ಸಿಎಸ್ಕೆ ಮಾಜಿ ಆಟಗಾರ ಸುರೇಶ್ ರೈನಾ
- ಮುಗಿದ ಐಪಿಎಲ್ 19ನೇ ಆವೃತ್ತಿಯ ಮೊದಲಾರ್ಧ
- ಐಪಿಎಲ್ ಟ್ರೋಫಿ ಎತ್ತಿಹಿಡಿಯಲು ಟಾಪ್ 4ರಲ್ಲಿ ಬಲಿಷ್ಠ ತಂಡಗಳು
- ಈ 2 ತಂಡಗಳು 2026ರ ಟ್ರೋಫಿ ಗೆಲ್ಲುವ ಚಾನ್ಸ್ ಇದೆ ಎಂದ ರೈನಾ
IPL 2026 Title: ಪ್ರಸಕ್ತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ನ ಫಸ್ಟ್ ಆಫ್ ಮುಕ್ತಾಯಗೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನಗಳಿಗೆ 10 ತಂಡಗಳ ಪೈಪೋಟಿಯ ಚಿತ್ರಣ ಅದಾಗಲೇ ಲಭಿಸಿದೆ. ಸನ್ರೈಸರ್ಸ್ ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಟಾಪ್ 4 ರಲ್ಲಿವೆ. ಇದರೊಟ್ಟಿಗೆ, ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇಆಫ್ ರೇಸ್ಗೆ ಲಗ್ಗೆಯಿಡಲು ಜಿದ್ದಾಜಿದ್ದಿ ನಡೆಸುತ್ತಿವೆ.
ಟೀಮ್ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರ ಆವೃತ್ತಿಯಲ್ಲಿ ಯಾವ ತಂಡಗಳು ಟ್ರೋಫಿ ಎತ್ತಿಹಿಡಿಯಲು ಯೋಗ್ಯ ಎಂಬುದರ ಕುರಿತು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಜಿಯೋ ಹಾಟ್ಸ್ಟಾರ್ನಲ್ಲಿ ಮಾತನಾಡಿದ ಅವರು, ಈ ವರ್ಷವು ಆರ್ಸಿಬಿಯೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿ ಎಂದರು.
ಕಳೆದ ವರ್ಷ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಗೆದ್ದ ಆರ್‌ಸಿಬಿಗೆ 19ನೇ ಆವೃತ್ತಿಯಲ್ಲಿ ಇನ್ನಷ್ಟು ಬಲ ತುಂಬಿದೆ. ಈ ವರ್ಷದಲ್ಲಿ ಮೊದಲ ಪಂದ್ಯದಿಂದ ಅತ್ಯುತ್ತಮ ಹಾಗೂ ಗಮನ ಸೆಳೆಯುವಂತ ಕ್ರಿಕೆಟ್ ಅನ್ನು ಆರ್‌ಸಿಬಿ ಆಡುತ್ತಿದೆ. 9 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಪಡೆಗೆ 2026ರ ಟ್ರೋಫಿ ಗೆಲ್ಲಲು ಒಳ್ಳೆಯ ಅವಕಾಶವಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಉತ್ತಮ ಆಲ್ರೌಂಡ್ ಆಟವನ್ನು ಆರ್‌ಸಿಬಿ ಕಾಪಾಡಿಕೊಂಡು ಬಂದಿದೆ. ಜೊತೆಗೆ ರಜತ್ ಪಾಟಿದಾರ್ ಅವರ ನಾಯಕತ್ವ ಉತ್ತಮವಾಗಿದೆ ಎಂದರು.
ಆರ್‌ಸಿಬಿ ಆಡುವ ಪ್ರತಿ ಪಂದ್ಯವನ್ನು ನೋಡಿದರೆ, ಅವರ ಬೌಲಿಂಗ್ ಯೂನಿಟ್ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಇದು ಕೇವಲ 240 ಅಥವಾ 250 ರನ್ಗಳ ಬೃಹತ್ ಸ್ಕೋರ್ ಗಳಿಸುವುದರ ಬಗ್ಗೆ ಮಾತ್ರವಲ್ಲ, ಬ್ಯಾಟಿಂಗ್ ಮಾಡುವ ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ನನಗೆ ಆರ್‌ಸಿಬಿ ಟ್ರೋಫಿಯನ್ನು ಗೆಲ್ಲುವ ಎಲ್ಲ ಅರ್ಹತೆ ಮತ್ತು ಸಾಧ್ಯತೆಗಳಿವೆ ಎಂದು ಅನಿಸುತ್ತದೆ ಎಂದರು.
ಇನ್ನೊಂದು ತಂಡ ರಾಜಸ್ಥಾನ್ ರಾಯಲ್ಸ್ (RR). ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಆವೃತ್ತಿಯನ್ನು ಗೆಲ್ಲುವ ಉತ್ತಮ ಅವಕಾಶ ರಿಯಾನ್ ಪರಾಗ್ ಪಡೆಗೂ ಇದೆ. ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಪರಾಗ್ ಅವರಂತಹ ಯುವ ಪ್ರತಿಭೆಗಳು ಮತ್ತು ಜೋಫ್ರಾ ಆರ್ಚರ್, ರವಿ ಬಿಷ್ಣೋಯ್ ಅವರ ಅತ್ಯುತ್ತಮ ಪ್ರದರ್ಶನ ತಂಡದ ಬಲಿಷ್ಠತೆಯನ್ನು ತೋರಿಸಿದೆ. ಹೀಗಾಗಿ, 18 ವರ್ಷಗಳ ಬಳಿಕ ತಮ್ಮ ಎರಡನೇ ಪ್ರಶಸ್ತಿ ಗೆಲ್ಲಲು ಆರ್ಆರ್ಗೆ ಚಾನ್ಸ್ ಇದೆ ಎಂದು ರೈನಾ ಹೇಳಿದರು,(ಏಜೆನ್ಸೀಸ್).