ಸನ್ರೈಸರ್ಸ್ ಲೀಡ್ಸ್ ಕೋಚ್ ಡೆನಿಯಲ್ ವೆಟೋರಿ
- ಎಸ್ಆರ್ಎಚ್ ಸಹ ಮಾಲೀಕರಾದ ಕಾವ್ಯಾ ಮಾರನ್ ನಿರ್ಧಾರಕ್ಕೆ ಛೀಮಾರಿ
- ಸನ್ರೈಸರ್ಸ್ ಲೀಡ್ಸ್ ತಂಡಕ್ಕೆ ಪಾಕ್ ಆಟಗಾರನ ಖರೀದಿ ವಿರುದ್ಧ ಆಕ್ರೋಶ
- ಕ್ರಿಕೆಟ್ ಪ್ರಿಯರ ಛೀಮಾರಿ ನಡುವೆ ಕೋಚ್ ಸಮರ್ಥನೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಸಹ ಒಡತಿ ಕಾವ್ಯ ಮಾರನ್ ವಿರುದ್ಧ ಸದ್ಯ ಭಾರತೀಯ ಕ್ರಿಕೆಟ್ ಪ್ರಿಯರು ತೀವ್ರ ಕಿಡಿಕಾರುತ್ತಿದ್ದಾರೆ. ಇದೇ ಮಾರ್ಚ್ 28ರಿಂದ ಆರಂಭವಾಗಲಿರುವ ಐಪಿಎಲ್ 19ನೇ ಆವೃತ್ತಿಯಿಂದ ಅವರ ತಂಡವನ್ನು ಕಿತ್ತುಬಿಸಾಡಿ ಎಂದು ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ. ಆ ಮಟ್ಟಿಗಿನ ಆಕ್ರೋಶ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ, ಇಷ್ಟೊಂದು ಆಕ್ರೋಶವೇಕೆ ಎಂಬುದರ ಕಾರಣ ಹೀಗಿದೆ ನೋಡಿ.
ನಿನ್ನೆ (ಮಾ.12) ಇಂಗ್ಲೆಂಡ್ನಲ್ಲಿ ನಡೆಯಲಿರುವ ಈ ಬಾರಿಯ ದಿ ಹಂಡ್ರೆಡ್ 2026ರ ಟಿ20 ಲೀಗ್ನ ಹರಾಜು ಪ್ರಕ್ರಿಯೆ ನಡೆಯಿತು. ಈ ಆಕ್ಷನ್ನಲ್ಲಿ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕ್ ಆಟಗಾರರ ಮೇಲೆ ಕಣ್ಣಿಟ್ಟಿದ್ದಲ್ಲದೇ, ಸ್ಪಿನ್ನರ್ ಅಬ್ರಾರ್ ಅಹ್ಮದ್ನನ್ನು 2.34 ಕೋಟಿ (190,000 ಪೌಂಡ್‌ಗಳು) ರೂ.ಗೆ ಖರೀದಿಸಿತು. ಈ ಒಂದು ನಡೆಯಿಂದ ತೀವ್ರ ಕೆಂಡಮಂಡಲಗೊಂಡಿರುವ ಭಾರತೀಯ ಕ್ರಿಕೆಟ್ ಫ್ಯಾನ್ಸ್, ಮೊದಲು ಐಪಿಎಲ್ನಿಂದ ಕಾವ್ಯ ತಂಡವನ್ನು ತೆಗೆದುಹಾಕಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ನೆಟ್ಟಿಗರ ವಿಪರೀತ ವಿರೋಧ ಮತ್ತು ಟೀಕೆಗಳ ಬೆನ್ನಲ್ಲೇ ಸನ್ರೈಸರ್ಸ್ ಲೀಡ್ಸ್ ತಂಡದ ಅಧಿಕೃತ ಖಾತೆ ಬ್ಲಾಕ್ ಆಗಿದೆ. ಭಾರತೀಯ ಫ್ರಾಂಚೈಸಿಯಾಗಿ ಗುರುತಿಸಿಕೊಂಡಿರುವ ಎಸ್ಆರ್ಎಚ್, ಅದೇಗೆ ನಮ್ಮ ವೈರಿ ರಾಷ್ಟ್ರದ ಕ್ರಿಕೆಟಿಗರನ್ನು ಖರೀದಿ ಮಾಡಿತು ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿಯವರೆಗೆ ಕಾವ್ಯ ಮಾರನ್ ಈ ಕುರಿತಂತೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಫ್ರಾಂಚೈಸಿ ಕೋಚ್, ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಡೆನಿಯಲ್ ವೆಟೋರಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಬಿಬಿಸಿ ಸ್ಫೋರ್ಟ್ ಪ್ರಶ್ನೆಗೆ ಉತ್ತರಿಸಿದ ಕೋಚ್, ಸ್ಪಿನ್ನಲ್ಲಿ ಹಲವು ವೇರಿಯಷನ್ ಮಾಡುವ ಕಲೆ ಅಬ್ರಾರ್ನಲ್ಲಿದೆ. ಅದರಲ್ಲೂ ಒಬ್ಬ ದೇಶಿಯ ಆಟಗಾರನಾಗಿ. ಪಾಕ್ ಆಟಗಾರರ ಖರೀದಿಯಿಂದ ಏನಾದರೂ ಸಮಸ್ಯೆ ಆಗುತ್ತೆ ನಮಗೆ ಮುಂಚೆಯೇ ಒಂದು ಕಲ್ಪನೆ ಇತ್ತು. ಆದರೆ, ನಮ್ಮ ಮುಂದೆ ಬೇರೆ ದಾರಿ ಇರಲಿಲ್ಲ. ಮುಖ್ಯವಾಗಿ, ಅಬ್ರಾರ್ ಮೇಲೆ ಫ್ರಾಂಚೈಸಿ ಮೊದಲೇ ಖರೀದಿಸಲು ಕಣ್ಣಿಟ್ಟಿತ್ತು. ಅಷ್ಟಕ್ಕೂ, ತಂಡಕ್ಕೆ ಪಾಕ್ ಆಟಗಾರರನ್ನು ಖರೀದಿ ಮಾಡಬಾರದು ಎಂಬ ಯಾವುದೇ ಮಾಹಿತಿಯೂ ನಮಗೆ ಸಿಕ್ಕಿಲ್ಲ ಎಂದಿದ್ದಾರೆ,(ಏಜೆನ್ಸೀಸ್).