ಬೌಂಡರಿ ಬಳಿ ಆವೇಶ್ ಖಾನ್ ಎಡವಟ್ಟು: ಬಿಸಿಸಿಐಗೆ ದೂರು ನೀಡಲು ಮುಂದಾದ SRH, LSG ಗೆಲುವು ಸೋಲಾಗುತ್ತಾ? Avesh Khan
- ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೋಲುಂಡ ಸನ್‌ರೈಸರ್ಸ್ ಹೈದರಾಬಾದ್
- ಎಲ್ಎಸ್ಜಿ ಆಟಗಾರ ಆವೇಶ್ ಖಾನ್ ತೋರಿದ ವರ್ತನೆಯ ವಿರುದ್ಧ ಎಸ್ಆರ್ಎಚ್ ಅಸಮಾಧಾನ
- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ದೂರು ನೀಡಲು ಮುಂದಾದ ಹೈದರಾಬಾದ್ ತಂಡ
Avesh Khan : ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್ನಲ್ಲಿ ಈವರೆಗೂ ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಗೆಲವು ಸಾಧಿಸಿ, ಎರಡರಲ್ಲಿ ಸೋಲುಂಡಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ವಿರುದ್ಧ ಅಂತಿಮ ಹಂತದಲ್ಲಿ ಸೋಲುಂಡಿತು. ಇದರಿಂದ ಬೇಸರಗೊಂಡಿರುವ ಎಸ್ಆರ್ಎಚ್, ಎಲ್ಎಸ್ಜಿ ಆಟಗಾರ ಆವೇಶ್ ಖಾನ್ ತೋರಿದ ವರ್ತನೆಯ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ದೂರು ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಭಾನುವಾರ (ಏಪ್ರಿಲ್ 5) ಲಖನೌ ಸೂಪರ್ ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಹೈದರಾಬಾದ್ನ ಉಪ್ಪಾಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಈ ಪಂದ್ಯದ ಕೊನೆಯ ಓವರ್‌ನಲ್ಲಿ ಆವೇಶ್ ಖಾನ್ ವರ್ತಿಸಿದ ರೀತಿ ವಿವಾದಾತ್ಮಕವಾಗಿತ್ತು. ಕೊನೆಯ ಓವರ್ ಅನ್ನು ಎಸ್ಆರ್ಎಚ್ ಬೌಲರ್ ಜಯದೇವ್ ಉನಾದ್ಕತ್ ಎಸೆದರು. ಈ ಓವರ್‌ನ ಐದನೇ ಎಸೆತದಲ್ಲಿ ಲಖನೌ ನಾಯಕ ರಿಷಭ್ ಪಂತ್ ಲಾಂಗ್ ಆಫ್ ಕಡೆಗೆ ಶಾಟ್ ಹೊಡೆದರು. ಈ ವೇಳೆ ಚೆಂಡು ಬೌಂಡರಿ ಗೆರೆ ದಾಟುವ ಮೊದಲೇ ಡಗೌಟ್‌ನಲ್ಲಿದ್ದ ಆವೇಶ್ ಖಾನ್ ಚೆಂಡನ್ನು ತಮ್ಮ ಬ್ಯಾಟ್‌ನಿಂದ ಹೊಡೆದು ಮತ್ತೆ ಮೈದಾನಕ್ಕೆ ಕಳುಹಿಸಿದರು.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಆವೇಶ್ ಖಾನ್ ವರ್ತನೆಯನ್ನು ಖಂಡಿಸಿದರು. ನಿಯಮದ ಪ್ರಕಾರ ಫೀಲ್ಡಿಂಗ್ ತಂಡದವರನ್ನು ಹೊರತುಪಡಿಸಿ ಬೇರೆ ಯಾರೂ ಚೆಂಡಿನ ಚಲನೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಇಲ್ಲಿ ಬ್ಯಾಟಿಂಗ್ ತಂಡದವರು (LSG) ಚೆಂಡಿನ ಹಾದಿಯನ್ನು ಬದಲಿಸಿರುವುದು ನಿಯಮ 20.1 (ಡೆಡ್ ಬಾಲ್) ಮತ್ತು 41 (ಅನಪೇಕ್ಷಿತ ಆಟ) ರ ಅಡಿಯಲ್ಲಿ ತಪ್ಪಾಗುತ್ತದೆ. ಒಂದು ವೇಳೆ ಅಂಪೈರ್‌ಗಳು ಇದನ್ನು ಮೊದಲೇ ಗಮನಿಸಿದ್ದರೆ ಲಖನೌ ತಂಡಕ್ಕೆ 5 ರನ್‌ಗಳ ದಂಡ ವಿಧಿಸಲಾಗುತ್ತಿತ್ತು. ಒಂದು ವೇಳೆ ಈ ರೀತಿ ಆಗಿದ್ದರೆ, ಆಗ ಲಖನೌ ತಂಡಕ್ಕೆ ಗೆಲ್ಲಲು ಕೊನೆಯ 2 ಎಸೆತಗಳಲ್ಲಿ 6 ರನ್ ಗಳಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು.
ಆದರೆ, ವಾಸ್ತವವಾಗಿ ಅಲ್ಲಿ ಯಾವುದೇ ಫೀಲ್ಡರ್ ಇರಲಿಲ್ಲ ಮತ್ತು ಬೌಂಡರಿಯನ್ನು ನಿರ್ಬಂಧಿಸುವ ಅಥವಾ ಫೀಲ್ಡರ್‌ಗೆ ಅಡ್ಡಿಪಡಿಸುವ ಪ್ರಯತ್ನವಾಗಿರಲಿಲ್ಲ ಎಂದು ಭಾವಿಸಿದ ಅಂಪೈರ್‌ಗಳು ಚೆಂಡನ್ನು ಬೌಂಡರಿ ನೀಡಿದರು. ಇದರಿಂದ ಲಖನೌ ತಂಡ ಅಂತಿಮವಾಗಿ ಗೆಲುವು ಕಂಡಿತು.
ಎಸ್ಆರ್ಎಚ್ ಅಸಮಾಧಾನ
ಆದರೆ, ಪ್ರಸಕ್ತ ಐಪಿಎಲ್ನಲ್ಲಿ ನಡೆದ ಕೆಲವು ಘಟನೆಗಳಿಂದ ಎಸ್ಆರ್ಎಚ್ ಅಸಮಾಧಾನಗೊಂದಿದೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ರೊಮಾರಿಯೋ ಶೆಫರ್ಡ್ ಬೌಲಿಂಗ್ನಲ್ಲಿ ಹೆನ್ರಿಕ್ ಕ್ಲಾಸೆನ್ ಔಟಾದರು. ಆದರೆ, ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಬಗ್ಗೆ ಸಾಕಷ್ಟು ಗೊಂದಲಗಳು ಉಂಟಾದವು. ಇದಲ್ಲದೆ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಔಟ್ ಆದ ರೀತಿಯೂ ವಿವಾದಕ್ಕೆ ಗುರಿಯಾಯಿತು. ಇದೀಗ ಎಲ್ಎಸ್ಜಿ ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ ವರ್ತನೆಯನ್ನು ಅಂಪೈರ್‌ಗಳು ಗಮನಿಸಲಿಲ್ಲ. ಈ ಘಟನೆಗಳಿಂದ ಅಂಪೈರ್ಗಳ ವಿರುದ್ಧ ಅಸಮಾಧಾನಗೊಂದಿರುವ ಎಸ್ಆರ್ಎಚ್ ಬಿಸಿಸಿಐಗೆ ಪತ್ರ ಬರೆಯಲು ಮುಂದಾಗಿದೆ ಎಂಬ ವರದಿ ಇದೆ, (ಏಜೆನ್ಸೀಸ್).