ಟಿ20 ವಿಶ್ವಕಪ್ 2026 ಸೆಮಿಫೈನಲ್
- ಟಿ20 ವಿಶ್ವಕಪ್‌ನ ಸೂಪರ್-8 ಹಂತ ಮುಕ್ತಾಯ
- ಭಾರತ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಅಖಾಡಕ್ಕೆ
- ಎರಡು ಸೆಮಿಫೈನಲ್ ಪಂದ್ಯಗಳ ದಿನಾಂಕಗಳು ಹೀಗಿವೆ
ನವದೆಹಲಿ: ನಿನ್ನೆ (ಮಾ.01) ಕೋಲ್ಕತದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ವಿಶ್ವಕಪ್ ಟೂರ್ನಿಯ ಕೊನೆಯ ಸೂಪರ್-8 ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಸೆಮೀಸ್ಗೆ ಪ್ರವೇಶ ಪಡೆಯಿತು.
ವೆಸ್ಟ್ ಇಂಡೀಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್, ಕಡೆಗೂ ತಮ್ಮ ತಂಡದ ಸೆಮೀಸ್ ಕನಸನ್ನು ಏಕಾಂಗಿಯಾಗಿ ಈಡೇರಿಸುವಲ್ಲಿ ಯಶಸ್ವಿಯಾದರು. ಒಟ್ಟು 20 ತಂಡಗಳು ಈ ಟೂರ್ನಿ ಪ್ರವೇಶಿಸಿದ್ದರೆ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಭಾರತ ಮತ್ತು ಇಂಗ್ಲೆಂಡ್ ಮಾತ್ರ ತಮ್ಮ ಸೆಮಿಫೈನಲ್ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾದವು.
ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದ ಬೆನ್ನಲ್ಲೇ ಸೆಮಿಫೈನಲ್ ಮತ್ತು ಫೈನಲ್ ಮ್ಯಾಚ್ಗಳು ಭಾರತದಲ್ಲಿ ನಡೆಯಲಿವೆ. ಸೆಮೀಸ್ ಕದನದಲ್ಲಿ ನಾಲ್ಕು ತಂಡಗಳಿದ್ದು, ಸ್ಥಳಗಳು ಮತ್ತು ಪರಸ್ಪರ ಯಾವ ತಂಡಗಳು ಎದುರಾಳಿಗಳಾಗಿ ಅಖಾಡಕ್ಕಿಳಿಯುತ್ತಾರೆ ಎಂಬುದರ ಸಂಪೂರ್ಣ ವಿವರ ಈ ಕೆಳಕಂಡಂತಿದೆ ಗಮನಿಸಿ.
ಭಾರತಕ್ಕೆ ಯಾರು ಪೈಪೋಟಿ?
ಮೊದಲ ಸೆಮಿಫೈನಲ್ ಪಂದ್ಯ ಇದೇ ಬುಧವಾರ (ಮಾ.04) ನಡೆಯಲಿದೆ. ಈ ಪಂದ್ಯದಲ್ಲಿ, ಗ್ರೂಪ್ 1ರಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಆಫ್ರಿಕಾ, ಗ್ರೂಪ್ 2ರಲ್ಲಿ ಎರಡನೇ ಸ್ಥಾನ ಅಲಂಕರಿಸಿದ ನ್ಯೂಜಿಲೆಂಡ್‌ನೊಂದಿಗೆ ಸೆಣಸಲಿದೆ. ಇನ್ನು ಈ ಮ್ಯಾಚ್ ಕೋಲ್ಕತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಸ್ಟೇಡಿಯಂನಲ್ಲಿ ಫೈನಲ್ ಕಾಳಗ
ಇನ್ನು ಗ್ರೂಪ್ 1ರಲ್ಲಿ ಎರಡನೇ ಸ್ಥಾನ ಪಡೆದ ಭಾರತ, ಗುರುವಾರ (ಮಾ.05) ಗ್ರೂಪ್ 2ರಲ್ಲಿ ಅಗ್ರಸ್ಥಾನ ಪಡೆದ ಇಂಗ್ಲೆಂಡ್ ತಂಡದೊಂದಿಗೆ ಫೈನಲ್ಗೇರಲು ಸೆಣಸಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎರಡೂ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭಗೊಳ್ಳಲಿವೆ. ಯಾವ ಎರಡು ತಂಡಗಳು ಫೈನಲ್ಗೆ ಲಗ್ಗೆಯಿಡಲಿದೆಯೋ, ಆ ಟೀಮ್ಗಳ ಅಂತಿಮ ಹಣಾಹಣಿಯು ಮಾರ್ಚ್ 8ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ,(ಏಜೆನ್ಸೀಸ್).