನ ಮುರಿದ ಜಯವರ್ಧನೆ! Suryakumar Yadav

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 28ರಿಂದ ಶುರುವಾಗಿರುವ ಮಹಾ ಕ್ರಿಕೆಟ್​ ಉತ್ಸವ ಇಂಡಿಯನ್​ ಪ್ರೀಮಿಯರ್​ ಲೀಗ್​
  • 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಶುಭಾರಂಭ ಕಂಡ ಮುಂಬೈ ಇಂಡಿಯನ್ಸ್ ತಂಡ
  • ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿದ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್
  • ಸಾಕಷ್ಟು ಪ್ರಶ್ನೆಗಳು ಕೇಳಿಬಂದ ಬೆನ್ನಲ್ಲೇ ಕೊನೆಗೂ ಮೌನ ಮುರಿದ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ
Suryakumar Yadav : ಮಾರ್ಚ್​ 28ರಿಂದ ಶುರುವಾಗಿರುವ ಮಹಾ ಕ್ರಿಕೆಟ್​ ಉತ್ಸವ ಇಂಡಿಯನ್​ ಪ್ರೀಮಿಯರ್​ ಲೀಗ್​ ( IPL ) ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಶುಭಾರಂಭ ಕಂಡಿದೆ. ಭಾನುವಾರ (ಮಾರ್ಚ್​ 29) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ತಂಡ 6 ವಿಕೆಟ್‌ಗಳಿಂದ ಜಯಗಳಿಸಿತು. ಆದಾಗ್ಯೂ, ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿಸಲಾಯಿತು. ತಂಡದ ಈ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಮುಂಬೈ ತಂಡದಲ್ಲಿ ಎಲ್ಲವೂ ಚೆನ್ನಾಗಿದೆಯೇ? ಯಾವುದಾದರೂ ಸಮಸ್ಯೆಗಳಿವೆಯೇ? ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಸಾಕಷ್ಟು ಪ್ರಶ್ನೆಗಳು ಕೇಳಿಬಂದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಮಹೇಲ ಜಯವರ್ಧನೆ, ಕೊನೆಗೂ ಮೌನ ಮುರಿದಿದ್ದಾರೆ. ಭಾರತ ತಂಡ 2026ರ ಟಿ20 ವಿಶ್ವಕಪ್ ಗೆಲ್ಲಲು ಸೂರ್ಯಕುಮಾರ್​ ತುಂಬಾ ಶ್ರಮಿಸಿದ್ದಾರೆ. ಹೀಗಾಗಿ, ಅವರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ. ಆ ಒಂದು ಉದ್ದೇಶದಿಂದ ಸೂರ್ಯ ಅವರನ್ನು ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಆಡಿಸಿದೆವು ಎಂದು ಜಯವರ್ಧನೆ ಹೇಳಿದ್ದಾರೆ.
ಸೂರ್ಯಕುಮಾರ್​ ವಿಚಾರದಲ್ಲಿ ನೀವು ಅನಗತ್ಯ ಕತೆಗಳನ್ನು ಸೃಷ್ಟಿಸಬೇಡಿ. ನಮ್ಮ ಶಿಬಿರವು ತುಂಬಾ ಸಂತೋಷವಾಗಿದೆ ಮತ್ತು ಎಲ್ಲರೂ ಖುಷಿಯಾಗಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲಗಳು ಇಲ್ಲ. ಸೂರ್ಯಕುಮಾರ್​ ಅವರು ನನ್ನನ್ನು ಭೇಟಿಯಾಗಿ, ಎರಡು ದಿನಗಳ ವಿಶ್ರಾಂತಿಯನ್ನು ಕೇಳಿದರು. ಅವರು ತೊಡೆಸಂದು ನೋವಿನಿಂದ ಬಳಲುತ್ತಿದ್ದಾರೆ. ಮುಂದಿನ ಪಂದ್ಯಕ್ಕೆ 5 ದಿನಗಳು ಬಾಕಿ ಇರುವುದರಿಂದ ಅವರಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕೆಂದು ನಾವು ಭಾವಿಸಿದ್ದೇವೆ ಎಂದು ಜಯವರ್ಧನೆ ಹೇಳಿದರು.
ಇದು ಕೇವಲ ಬದಲಾವಣೆಯಷ್ಟೇ. ಈ ವಿಚಾರವಾಗಿ ದಯವಿಟ್ಟು ಯಾವುದೇ ಕಥೆಗಳನ್ನು ಕಟ್ಟಬೇಡಿ. ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಸೂರ್ಯ ಬಹಳ ಮುಖ್ಯವಾದ ಆಟಗಾರ. ಅವರು ಇಡೀ ಋತುವಿನಲ್ಲಿ ತಂಡದಲ್ಲಿರುವುದು ಬಹಳ ಮುಖ್ಯ. ನಾನು ಮತ್ತು ಮಾಲೀಕರು ಬಹಳ ಎಚ್ಚರಿಕೆಯಿಂದ ಯೋಚಿಸಿದ ನಂತರ ಇಂಪ್ಯಾಕ್ಟ್​ ಪ್ಲೇಯರ್​ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಜಯವರ್ಧನೆ ಹೇಳಿದರು.
ಇನ್ನು ಈ ಪಂದ್ಯದಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಂದ ಸೂರ್ಯಕುಮಾರ್ ಕೇವಲ 8 ಎಸೆತಗಳಲ್ಲಿ 16 ರನ್ ಗಳಿಸಿದರು. ಸೂರ್ಯಕುಮಾರ್ ಗಾಯದಿಂದ ಬಳಲುತ್ತಿದ್ದಾರೆ ಎಂದು ಜಯವರ್ಧನೆ ತಿಳಿಸಿದ ಬಳಿಕ ಅವರ ಅಭಿಮಾನಿಗಳು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 220 ರನ್ ಗಳಿಸಿತು. ತಂಡದ ಪರ ನಾಯಕ ರಹಾನೆ (40 ಎಸೆತಗಳಲ್ಲಿ 67 ರನ್) ಮತ್ತು ಅಂಗ್‌ಕ್ರಿಶ್ ರಘುವಂಶಿ (29 ಎಸೆತಗಳಲ್ಲಿ 51 ರನ್) ಅರ್ಧಶತಕ ಗಳಿಸಿ ಮಿಂಚಿದರು. ಮುಂಬೈ ಬೌಲರ್‌ಗಳಲ್ಲಿ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಪಡೆದರು.
ಇದಾದ ಬಳಿಕ ಕೆಕೆಆರ್​ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು. ಮುಂಬೈ ಪರ ರಿಯಾನ್ ರಿಕಲ್ಟನ್ (43 ಎಸೆತಗಳಲ್ಲಿ 81 ರನ್​) ಮತ್ತು ರೋಹಿತ್ ಶರ್ಮಾ (38 ಎಸೆತಗಳಲ್ಲಿ 78 ರನ್​) ಅರ್ಧಶತಕ ಗಳಿಸಿದರು. ಕೆಕೆಆರ್ ಪರ ವೈಭವ್ ಅರೋರಾ, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).