ನವದೆಹಲಿ: ಪ್ರಸಕ್ತ ಆತಿಥೇಯ ಕಿವೀಸ್ ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಭಾರಿ ಗೊಂದಲ, ಅಸಮಾಧಾನಗಳು ಭುಗಿಲೆದ್ದಿವೆ. ಹೆಚ್ಚುವರಿ ವಿಕೆಟ್ ಕಬಳಿಸುವ ಸಾಮರ್ಥ್ಯ ಮತ್ತು ಫಿಟ್ನೆಸ್ ಇದ್ದರೂ ಸಹ ಮೊಹಮ್ಮದ್ ಸಿರಾಜ್ (Mohammed Siraj )ರನ್ನು ಕಡೆಗಣಿಸುತ್ತಿರುವ ಮ್ಯಾನೇಜ್ಮೆಂಟ್, ಇದೀಗ ಇನ್ನೊಂದು ರೀತಿಯಲ್ಲಿ ಅವರನ್ನು ಕರೆದುಕೊಳ್ಳುವ ಚಾನ್ಸ್ ಸಿಕ್ಕರೂ ಕೈಬಿಟ್ಟ ರೀತಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮತ್ತು ಹರ್ಷ ಭೋಗ್ಲೆ ತೀವ್ರ ಕಿಡಿಕಾರಿದ್ದಾರೆ.
ಇಂಜುರಿ ಸಮಸ್ಯೆಯಿಂದ ಬಳಲುತ್ತಿದ್ದ ತಂಡದ ವೇಗಿ ಆಕಾಶ್ ದೀಪ್ ಬದಲಿಗೆ ಮತ್ತೊಬ್ಬ ವೇಗಿಯನ್ನು ಕರೆದುಕೊಳ್ಳುವ ಕನ್ಕಷನ್ ಸಬ್ ಆಯ್ಕೆ ಮ್ಯಾನೇಜ್ಮೆಂಟ್ಗೆ ಸಿಕ್ಕಿತ್ತು. ಆದರೆ, ಈ ಅವಕಾಶವನ್ನು ಸಿರಾಜ್‌ಗೆ ಮೀಸಲಿಡದ ಕೋಚ್ ಗೌತಮ್ ಗಂಭೀರ್ ನೇತೃತ್ವದ ತಂಡವು, ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರನ್ನು ಕರೆದುಕೊಂಡಿದೆ. ಈ ನಿರ್ಧಾರಕ್ಕೆ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಿರಾಜ್ರನ್ನೇ ಆಯ್ಕೆ ಮಾಡಬೇಕಿತ್ತು. ಫಿಟ್ನೆಸ್ ಇದ್ದರೂ ಆತನನ್ನು ಕೈಬಿಡುವ ಉದ್ದೇಶ ಏನಿದೆ ಎಂದು ಪ್ರಶ್ನಿಸಿದ್ದಾರೆ.
ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಆಕಾಶ್ ದೀಪ್ ಬ್ಯಾಟಿಂಗ್ ಮಾಡುವ ವೇಳೆ ಹೆಲ್ಮೆಟ್‌ಗೆ ಹಲವು ಬಾರಿ ಚೆಂಡು ಬಡಿದಿತ್ತು. ಬಳಿಕ ಅವರಿಗೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಂದ್ಯದಿಂದ ಹೊರಗುಳಿಯುವಂತೆ ವೈದ್ಯಕೀಯ ತಂಡ ಸೂಚಿಸಿತು. ಹೀಗಾಗಿ, ಅವರ ಬದಲಿಗೆ ಕನ್ಕಷನ್ ಸಬ್ ಆಯ್ಕೆಯಡಿ ಪ್ರಸಿದ್ಧ್ ಕೃಷ್ಣ ಅವರನ್ನು ಕಣಕ್ಕಿಳಿಸಲಾಯಿತು. ಆದರೆ, ಅದೇ ತಂಡದಲ್ಲಿದ್ದ ಸಿರಾಜ್‌ಗೆ ಮತ್ತೊಮ್ಮೆ ಅವಕಾಶ ಕೊಡದೆ ಬೆಂಚ್ನಲ್ಲಿ ಸುಮ್ಮನೆ ಕೂರಿಸಲಾಯಿತು.
ಈ ನಿರ್ಧಾರವನ್ನು ಪ್ರಶ್ನಿಸಿರುವ ಗವಾಸ್ಕರ್, ಸಿರಾಜ್ರನ್ನು ಕಣಕ್ಕಿಳಿಸಬೇಕಿತ್ತು. ನ್ಯೂಜಿಲೆಂಡ್ ಬ್ಯಾಟರ್‌ಗಳು ಈಗಾಗಲೇ ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್ ಎದುರಿಸಿದ್ದಾರೆ. ಅವರ ಸಾಮರ್ಥ್ಯ ಮತ್ತು ಬೌಲಿಂಗ್ ಶೈಲಿಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಇಲ್ಲಿ, ಸಿರಾಜ್ ಈ ಸರಣಿಯಲ್ಲಿ ಇನ್ನೂ ಆಡಿಲ್ಲ. ಹೀಗಾಗಿ, ಅವರನ್ನು ಆಡಿಸಿದರೆ, ನ್ಯೂಜಿಲೆಂಡ್ ಬ್ಯಾಟರ್‌ಗಳಿಗೆ ಹೊಸ ಸವಾಲು ಎದುರಾಗುತ್ತಿತ್ತು ಎಂದು ಹೇಳಿದ್ದಾರೆ.
ಪ್ರಸಿದ್ಧ್ ಕೃಷ್ಣ ಮೊದಲ ಟೆಸ್ಟ್‌ನಲ್ಲೂ ಆಡಿದ್ದಾರೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ 100 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 23 ರನ್‌ಗೆ ಎರಡು ವಿಕೆಟ್ ಕಬಳಿಸಿದ್ದರು. ಆದರೂ ಅವರ ಬೌಲಿಂಗ್‌ನಿಂದ ನ್ಯೂಜಿಲೆಂಡ್ ಬ್ಯಾಟರ್‌ಗಳು ಹೆಚ್ಚು ಒತ್ತಡಕ್ಕೆ ಸಿಲುಕಿಲ್ಲ. ಸಿರಾಜ್‌ಗೆ ಈ ಹಿಂದೆ ಪಂದ್ಯವಾಡಿದ ಅನುಭವ ಮತ್ತು ಉತ್ತಮ ಲಯವಿರುವುದರಿಂದ ಅವರನ್ನೇ ಆಯ್ಕೆ ಮಾಡುವುದು ಸೂಕ್ತವಾಗಿತ್ತು ಎಂದು ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವಿಚಾರವಾಗಿ ಹೆಸರಾಂತ ಕ್ರಿಕೆಟ್ ಕಮೆಂಟೇಟರ್ ಹರ್ಷ ಭೋಗ್ಲೆ ಮಾತನಾಡಿ, ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡುವ ಮೂಲಕ ಸಿರಾಜ್ರನ್ನು ಸಂಪೂರ್ಣವಾಗಿ ಕಡೆಗಣಿಸಿರುವಂತೆ ಕಾಣುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದ ಆಕಾಶ್ ದೀಪ್ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ನಷ್ಟವೇ ನಿಜ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.
2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸಿರಾಜ್ ಮುಂಚೂಣಿಯಲ್ಲಿದ್ದಾರೆ. 11 ಪಂದ್ಯಗಳಿಂದ 43 ವಿಕೆಟ್ ಪಡೆದಿರುವ ಸ್ಟಾರ್ ವೇಗಿಗೆ ಇದೀಗ ತಂಡದಲ್ಲಿ ಸ್ಥಾನ ಕೊಡಲು ಮ್ಯಾನೇಜ್ಮೆಂಟ್ ಮೀನಾಮೇಷ ಎಣಿಸುತ್ತಿದೆ. ಅದರಲ್ಲೂ, ಸಾಕಷ್ಟು ಒತ್ತಡ ಮತ್ತು ಸಲಹೆಗಳು ಬಂದರೂ ಸಹ ಸಿರಾಜ್ರನ್ನು ಬೇಡ ಎನ್ನುತ್ತಿರುವ ಗಂಭೀರ್ ಉದ್ದೇಶ ಏನಿದೆ ಎಂಬುದು ಮಾತ್ರ ಯಾರಿಗೂ ತಿಳಿಯುತ್ತಿಲ್ಲ.
ಇತ್ತ ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದ್ದು, ಒಟ್ಟು 243 ರನ್‌ಗಳ ಮುನ್ನಡೆ ಸಾಧಿಸಿದೆ. ನಾಲ್ಕು ಮತ್ತು ಐದನೇ ದಿನ ಮಳೆಯ ಮುನ್ಸೂಚನೆ ಇರುವುದರಿಂದ, ಸೋಮವಾರ ಕಣಕ್ಕಿಳಿಯಲಿರುವ ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ವೇಗವಾಗಿ ರನ್ ಗಳಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಗಳು ಹೆಚ್ಚಿವೆ,(ಏಜೆನ್ಸೀಸ್).